ಸಾರಾಂಶ
ಕೂಡ್ಲಿಗಿ: ವಾಲ್ಮೀಕಿ ಸಮುದಾಯಕ್ಕೆ ಈ ನಾಡನ್ನು ಆಳ್ವಿಕೆ ಮಾಡಿದ ಕೀರ್ತಿ ಇದೆ. ಇಂದು ವಾಲ್ಮೀಕಿ ಸಮುದಾಯ ಮೀಸಲಾತಿ ಇದ್ದರೂ ಬೇರೆ ಸಮುದಾಯಗಳ ಪಾಲಾಗುತ್ತಿದೆ. ಸಮುದಾಯಕ್ಕೂ ಮೀಸಲಾತಿ ಅಗತ್ಯವಿದೆ ಎಂದು ಹಂಪಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ವೆಂಕಟಗಿರಿ ದಳವಾಯಿ ಅಭಿಪ್ರಾಯಪಟ್ಟರು.ಅವರು ತಾಲೂಕಿನ ಹೊಸಹಳ್ಳಿಯಲ್ಲಿ ರಾಜವೀರ ಮದಕರಿನಾಯಕ ಜಯಂತ್ಯುತ್ಸವ, ಮದಕರಿ ನಾಯಕ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಮಾತನಾಡುತ್ತಿದ್ದರು.
ವಿಜಯನಗರೋತ್ತರವಾಗಿ ಇಡೀ ಕನ್ನಡನಾಡನ್ನು ಆಳ್ವಿಕೆ ನಡೆಸಿದ 77 ಪಾಳೇಗಾರರು ಜನತೆಗೆ ತೀರಾ ಹತ್ತಿರವಾಗಿ ಆಳ್ವಿಕೆ ನಡೆಸಿದವರು. ಆದರೆ ಪಾಳೇಗಾರರಿಗೆ ತಮ್ಮಲ್ಲಿಯೇ ಕಲಹ ಉಂಟಾಗಿ ಪಾಳೇಗಾರರ ಅಧಃಪತನಕ್ಕೆ ಕಾರಣವಾಯಿತು. ಚಿತ್ರದುರ್ಗ ಪಾಳೇಗಾರರು ಕಲ್ಲಿನ ಕೋಟೆ ಕಟ್ಟಿ ಇಡೀ ಕನ್ನಡನಾಡಿನಲ್ಲಿಯೇ ಮುಂಚೂಣಿ ಪಾಳೇಗಾರರಾಗಿದ್ದರು. ಇವರಿಗೆ ಜರ್ಮಲಿ, ಗುಡೇಕೋಟೆ ಪಾಳೇಗಾರರು ಸೇರಿದಂತೆ ನಮ್ಮ ಪಾಳೇಗಾರರೇ ಶತೃಗಳಾಗಿ ಪರಿಣಮಿಸಿದ್ದು ವಿಪರ್ಯಾಸ ಎಂದರು.ರಾಜರಿಗಿಂತ ಪಾಳೇಗಾರರೇ ಜನತೆಗೆ ಹತ್ತಿರ:
ಈ ಹಿಂದೆ ಕನ್ನಡನಾಡನ್ನು ರಾಜರು ಆಳ್ವಿಕೆ ನಡೆಸಿದ್ದಾರೆ. ಅವರು ತೀರಾ ಜನತೆಯ ಹತ್ತಿರ ಹೋಗಲಿಲ್ಲ ಆದರೆ ಇಂದು ರಾಜರಿಗಿಂತ ಪಾಳೇಗಾರರೇ ಹೆಚ್ಚು ಜನತೆಗೆ ತೀರಾ ಹತ್ತಿರವಾಗಿದ್ದರಿಂದ ಇಂದಿಗೂ ನಮ್ಮ ಜನಪದರು, ಪೂರ್ವಜರ ಬಾಯಲ್ಲಿ ಲಾವಣಿ ಹಾಡುಗಳ ಮೂಲಕ ಪ್ರಸಿದ್ಧರಾಗಿದ್ದಾರೆ. ಆದರೆ ರಾಜರ ಬಗ್ಗೆ ಜನಪದರು ಕಟ್ಟಿರುವ ಲಾವಣಿಗಳು ಇಲ್ಲಿವರೆಗೂ ದೊರಕಿಲ್ಲ ಎಂದರು.ಯುದ್ಧದಲ್ಲಿ ರಾಜರು ಸತ್ತಿದ್ದು ಅಪರೂಪ:
ಯುದ್ಧಗಳಲ್ಲಿ ರಾಜರು ಸತ್ತಿರುವುದು ಬಹು ಅಪರೂಪ. ಆದರೆ ಕನ್ನಡನಾಡಿನಲ್ಲಿ ಮದಕರಿ ನಾಯಕ ಹಾಗೂ ಟಿಪ್ಪು ಸುಲ್ತಾನ್ ಯುದ್ಧದಲ್ಲಿಯೇ ಕೊನೆಯುಸಿರು ಎಳೆಯುವ ಮೂಲಕ ನೈಜ ಹೋರಾಟಕ್ಕೆ ಸಾಕ್ಷಿಯಾಗಿದ್ದಾರೆ ಎಂದರು.ಮೊಳಕಾಲ್ಮೂರು ಶಾಸಕ ಎನ್.ವೈ. ಗೋಪಾಲಕೃಷ್ಣ ಮದಕರಿ ನಾಯಕ ವೃತ್ತ ಹಾಗೂ ನಾಮಫಲಕ ಅನಾವರಣ ಮಾಡಿ ಮಾತನಾಡಿ ಕೂಡ್ಲಿಗಿ ತಾಲೂಕಿನಲ್ಲಿ ಜನಪರ ಕೆಲಸ ಮಾಡುವ ಮೂಲಕ ಶಹಬ್ಬಾಸ್ ಗಿಟ್ಟಿಸಿಕೊಂಡಿದ್ದೇನೆ. ಬಳ್ಳಾರಿಯಲ್ಲಿಯೂ ಜನತೆ ಶಹಬ್ಬಾಸ್ ಹೇಳಿದ್ದಾರೆ. ಆದರೆ ತವರು ಕ್ಷೇತ್ರದಲ್ಲಿ ಇನ್ನೂ ಪಿಪ್ಟಿ ಪಿಪ್ಟಿ ಇದೆ ಅವರು ಇನ್ನೂ ಶಹಬ್ಬಾಸ್ ಹೇಳಿಲ್ಲ. ಇನ್ನಷ್ಟುಕೆಲಸಗಳು ಆಗಬೇಕಿದೆ ಎಂದರು. ಕೂಡ್ಲಿಗಿ ತಾಲೂಕಿನಲ್ಲಿ 74 ಕೆರೆಗಳಿಗೆ ನೀರುಣಿಸುವ ಯೋಜನೆ ಕಾಮಗಾರಿ ಶೇಕಡ 99 ರಷ್ಟು ಮುಗಿದಿದೆ ಇನ್ನೂ ಕೆಲವೇ ತಿಂಗಳಲ್ಲಿಯೇ ಬರದ ನಾಡಿಗೆ ಗಂಗೆ ಹರಿಯಲಿದ್ದಾಳೆ ಎಂದರು.
ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರ ಸ್ವಾಮೀಜಿ ವಾಲ್ಮೀಕಿ ಆಶ್ರಮದ ಶ್ರೀವರದಾನೇಶ್ವರ ಸ್ವಾಮೀಜಿ, ಕೂಡ್ಲಿಗಿ ಹಿರೇಮಠದ ಶ್ರೀ ಪ್ರಶಾಂತ ಸಾಗರಸ್ವಾಮೀಜಿ, ಕಾನಾಮಡುಗು ದಾಸೋಹ ಮಠದ ಧರ್ಮಾಧಿಕಾರಿ ದಾ.ಮ.ಐಮಡಿ ಶರಣಾರ್ಯರು, ಸಿದ್ದಯ್ಯನಕೋಟೆ ವಿಜಯ ಮಹಾಂತೇಶ್ವರ ಶಾಖಾ ಮಠದ ಶ್ರೀಬಸವಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ರಾಜ್ಯದ ದ್ರಾಕ್ಷಿರಸ ಮಂಡಳಿ ಅಧ್ಯಕ್ಷ ಡಾ.ಯೋಗೇಶ್ ಬಾಬು, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ತಿಪ್ಪೇಸ್ವಾಮಿ, ತಾಪಂ ಮಾಜಿ ಉಪಾಧ್ಯಕ್ಷ ಎಸ್.ಪಿ.ಪ್ರಕಾಶ್, ಎನ್.ಟಿ.ತಮ್ಮಣ್ಣ, ಹುಡೇಂ ಪಾಪನಾಯಕ, ಎಸ್.ಸುರೇಶ್, ಕೊಲುಮೆಹಟ್ಟಿ ವೆಂಕಟೇಶ್, ಸೂರ್ಯಪ್ರಕಾಶ್, ಮಾಜಿ ಜಿಪಂ ಸದಸ್ಯ ಕೆ.ಎಂ.ಶಶಿಧರ್, ಬಿಟಿ ಗುದ್ದಿ ದುರುಗೇಶ, ಜುಟ್ಟಲಿಂಗನಹಟ್ಟಿ ಬೊಮ್ಮಣ್ಣ, ಕೆ.ಪಿ.ಪಂಪಾಪತಿ, ಸೇರಿ ಸಮುದಾಯ ಹಲವು ಮುಖಂಡರು ಇದ್ದರು.ಕಾರ್ಯಕ್ರಮಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ವಾಲ್ಮೀಕಿ ಸಮುದಾಯದ ಜನತೆ ಪಾಲ್ಗೊಂಡಿದ್ದರು.
ಕೂಡ್ಲಿಗಿ ತಾಲೂಕು ಹೊಸಹಳ್ಳಿಯಲ್ಲಿ ಶ್ರೀರಾಜವೀರ ಮದಕರಿನಾಯಕ ವೃತ್ತ ಹಾಗೂ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದಪುರಿ ಶ್ರೀಗಳು ಹಾಗೂ ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಪುಷ್ಪಾರ್ಚನೆ ಮಾಡುವ ಮೂಲಕ ಪುತ್ಥಳಿ ಅನಾವರಣ ಮಾಡಿದರು.