ಸಾರಾಂಶ
ಬಸವಕಲ್ಯಾಣದ ಹರಳಯ್ಯ ಗವಿಯಲ್ಲಿ ಶರಣ ಹೂಗಾರ ಮಾದಯ್ಯನವರ ಸ್ಮರಣೋತ್ಸವ ನಡೆಯಿತು.
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಮಾದಯ್ಯನವರು ಶರಣರಿಂದ ಅರಿವು ಎನ್ನುವ ಮಕರಂಧವನ್ನು ಹೀರಿಕೊಂಡು, ತಮ್ಮೊಳಗೆ ಇಟ್ಟುಕೊಳ್ಳುತ್ತಾ ಅನುಭಾವವನ್ನು ಸವಿದು ಕಲ್ಯಾಣದಲ್ಲಿ ಅರಿವಿನ ಪರಿಮಳ ಸೂಸಿದವರು ಎಂದು ಡಾ.ಗಂಗಾಂಬಿಕಾ ಅಕ್ಕ ನುಡಿದರು.ನಗರದ ಹರಳಯ್ಯ ಗವಿಯಲ್ಲಿ ಜರುಗಿದ ಶರಣ ಹೂಗಾರ ಮಾದಯ್ಯನವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾಜದಲ್ಲಿ ಸಾಮರಸ್ಯದಿಂದ ಬದುಕಲು ಹೂವು ಪೂಣಿಸಿದ ದಾರದಂತೆ ಬಾಳಬೇಕು.ಮಾದಯ್ಯನವರು ಶರಣರಿಗೆ ಹೂವು ಪೂರೈಸುವ ಕಾಯಕ ಕೈಗೊಂಡಿದ್ದರು. ಶರಣರು ಜೀವೋನ್ಮುಖ ತತ್ವಗಳಾದ ಕಾಯಕ, ದಾಸೋಹ, ಇಷ್ಟಲಿಂಗ ಪೂಜೆ, ಗುರು, ಲಿಂಗ, ಜಂಗಮ ಸೇವೆಗಳನ್ನು ಜೀವನದುದ್ದಕ್ಕೂ ಅಳವಡಿಸಿಕೊಂಡು ನುಡಿದಂತೆ ನಡೆದವರು ಎಂದು ಹೇಳಿದರು.
ನ್ಯಾಯಾಧೀಶರಾದ ವಿಜಯಲಕ್ಷ್ಮೀ ಹೂಗಾರ ಮಾತನಾಡಿ, ಹೂಗಾರ ಮಾದಯ್ಯ ದಂಪತಿ ಕಾಯಕ ನಿಷ್ಠೆಯ ಜೀವನ ಪದ್ಧತಿ ಹೊಂದಿದ್ದರು. ಅವರ ಕಾಯಕ ನಿಷ್ಠೆ, ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದ್ದು ಅವರ ಸಂದೇಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ನಿವೃತ್ತ ಅಂಚೆ ಅಧಿಕಾರಿ ವಿಜಯಕುಮಾರ ಬನಗುಂಡಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗಣಪತಿ ಕಾಸ್ತೆ ಅಧ್ಯಕ್ಷತೆ ವಹಿಸಿದರು. ನಿವೃತ್ತ ಶಿಕ್ಷಕಿ ಲಕ್ಷ್ಮೀಬಾಯಿ ಪಾಟೀಲ ಮಾತನಾಡಿದರು.
ಹರಳಯ್ಯ ಸಮಾಜದ ಉಪಾಧ್ಯಕ್ಷ ಗೌತಮ ಜಾಧವ ಧ್ವಜಾರೋಹಣಗೈದರು. ಕಲ್ಯಾಣಮ್ಮ ವಚನ ಗಾಯನ ಮಾಡಿದರು. ಇದೇ ಸಂದರ್ಭದಲ್ಲಿ ಮೀನಾ ಗೌತಮ ಜಾಧವ ಹಾಗೂ ಸೋನಾಲಿ ಶಿವರಾಜ ನೀಲಕಂಠೆ ದಂಪತಿಗಳನ್ನು ಗೌರವಿಸಲಾಯಿತು.