ಮಡಹಳ್ಳಿ ಸರ್ಕಲ್‌ ಮಳೆಗೆ ಚಿಕ್ಕ ಕೆರೆಯಾಯ್ತು!

| Published : Jun 04 2024, 12:32 AM IST

ಸಾರಾಂಶ

ಪಟ್ಟಣದ ಮಡಹಳ್ಳಿ ಸರ್ಕಲ್‌ನಲ್ಲಿ ಮಳೆ ನೀರು ನಿಂತು ಸಾರ್ವಜನಿಕರು, ಸವಾರರಿಗೆ ತೊಂದರೆಯಾಗುತ್ತದೆ ಎಂದು ಕನ್ನಡಪ್ರಭ ಪತ್ರಿಕೆ ಎರಡು ಬಾರಿ ವರದಿ ಪ್ರಕಟಿಸಿದರೂ ತಾಲೂಕು ಆಡಳಿತದ ಗಮನಕ್ಕೆ ತಂದರೂ ಪೊಲೀಸರು ಒತ್ತುವರಿ ಮಾಡಿಕೊಂಡ ಕಾಗೇಹಳ್ಳ ತೆರವುಗೊಳಿಸಲು ವಿಫಲವಾಗಿದ್ದು ಸೋಮವಾರ ಬಿದ್ದ ಮಳೆಗೆ ಮತ್ತೆ ಮಡಹಳ್ಳಿ ಸರ್ಕಲ್‌ ಚಿಕ್ಕ ಕೆರೆಯಂತಾಗಿದೆ.

ರಂಗೂಪುರ ಶಿವಕುಮಾರ್‌

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪಟ್ಟಣದ ಮಡಹಳ್ಳಿ ಸರ್ಕಲ್‌ನಲ್ಲಿ ಮಳೆ ನೀರು ನಿಂತು ಸಾರ್ವಜನಿಕರು, ಸವಾರರಿಗೆ ತೊಂದರೆಯಾಗುತ್ತದೆ ಎಂದು ಕನ್ನಡಪ್ರಭ ಪತ್ರಿಕೆ ಎರಡು ಬಾರಿ ವರದಿ ಪ್ರಕಟಿಸಿದರೂ ತಾಲೂಕು ಆಡಳಿತದ ಗಮನಕ್ಕೆ ತಂದರೂ ಪೊಲೀಸರು ಒತ್ತುವರಿ ಮಾಡಿಕೊಂಡ ಕಾಗೇಹಳ್ಳ ತೆರವುಗೊಳಿಸಲು ವಿಫಲವಾಗಿದ್ದು ಸೋಮವಾರ ಬಿದ್ದ ಮಳೆಗೆ ಮತ್ತೆ ಮಡಹಳ್ಳಿ ಸರ್ಕಲ್‌ ಚಿಕ್ಕ ಕೆರೆಯಂತಾಗಿದೆ.

ಜಡ್ಡುಗಟ್ಟಿದ ತಾಲೂಕು ಆಡಳಿತದ ವಿರುದ್ಧ ಪಟ್ಟಣದ ನಾಗರೀಕರು ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳೀಯ ಪೊಲೀಸರು ಒತ್ತುವರಿ ಮಾಡಿಕೊಂಡ ಕಾಗೇಹಳ್ಳ ತೆರವುಗೊಳಿಸಲು ಆಗದಿದ್ದ ಮೇಲೆ ಅಧಿಕಾರ ನಿಮಗ್ಯಾಕೆ ಎಂದು ಅಧಿಕಾರಿಗಳನ್ನು ಪಟ್ಟಣದ ನೂರಾರು ಮಂದಿ ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಮುಂಗಾರು ಮಳೆ ಆರಂಭಕ್ಕೂ ಮುನ್ನ ಕನ್ನಡಪ್ರಭ ಪತ್ರಿಕೆ ಮೇ ೩ ರಂದು ಮಳೆಗೂ ಮುನ್ನ ಕಾಗೇಹಳ್ಳ ಒತ್ತುವರಿ ತೆರವುಗೊಳಿಸಿ ಎಂದು ವರದಿ ಪ್ರಕಟಿಸಿತ್ತು. ಬಳಿಕ ಮೇ ೧೩ರಂದು ಮತ್ತೆ ಕನ್ನಡಪ್ರಭ ಪತ್ರಿಕೆಯಲ್ಲಿ ಕಾಗೇಹಳ್ಳ ಒತ್ತುವರಿ ತೆರವಿಗೆ ಕಳ್ಳ ಪೊಲೀಸ್‌ ಆಟ ಎಂದು ತಾಲೂಕು ಆಡಳಿತದ ವಿರುದ್ಧ ವ್ಯಂಗವಾಗಿ ಎಚ್ಚರಿಸಿದರೂ ತಾಲೂಕು ಆಡಳಿತ ಎಚ್ಚರಗೊಳ್ಳಲಿಲ್ಲ.

