ಬಿಜೆಪಿಯಲ್ಲಿ ಹುಚ್ಚರ ಜಾತ್ರೆ ನಡೀತಿದೆ: ಪ್ರಿಯಾಂಕ್‌ ಖರ್ಗೆ

| Published : Dec 01 2024, 01:33 AM IST

ಸಾರಾಂಶ

ಬಿಜೆಪಿ ಮುಖಂಡರಿಗೆ ಅವರದ್ದೆ ಇತಿಹಾಸ ಗೊತ್ತಿಲ್ಲ, ರಜಾಕರರ ಇತಿಹಾಸದ ಬಗ್ಗೆ ಅವರೇನು ಹೇಳ್ತಾರೆ?ನಾನು ಇದೇ ಕಾರಣಕ್ಕೆ ಹೇಳಿದ್ದೆ ಬಿಜೆಪಿಯವರಿಗೆ ಫ್ರೀ ಡಿಎನ್‌ಎ ಟೆಸ್ಟ್ ಮಾಡಿಸ್ತಿನಿ ಬನ್ನಿ ಅಂತ. ಯಾರು ಎಲ್ಲಿಂದ ಬಂದವರು ಅನ್ನೋದು ಡಿಎನ್‌ಎ ಟೆಸ್ಟ್ ಮೂಲಕ ಬಹಿರಂಗವಾಗಲಿ ಎಂದು ಕಲಬುರಗಿಯಲ್ಲಿ ಬಿಜೆಪಿ ವಿರುದ್ಧ ಸಚಿವರು ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಬಿಜೆಪಿಯಲ್ಲಿ ಹುಚ್ಚರ ಜಾತ್ರೆ ನಡೆಯುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಲಬುರಗಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಖರ್ಗೆ ಕುಟುಂಬದ ಬಗ್ಗೆ ಯತ್ನಾಳ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡುತ್ತಾ, ಬಿಗೆಪಿಗರು ಅವರವರೆ ಒಬ್ಬರಿಗೊಬ್ಬರು ನಿತ್ಯವೂ ಬೈದಾಡಿಕೊಳ್ಳುತ್ತಿದ್ದಾರೆ. ಯತ್ನಾಳ ವಿರುದ್ಧ ವಿಜಯೇಂದ್ರ, ವಿಜಯೇಂದ್ರ ವಿರುದ್ಧ ಯತ್ನಾಳ, ರವಿಕುಮಾರ, ಸದಾನಂದಗೌಡ, ಅಶೋಕ, ಮುನಿರತ್ನ ಒಬ್ಬರಿಗೊಬ್ಬರು ಬೈದಾಡಿಕೊಳ್ಳುತ್ತಿದ್ದಾರೆಂದು ಲೇವಡಿ ಮಾಡಿದರು.

ಬಿಜೆಪಿಯವರಿಗೆ ಅವರ ಇತಿಹಾಸವೇ ಗೊತ್ತಿಲ್ಲ, ಇನ್ನು ರಜಾಕಾರರ ಇತಿಹಾಸ ಹೇಳ್ತಾರಾ? ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಇವರು ರಜಾಕಾರರ ಇತಿಹಾಸ ಹೇಳ್ತಾರೆ. ನಾನು ಇದೇ ಕಾರಣಕ್ಕೆ ಹೇಳಿದ್ದೆ ಬಿಜೆಪಿಯವರಿಗೆ ಫ್ರೀ ಡಿಎನ್‌ಎ ಟೆಸ್ಟ್ ಮಾಡಿಸ್ತಿನಿ ಬನ್ನಿ ಅಂತ. ಯಾರು ಎಲ್ಲಿಂದ ಬಂದವರು ಅನ್ನೋದು ಡಿಎನ್‌ಎ ಟೆಸ್ಟ್ ಮೂಲಕ ಬಹಿರಂಗವಾಗಲಿ ಎಂದರು.

