ಶುಭ್ರತೆಗೆ ಮತ್ತೊಂದು ಹೆಸರೇ ಮಡಿವಾಳ. ಬಟ್ಟೆಗಳ ಮಲಿನವನ್ನು ಮಾತ್ರವಲ್ಲದೇ ಸಮಾಜದ ಮಲಿನವನ್ನೂ ತೊಳೆಯವ ಕೆಲಸವನ್ನು ಮಡಿವಾಳ ಮಾಚಿದೇವರು ಮಾಡಿದ್ದರು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶುಭ್ರತೆಗೆ ಮತ್ತೊಂದು ಹೆಸರೇ ಮಡಿವಾಳ. ಬಟ್ಟೆಗಳ ಮಲಿನವನ್ನು ಮಾತ್ರವಲ್ಲದೇ ಸಮಾಜದ ಮಲಿನವನ್ನೂ ತೊಳೆಯವ ಕೆಲಸವನ್ನು ಮಡಿವಾಳ ಮಾಚಿದೇವರು ಮಾಡಿದ್ದರು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.ನಗರದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಮಡಿವಾಳ ಸಮಾಜ ಸಂಘ ಸಹಯೋಗದಲ್ಲಿ ಏರ್ಪಡಿಸಿದ್ದ ಶ್ರೀ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, 12ನೇ ಶತಮಾನದಲ್ಲಿದ್ದ ಅಸಮಾನತೆ, ಅಸ್ಪೃಶ್ಯತೆ ತಾರತಮ್ಯವನ್ನು ಹೋಗಲಾಡಿಸಲು ಹೋರಾಟ ನಡೆಸಿದ ಶರಣರಲ್ಲಿ ಮಾಚಿದೇವರು ಕೂಡ ಅಗ್ರಗಣ್ಯರಾಗಿದ್ದು, ಶರಣರ ಮಲಿನ ಬಟ್ಟೆಗಳನ್ನು ಶುಚಿಗೊಳಿಸುವ ಜೊತೆಗೆ ಸಮಾಜದ ಮಲಿನವನ್ನೂ ತೊಳೆಯುತ್ತಾ ಸಮಾಜ ಸುಧಾರಣೆಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡರು ಎಂದು ತಿಳಿಸಿದರು.
ಸಮಾಜದಲ್ಲಿನ ಅಂಕು- ಡೊಂಕುಗಳನ್ನು ತಿದ್ದುತ್ತಾ ಸಮಾಜಕ್ಕಾಗಿಯೇ ತಮ್ಮ ಜೀವನ ಮುಡಿಪಾಗಿಟ್ಟರು. ಇಂತಹ ಶರಣರ, ವಚನಕಾರರ, ಸಾಧಕರ, ನಮ್ಮ ಸಮಾಜದ ಮಹಾನ್ ಚೇತನಗಳ ಜೀವನ ಚರಿತ್ರೆಯನ್ನು ಪಠ್ಯದಲ್ಲಿ ಸೇರ್ಪಡೆಗೊಳಿಸಬೇಕು. ನಮ್ಮದು ಸನಾತನ ಸಾಂಸ್ಕೃತಿಕ ರಾಷ್ಟ್ರ. ನಮ್ಮ ದೇಶದ ಹುಟ್ಟು ಯಾವಾಗ ಆಯಿತೆಂದು ಗೊತ್ತಿಲ್ಲ. ನಮ್ಮ ದೇಶಕ್ಕೆ ಸಾವೂ ಇಲ್ಲ. ದೇಶದ ಉಳಿವಿಗೆ ನಂಬಿಕೆಗಳು ಕಾರಣವಾಗಿದೆ ಎಂದರು.ತ್ಯಾಗರ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎ.ಎಂ.ನಾಗರಾಜ ಉಪನ್ಯಾಸ ನೀಡಿ ಮಾತನಾಡಿ, ದೇಶ ಸುಭೀಕ್ಷವಾಗಿರಲು ಜನರನ್ನು ಸರಿಪಡಿಸಬೇಕೆಂದು ಮಾಚಿದೇವರು ತಿಳಿಸಿದ್ದರು. ಕನಿಷ್ಟ ಶಿವ ಜ್ಞಾನ ಇರಬೇಕು. ಕಾಯಕಕ್ಕೆ ಮೊದಲ ಆದ್ಯತೆ ನೀಡಬೇಕೆಂದು ಹೇಳಿದ್ದರು ಕಾಯಕಯೋಗಿ ಮಾಚಿದೇವ. 12ನೇ ಶತಮಾನದಲ್ಲಿ ಹಿಪ್ಪರಗಿಯಲ್ಲಿ ಪರ್ವತಯ್ಯ ಮತ್ತು ಸುಜ್ಞಾನವ್ವ ದಂಪತಿಗೆ ಜನಿಸಿದ ಮಾಚಿದೇವರು, ಕೇವಲ ಬಟ್ಟೆಗಳ ಮಲಿನ ಮಾತ್ರವಲ್ಲ ಸಮಾಜದ ಕೊಳೆಯನ್ನು ತೆಗೆಯುವ ಕೆಲಸ ಮಾಡುತ್ತಿದ್ದರು. ಇವರ 345 ವಚನಗಳು ಲಭ್ಯವಿದ್ದು, ಅತ್ಯಂತ ಸರಳ ಭಾಷೆಯಲ್ಲಿ ರಚಿಸಿರುವ ಇವರ ವಚನಗಳು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುತ್ತವೆ ಎಂದರು.
