ಪಟ್ಟಣದ ಒಳಚರಂಡಿ ಹಾಗೂ ರಾಜಕಾಲುವೆಗಳ ನೀರು ಮಾಗಡಿ- ಮಾಡಬಾಳ್ ಮುಖ್ಯ ರಸ್ತೆಯ ಪಿ.ಸಿ. ಪಾಳ್ಯದ ಬಳಿ ಭರ್ಗಾವತಿ ಕೆರೆಗೆ ಹರಿದುಬರುವ ಕಾಲುವೆಯಲ್ಲಿ ಏಕಾಏಕಿ ನೀರು ಹೆಚ್ಚಾದ ಪರಿಣಾಮ, ಮುಖ್ಯ ರಸ್ತೆಯೇ ಕೊಚ್ಚಿಕೊಂಡು ಹೋಗಿದೆ. ಇದರಿಂದಾಗಿ ಹಲವು ಗ್ರಾಮಗಳ ನಡುವಿನ ರಸ್ತೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಕನ್ನಡಪ್ರಭ ವಾರ್ತೆ ಮಾಗಡಿ
ಪಟ್ಟಣದಲ್ಲಿ ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.ಪಟ್ಟಣದ ಒಳಚರಂಡಿ ಹಾಗೂ ರಾಜಕಾಲುವೆಗಳ ನೀರು ಮಾಗಡಿ- ಮಾಡಬಾಳ್ ಮುಖ್ಯ ರಸ್ತೆಯ ಪಿ.ಸಿ. ಪಾಳ್ಯದ ಬಳಿ ಭರ್ಗಾವತಿ ಕೆರೆಗೆ ಹರಿದುಬರುವ ಕಾಲುವೆಯಲ್ಲಿ ಏಕಾಏಕಿ ನೀರು ಹೆಚ್ಚಾದ ಪರಿಣಾಮ, ಮುಖ್ಯ ರಸ್ತೆಯೇ ಕೊಚ್ಚಿಕೊಂಡು ಹೋಗಿದೆ. ಇದರಿಂದಾಗಿ ಹಲವು ಗ್ರಾಮಗಳ ನಡುವಿನ ರಸ್ತೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಹಲವು ಗ್ರಾಮಗಳ ಸಂಪರ್ಕ ಕಡಿತ:ರಸ್ತೆ ಕೊಚ್ಚಿ ಹೋಗಿರುವುದರಿಂದ ಮಾಡಬಾಳ್, ಪಿ.ಸಿ. ಪಾಳ್ಯ, ಸಂಕನಹಳ್ಳಿ, ಪುರ, ಕಲರೆಪಾಳ್ಯ ಹಾಗೂ ಶಂಭುದೇವನಹಳ್ಳಿ ಸೇರಿ ಹಲವು ಗ್ರಾಮಗಳ ಜನರಿಗೆ ಸಂಪರ್ಕ ಕಡಿತಗೊಂಡು ತೀವ್ರ ತೊಂದರೆ ಎದುರಾಗಿದೆ.
ಅವೈಜ್ಞಾನಿಕ ಕಾಮಗಾರಿಯೇ ಅವಾಂತರಕ್ಕೆ ಕಾರಣ:ಈ ಅವಾಂತರಕ್ಕೆ ರಾಜಕಾಲುವೆಯ ಅವೈಜ್ಞಾನಿಕ ಕಾಮಗಾರಿಯೇ ಮುಖ್ಯ ಕಾರಣ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಸುಮಾರು 15 ಅಡಿ ಅಗಲವಿದ್ದ ಕಾಲುವೆಯನ್ನು ಒಳಚರಂಡಿ ಕಾಮಗಾರಿ ವೇಳೆ ಕೇವಲ 5 ಅಡಿಗೆ ಕಿರಿದುಗೊಳಿಸಲಾಗಿದೆ. ಹೀಗಾಗಿ ಮಳೆಯ ನೀರು ಸರಾಗವಾಗಿ ಹರಿದುಹೋಗದೆ ರಸ್ತೆಯ ಮೇಲೆ ಹರಿದು, ರಸ್ತೆಯನ್ನೇ ಕಿತ್ತುಕೊಂಡು ಹೋಗಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ, ಪ್ರತಿವರ್ಷವೂ ಕೂಡ ಹೆಚ್ಚು ಮಳೆಯಾದಾಗ ಈ ಭಾಗದಲ್ಲಿ ಸಮಸ್ಯೆ ಉಲ್ಬಣವಾಗುತ್ತಿದ್ದು, ಅಧಿಕಾರಿಗಳು ಪ್ರತಿ ಬಾರಿಯೂ ಸರಿಪಡಿಸುವುದಾಗಿ ತಿಳಿಸಿ ಕೊನೆಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮನೆಗಳಿಗೆ ನುಗ್ಗಿದ ನೀರು:ರಾತ್ರಿ ಸುರಿದ ಭಾರೀ ಮಳೆಗೆ ತಾಲೂಕಿನ ಪಿ.ಸಿ. ಪಾಳ್ಯ ಗ್ರಾಮದ ಹಲವು ಮನೆಗಳಿಗೂ ನೀರು ನುಗ್ಗಿದ್ದು, ಮನೆಯಲ್ಲಿನ ಆಹಾರ ಧಾನ್ಯ ಸೇರಿದಂತೆ ಗೃಹೋಪಯೋಗಿ ವಸ್ತುಗಳು ನೀರಿನಲ್ಲಿ ನೆನೆದು ಹಾನಿಯಾಗಿದೆ.
ನೇತೇನಹಳ್ಳಿ ಪಂಚಾಯಿತಿಯ ಐಡಿಎಸ್‌ಎಂಟಿ ಬಡಾವಣೆಯಲ್ಲೂ ಒಳಚರಂಡಿ ಕಾಮಗಾರಿಯನ್ನು ಅರ್ಧಂಬರ್ಧ ಮಾಡಿರುವ ಕಾರಣ, ಅಲ್ಲಿಯೂ ಹಲವು ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡುವಂತಾಗಿದೆ. ಸ್ಥಳಕ್ಕೆ ನೇತೇನಹಳ್ಳಿ ಪಿಡಿಒ ಹಾಗೂ ಅಧಿಕಾರಿಗಳು ಭೇಟಿ ನೀಡಿ ಜೆಸಿಬಿ ಮೂಲಕ ತಾತ್ಕಾಲಿಕ ಕಾಮಗಾರಿ ನಡೆಸಿದ್ದಾರೆ. ರಸ್ತೆಯನ್ನು ಶೀಘ್ರ ದುರಸ್ಥಿಪಡಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಹಾಗೂ ರಾಜಕಾಲುವೆಯನ್ನು ಮರು ನಿರ್ಮಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.ತಹಸೀಲ್ದಾರ್ ಕೆ.ಆರ್. ರಂಜಿತ್ ಅವರು ನೇತೇನಹಳ್ಳಿ ಪಂಚಾಯಿತಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಳೆ ಹಾನಿ ಬಗ್ಗೆ ವರದಿ ಪಡೆದು ಶೀಘ್ರವೇ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದು, ಬುಧವಾರ ಸಂಜೆ ಕೂಡ ಮಳೆ ಬರುವ ಸೂಚನೆ ಇದ್ದು ರಸ್ತೆ ಸರಿಪಡಿಸುವವರಿಗೂ ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಡಿತವಾಗಲಿದೆ.