ಸಾರಾಂಶ
ಸಿದ್ದಾಪುರ: ಸಮಾಜಲ್ಲಿನ ಮೇಲು- ಕೀಳು ಎಂಬ ತಾರತಮ್ಯದಿಂದ ಬದುಕು ದುಸ್ತರವಾಗಿದ್ದ ಆ ಸಮಯದಲ್ಲಿ ಬಸವಾದಿ ಶರಣರು ಸಮಾನತೆಯ ಸಂದೇಶ ಸಾರಿದರು. ವಚನ ಸಾಹಿತ್ಯದಿಂದ ಸಮಾಜದ ಅನಿಷ್ಟಗಳನ್ನು ಹೋಗಲಾಡಿಸಿದವರು ಮಾಚಿದೇವರು ಎಂದು ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ತಿಳಿಸಿದರು.
ಶನಿವಾರ ತಾಲೂಕು ಆಡಳಿತ ಸಭಾಭವನದಲ್ಲಿ ತಾಲೂಕು ಆಡಳಿತ, ತಾಪಂ ಹಾಗೂ ಪಪಂ ಸಹಯೋಗದಲ್ಲಿ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಾಚಿದೇವರಿಂದ ಬಸವಾದಿ ಶರಣರ ವಚನಗಳ ಭಂಡಾರವನ್ನು ಓದುವಂತಾಗಿದೆ. ವೀರಭದ್ರ ದೇವರ ಅವತಾರ ಪುರುಷ, ದೈವೀ ಸಂಭೂತ ಮಾಚಿದೇವರ ಆಚಾರ ವಿಚಾರಗಳನ್ನು ಜನತೆ ಮೈಗೂಡಿಸಿಕೊಳ್ಳಬೇಕು ಎಂದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ದೇವರಾಜ ಹಿತ್ತಲಕೊಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾಚಿದೇವರ ವಿಚಾರಧಾರೆಗಳು ಮಡಿವಾಳ ಸಮುದಾಯದಕ್ಕೆ ಮಾತ್ರ ಸೀಮಿತವಾಗಿರದೆ ಎಲ್ಲ ಸಮುದಾಯದವರಿಗೂ ಅವಶ್ಯಕತೆ ಇದೆ. ಎಲ್ಲ ಸಮುದಾಯದ ಗುರುಗಳ ಜಯಂತಿ ಕಾರ್ಯಕ್ರಮಗಳಲ್ಲಿ ಎಲ್ಲ ಸಮುದಾಯದವರು ಭಾಗವಹಿಸಬೇಕು. ಅಂದಾಗ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ ಎಂದರು.ಕೋಲಸಿರ್ಸಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಮಂಜಪ್ಪ ಎಂ.ಜಿ. ಉಪನ್ಯಾಸ ನೀಡಿದರು. ನಾಮಧಾರಿ ಸಮಾಜದ ಉಪಾಧ್ಯಕ್ಷ ಕೆ.ಜಿ. ನಾಗರಾಜ, ಹವ್ಯಕ ಮಹಾಮಂಡಲ ಅಧ್ಯಕ್ಷ ಮಹೇಶ ಭಟ್ ಮಾತನಾಡಿದರು.
ತಾಲೂಕು ಮಡಿವಾಳ ಸಮಾಜದ ಅಧ್ಯಕ್ಷ ಪಿ.ಬಿ. ಹೊಸೂರ, ಲಿಂಗಾಯತ ಸಮಾಜದ ಸಿ.ಎಸ್. ಗೌಡರ್, ಪಪಂ ಉಪಾಧ್ಯಕ್ಷ ವಿನಯ್ ಹೊನ್ನೆಗುಂಡಿ ಉಪಸ್ಥಿತರಿದ್ದರು.ಮೈಸೂರು ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗದಲ್ಲಿ ಬಂಗಾರದ ಪದಕ ಹಾಗೂ ಸ್ನಾತಕೋತ್ತರ ಪದವಿ ಪಡೆದ ಪಲ್ಲವಿ ಗೋಪಾಲ್ ಅಪ್ಪಿನಬೈಲ್, ರಾಜ್ಯಮಟ್ಟದ ವಿಶೇಷಚೇತನ ಕ್ರೀಡಾಕೂಟದ ಗುಂಡು ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಸ್ವಪ್ನಾ ಪಾಂಡುರಂಗ ನಾಯ್ಕ ಅರೇಂದೂರ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಹಲವಾರು ವರ್ಷಗಳಿಂದ ಕಾಯಕ ಕಾರ್ಯ ನಿರ್ವಹಿಸುತ್ತಿರುವ ವೆಂಕಟೇಶ ಕೊಂಡ್ಲಿ, ಜಿಲ್ಲಾಡಳಿತದಿಂದ ಜಿಲ್ಲಾ ಮಟ್ಟದ ಸರ್ವೋತ್ತಮ ಅಧಿಕಾರಿ ಪ್ರಶಸ್ತಿ ಪುರಸ್ಕೃತರಾದ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದೇವರಾಜ ಹಿತ್ತಲಕೊಪ್ಪ, ರಾಜ್ಯಮಟ್ಟದ ಉತ್ತಮ ಕಂದಾಯ ಅಧಿಕಾರಿ ಪ್ರಶಸ್ತಿ ಪುರಸ್ಕೃತ ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಹಾಗೂ ಹಲವರನ್ನು ಗೌರವಿಸಲಾಯಿತು.
ಪಪಂ ನಾಮನಿರ್ದೇಶತ ಸದಸ್ಯ ಕೆ.ಟಿ. ಹೊನ್ನೆಗುಂಡಿ ಪ್ರಾರ್ಥಿಸಿದರು. ಶಿರಸ್ತೇದಾರ್ ಸಂಗೀತಾ ಭಟ್ ಸ್ವಾಗತಿಸಿದರು. ಉಪತಹಸೀಲ್ದಾರ್ ಶ್ಯಾಮಸುಂದರ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಚಂದನ ಶಿವಕುಮಾರ್ ವಂದಿಸಿದರು.