ತೇಜಸ್ವಿ ಸೂರ್ಯ, ಶಾಸಕ ರವಿ ಅಳಿಯ, ಆದ್ರೆ ಹೇಳಿಕೊಳ್ಳಲು ನಾಚಿಕೆ ಏಕೆ ಇವರಿಗೆ? ಬೇರೊಬ್ಬರ ವಂಶವಾಹಿನಿ ಬಗ್ಗೆ ಮಾತಾಡುವ ಇವರು ಮೊದಲು ತಮ್ಮ ಡಿಎನ್‌ಎ ಟೆಸ್ಟ್ ಮಾಡಿಸಿಕೊಳ್ಳಲಿ ಎಂದರು.

ಒಕ್ಕಲಿಗ ಸ್ವಾಮೀಜಿ ವಿರುದ್ಧ ಕೇಸ್ ವಿಚಾರವಾಗಿ ಮಾತನಾಡಿದ ಸಚಿವರು, ಸ್ವಾಮೀಜಿ ಆದ ತಕ್ಷಣ ಕಾನೂನು ಬರೋದಿಲ್ವಾ? ಅಶೋಕ್ ಸ್ವಾಮೀಜಿಯವರಿಗೆ ಈ ನೆಲದ ಕಾನೂನು ಅನ್ವಯ ಆಗಲ್ವಾ? ಖುದ್ದು ಸ್ವಾಮೀಜಿಯರೇ ವಿಷಾದ ವ್ಯಕ್ತಪಡಿಸಿದ್ದಾರೆ. ಆದ್ರೆ ಬಿಜೆಪಿ ಸ್ವಾಮೀಜಿಯವರ ಹೇಳಿಕೆಯನ್ನ ಸಮರ್ಥನೆ ಮಾಡ್ತಿದೆ. ಕಾನೂನು ನಮಗೆ ಬೇರೆ, ನಿಮಗೆ ಬೇರೆನಾ? ಎಂದು ಪ್ರಶ್ನಿಸಿದರು.

ಬಸನಗೌಡ ಪಾಟೀಲ್‌ ಯತ್ನಾಳ್ ಬಸವಣ್ಣರನ್ನು ಹೇಡಿ ಅಂತಾರೆ. ಇದಕ್ಕೆ ಬಿಜೆಪಿಯವರು ಏನು ಹೇಳ್ತಾರೆ.

ಒಬ್ರು ಬಿಜೆಪಿಯವರು ತುಟಿ ಬಿಚ್ಚಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಎಲ್ಲಿದ್ದಾರೆ. ಬಸವಣ್ಣ ಅಂದ್ರೆ ಅಲರ್ಜಿನಾ ನಿಮಗೆ? ಕ್ರಿಮಿನಲ್ ಕೆಲಸ ಮಾಡಿ ಜೈಶ್ರೀರಾಮ ಅಂದ್ರೆ ಎಲ್ಲಾ ಮುಚ್ಚಿ ಹೋಗುತ್ತಾ? ಸಂವಿಧಾನ ವಿರೋಧಿ ಹೇಳಿಕೆ ನಾವು ಸಹಿಸೋದಿಲ್ಲ‌. ನೀವು ಒಬ್ರು ಬೀದಿಗಿಳಿದ್ರೆ ಸಂವಿಧಾನ ರಕ್ಷಣೆ ಮಾಡೊ ಲಕ್ಷಾಂತರ ಜನ ಬೀದಿಗಿಳಿತಾರೆಂದು ಖರ್ಗೆ ಎಚ್ಚರಿಸಿದರು.

ಬಿಜೆಪಿಯಲ್ಲೆ ಎರಡೂ ಬಣಗಳ ಮಧ್ಯೆ ಫೈಟ್ ನಡೆದಿದೆ. ಬಿಜೆಪಿ ಕಾರ್ಯಕರ್ತರೇ ಯತ್ನಾಳ್ ಅರೆಹುಚ್ಚ ಎಂದಿದ್ದಾರೆ. ಅಲ್ಲಿಯೇ ಬಿಜೆಪಿ ವಿರುದ್ಧ ಬಿಜೆಪಿ ಆಗಿದೆ. ಯತ್ನಾಳ್ ಅವರ ಹಿಸ್ಟರಿನೇ ಅವರಿಗೆ ಗೊತ್ತಿಲ್ಲ.

ಇವರು ರಜಾಕಾರರ ಬಗ್ಗೆ ಮಾತನಾಡ್ತೆರೆ‌. ವಿಜಯೇಂದ್ರಗೆ ತಾಕತ್ತಿದ್ರೆ ಮೊದಲು ಯತ್ನಾಳ್ ಮುನಿರತ್ನ ಉಚ್ಛಾಟನೆ ಮಾಡಲಿ ಎಂದರು.

ಪೀರ್ ಶಾ ಬಂಗ್ಲೆ ವಾಪಸ್‌ಗೆ ಆಂದೋಲಾ ಸ್ವಾಮೀಜಿಗಳ ನೇತೃತ್ವದಲ್ಲಿ ದೆಹಲಿ ಚಲೋ ವಿಚಾರವಾಗಿ ಪ್ರಶ್ನಿಸಿದಾಗ, ಅವರು ಸ್ವಾಮೀಜಿನಾ? ಮೊದಲು ಅವರ ಕಟ್ಟಡ ಬಗ್ಗೆ ಹೈಕೋಟ್೯ ತೀರ್ಪು ನೀಡಿದೆ ನೋಡಿಕೊಳ್ಳಲಿ. ಇಲ್ಲಾಂದ್ರೆ ನಾನು ಬುಲ್ಡೋಜರ್ ಬಾಬಾ ಆಗಬೇಕಾಗುತ್ತೆ. ಇದು ಉತ್ತರ ಪ್ರದೇಶ ಅಲ್ಲ ಇದು ಕರ್ನಾಟಕ‌, ಇಲ್ಲಿ ಸಂವಿಧಾನ ರಕ್ಷಣೆ ಮಾಡೋ ಸರ್ಕಾರ ಇದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ‌ ಹೇಳಿದರು.

ಮಹಾರಾಷ್ಟ್ರದಲ್ಲಿ ಬಿಜೆಪಿ ಗೆದ್ದಿದ್ದು ಮೋದಿಯಿಂದಲ್ಲ. ಲಾಡ್ಲಿ ಬೇಹನ್ ಯೋಜನೆಯಿಂದ. ಅದು ಯಾರದ್ದು ನಮ್ಮ ಗೃಹ ಲಕ್ಷ್ಮೀ ಯೋಜನೆ ಕಾಪಿ ಎಂದರು.

ಇವತ್ತು ದೇಶದ ಜಿಡಿಪಿ ಏನಾಗಿದೆ? ಅದಕ್ಕೆ ಯಾರು ಉತ್ತರ ಕೊಡುತ್ತಾರೆ. ನಮ್ಮ ರಾಜ್ಯದ ಜಿಡಿಪಿ ಹೇಗಿದೆ.

ಉದ್ಯೋಗ ಸೃಷ್ಟಿಯಲ್ಲಿ ನಾವು ನಂಬರ್ ಒನ್. ಸದ್ಯಕ್ಕೆ ರಾಜ್ಯದಲ್ಲಿ ಸಂಪುಟ ವಿಸ್ತರಣೆ ಇಲ್ಲ. ತಮಗಿರೋ ಮಾಹಿತಿ ಪ್ರಕಾರ ಸಂಪುಟ ವಿಸ್ತರಣೆಯಿಲ್ಲ. ಯಾರು ಏನಾದ್ರು ಹೇಳಬಹುದು ಮೇಲಿಂದ ಆಗಬೇಕಲ್ಲ, ಶಂಖದಿಂದ ಬಂದ್ರೆ ತೀರ್ಥ ಎಂದರು.