ಸೋಮವಾರ ಮಧ್ಯಾಹ್ನ ಸುರಿದ ಮಳೆ ಮಡಹಳ್ಳಿ ಸರ್ಕಲ್‌ ಅಕ್ಷರಶ ಚಿಕ್ಕ ಕೆರೆಯಂತಾಗಿದೆ. ಕಾರುಗಳು ಈ ರಸ್ತೆಯಲ್ಲಿ ತೆರಳಲು ಆಗದೆ ಕಾರು ಸವಾರರು ಪರದಾಡಿದರು. ಓಮಿನಿಯೊಂದು ನೀರಲ್ಲಿ ಸಾಗದೆ ಮಳೆಯಲ್ಲಿಯೇ ನಿಂತಿತು. ಮಡಹಳ್ಳಿ ಸರ್ಕಲ್‌ ಮೂಲಕ ತೆರಳಬೇಕಾದ ಬೈಕ್‌ ಸವಾರರು, ಸೈಕಲ್‌ ಸವಾರರು ಹಾಗೂ ಸಾರ್ವಜನಿಕರು ಮಂಡಿಯುದ್ದ ನಿಂತ ಮಳೆಯ ನೀರಲ್ಲಿ ಹೋಗಲು ಆಗದೆ ಪರದಾಡುತ್ತ ತಾಲೂಕು ಆಡಳಿತದ ವಿರುದ್ಧ ಕಿಡಿ ಕಾರಿದ್ದಾರೆ.

ತೆರವಿಗೇನು ಅಡ್ಡಿ?: ಮಡಹಳ್ಳಿ ರಸ್ತೆಯಲ್ಲಿನ ಪೊಲೀಸ್‌ ಠಾಣೆಯ ಹಿಂಭಾಗದ ಕಾಗೇಹಳ್ಳವನ್ನು ಪೊಲೀಸರು ಒತ್ತುವರಿ ಮಾಡಿಕೊಂಡು ಕಾಗೇಹಳ್ಳ ಮುಚ್ಚಿ ಸೀಜ್‌ ಮಾಡಿದ ವಾಹನಗಳನ್ನು ನಿಲ್ಲಿಸಿಕೊಂಡಿದ್ದಾರೆ. ಪೊಲೀಸರು ಒತ್ತುವರಿ ಮಾಡಿಕೊಂಡ ಕಾಗೇಹಳ್ಳ ತೆರವುಗೊಳಿಸಲು ಕನ್ನಡಪ್ರಭ ನಿರಂತರ ಸುದ್ದಿ ಪ್ರಕಟಿಸಿ ಎಚ್ಚರಿಸಿದ ಬಳಿಕ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿಕ ೮೦ ಲಕ್ಷ ದಲ್ಲಿ ಸ್ಲ್ಯಾಬ್‌ ಕೂಡ ನಿರ್ಮಿಸಿದರು. ಇದಾದ ಬಳಿಕ ಸ್ಲ್ಯಾಬ್‌ ನಿರ್ಮಾಣ ಆಯ್ತು ಆದರೆ ಪೊಲೀಸರು ಪೊಲೀಸ್‌ ಠಾಣೆಯ ಹಿಂಭಾಗದ ಒತುವರಿ ಮಾಡಿಕೊಂಡ ಕಾಗೇಹಳ್ಳ ಬಿಡಿಸುವ ತನಕ ಮಡಹಳ್ಳಿ ಸರ್ಕಲ್‌ ನಲ್ಲಿ ನೀರು ನಿಲ್ಲುತ್ತದೆ ಎಂದು ಪದೇ ಪದೇ ಕನ್ನಡಪ್ರಭ ವರದಿ ಬಳಿಕ ಅಂದಿನ ತಹಸೀಲ್ದಾರ್‌ ಟಿ.ರಮೇಶ್‌ ಬಾಬು ಒತ್ತುವರಿ ತೆರುವುಗೊಳಿಸಬೇಕು ಎಂದು ಪತ್ರ ಬರೆದರು. ಬಳಿಕ ಕಂದಾಯ ಇಲಾಖೆ ಅಧಿಕಾರಿಗಳಿಗೆ ಪೊಲೀಸರು ಒತ್ತುವರಿ ಬಿಡಲು ಸತಾಯಿಸಿದ ಕಾರಣ ಕಂದಾಯ ಇಲಾಖೆ ಒತ್ತುವರಿ ತೆರವುಗೊಳಿಸಲು ವಿಫಲವಾಗಿದೆ. ಕಂದಾಯ ಇಲಾಖೆ ನಿರ್ಲಕ್ಷ್ಯ, ಸರ್ಕಾರಿ ಕಾಗೇಹಳ್ಳ ಬಿಡಲು ಪೊಲೀಸರ ಮೀನಮೇಷಕ್ಕೆ ಸಾರ್ವಜನಿಕರು ಮಡಹಳ್ಳಿ ಸರ್ಕಲ್‌ನಲ್ಲಿ ಮಳೆ ಬಂದಾಗಲೆಲ್ಲ ಸಂಚರಿಸಲು ನರಕಯಾತನೆ ಅನುಭವಿಸುತ್ತಿದ್ದಾರೆ.ಮಡಹಳ್ಳಿ ಸರ್ಕಲ್‌ನಲ್ಲಿ ಮಳೆ ಬಂದಾಗಲೆಲ್ಲ ನೀರು ನಿಲ್ಲಲು ಪೊಲೀಸರು ಹಾಗೂ ಕಂದಾಯ ಇಲಾಖೆಯೇ ಕಾರಣ. ಶಾಸಕರು ಒತ್ತುವರಿ ತೆರವುಗೊಳಿಸಿ ಎಂದರೂ ತಾಲೂಕು ಆಡಳಿತ ಕಾಗೇಹಳ್ಳ ಒತ್ತುವರಿ ತೆರವುಗೊಳಿಸಲು ಆಗದಿರುವುದು ದುರಂತವೇ ಸರಿ.-ಶೈಲಕುಮಾರ್ (ಶೈಲೇಶ್)‌, ಕಸಾಪ ಜಿಲ್ಲಾಧ್ಯಕ್ಷ