ಶೂದ್ರರಿಗೆ ಶಿಕ್ಷಣ ದೊರಕಬಾರದೆಂಬ ಕಾಲಘಟ್ಟದಲ್ಲಿ ಅದನ್ನು ಮೀರಿ ಮಾಚಿದೇವರಿಗೆ ಶಿಕ್ಷಣ ನೀಡಿದವರು ಕ್ರಾಂತಿಕಾರಿ ಗುರು ಮಲ್ಲಿಕಾರ್ಜುನ ಸ್ವಾಮಿ. ಮಾಚಿದೇವರ ವ್ಯಾಸಂಗ- ಅಪಾರ ಜ್ಞಾನವನ್ನು ಅವಲೋಕಿಸಿದಾಗ ಉತ್ತಮ ಗುರುಗಳ ಬೋಧನೆ ಸಿಕ್ಕಿದ್ದು ಮನವರಿಕೆಯಾಗುತ್ತದೆ.ಪುಸ್ತಕದ ಜ್ಞಾನಕ್ಕಿಂತ ಅನುಭವದ ಜ್ಞಾನ ಲೇಸು ಎಂದು ಸಾರಿರುವ ಮಾಚಿದೇವರು, ಸಮಾಜದ ಅಂಕು ಡೊಂಕು ತಿದ್ದುವ ಕೆಲಸದ ಮತ್ತು ಕಾಯಕದ ಮೂಲಕ ಭಕ್ತಿ ತೋರುತ್ತಿದ್ದರು ಎಂದರು.
ಬಸವಣ್ಣನವರು ಸಹ ಮಾಚಿದೇವರಿಗೆ ಅರಿವಿನ ತಿರುಳು ಎಂದು ಬಣ್ಣಿಸಿದ್ದು, ಬಸವಣ್ಣನವರು ಸೇರಿದಂತೆ ಅನೇಕ ಶಿವಶರಣರು, ಕವಿಗಳು ಮಾಚಿದೇವರ ಬಗ್ಗೆ, ಅವರ ಕಾಯಕ ನಿಷ್ಟೆ ಕುರಿತು ವಚನ ಬರೆದಿದ್ದಾರೆ.ಶರಣರು ಕಲ್ಯಾಣದಿಂದ ಉಳುವಿಗೆ ಹೋದಾಗ ಅವರು ಶರಣರು ಬರೆದ ವಚನಗಳ ಹಸ್ತಪ್ರತಿಗಳನ್ನು ರಕ್ಷಿಸಲು ರಾಜ ಬಿಜ್ಜಳನ ಸೈನ್ಯದ ವಿರುದ್ಧ ವೀರಾವೇಶದಿಂದ ಹೋರಾಡಿದರು ಎಂದು ತಿಳಿಸಿದರು.
ಮಡಿವಾಳರು ಎಂದು ಎದೆ ತಟ್ಟಿ ಹೇಳಿಕೊಳ್ಳಬೇಕಿರುವ ನಮ್ಮ ಸಮಾಜ ಸಂಖ್ಯಾ ಬಲ ಇಲ್ಲದಿರುವ ಕಾರಣ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಕಾರಣ ಅಸ್ತಿತ್ವ ಇಲ್ಲದಂತಾಗಿದ್ದೇವೆ. ಸರ್ಕಾರ ನಮ್ಮ ಸಮಾಜಕ್ಕೆ ಒಂದು ಅಸ್ತಿತ್ವ, ಗುರುತು ನೀಡಬೇಕು. ಮಾಚಿದೇವರ ಚರಿತ್ರೆಯನ್ನು ಪಠ್ಯಪುಸ್ತಕದಲ್ಲಿ ಸೇರಿಸಬೇಕು ಎಂದು ಆಶಿಸಿದರು.ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮಾತನಾಡಿ, ಕ್ರಾಂತಿಕಾರಿ ಹೋರಾಟಗಾರರ, ವಚನಕಾರರ, ಮಹಾನ್ ಪುರುಷರ ಚರಿತ್ರೆಯನ್ನು ಶಿಕ್ಷಣದಲ್ಲಿ ಅಳವಡಿಸಬೇಕು. ಆಗ ಪರಿಣಾಮಕಾರಿಯಾಗಿ ಅವರ ಜೀವನ ಚರಿತ್ರೆ ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದರು.
ಜವಳಿ ಮೂಲ ಸೌಲಭ್ಯ ಅಭಿವೃದ್ಧಿ (ವಿದ್ಯುತ್ ಮಗ್ಗಗಳು) ನಿಗಮದ ಅಧ್ಯಕ್ಷ ಕೆ.ಚೇತನ್ ಮಾತನಾಡಿದರು.ಕಾರ್ಯಕ್ರಮದಲ್ಲಿ ಶಿವಮೊಗ್ಗ ತಹಸೀಲ್ದಾರ್ ರಾಜೀವ್, ಜಿಲ್ಲಾ ಮಡಿವಾಳ ಸಮಾಜ ಸಂಘದ ಅಧ್ಯಕ್ಷ ಎಚ್.ಎಸ್. ಸದಾಶಿವಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ಸಮಾಜದ ಮುಖಂಡರು ಹಾಜರಿದ್ದರು.