ಮಾದಾರ ಚನ್ನಯ್ಯ ಸಮಾನತೆಯ ಹರಿಕಾರರಲ್ಲೊಬ್ಬರು: ಮ.ರಾಮಕೃಷ್ಣ

| Published : Dec 27 2023, 01:31 AM IST

ಸಾರಾಂಶ

ಪಾದಗಳಿಗೆ ರಕ್ಷೆಗಳನ್ನು ಹೊಲಿದು ಕೊಡುವ ವ್ಯಕ್ತಿಯನ್ನು ಕೀಳಾಗಿ ಕಾಣದೆ ಉತ್ತಮ ನಾಗರಿಕನನ್ನಾಗಿ ನೋಡಬೇಕು ಎನ್ನುವುದನ್ನು ಅಂದಿನ ಕಾಲದಲ್ಲಿಯೇ ಮಾದಾರ ಚನ್ನಯ್ಯ ಅವರ ಹೇಳಿಕೊಟ್ಟು ಹೋಗಿದ್ದಾರೆ. ಸಾಹಿತಿ ಮ.ಸಿ.ನಾರಾಯಣ ರಚಿತ ಮಾನವೀಯತೆಯ ಹರಿಕಾರರು ಕೃತಿ ಬಿಡುಗಡೆ.

ಕನ್ನಡಪ್ರಭ ವಾರ್ತೆ ಮಂಡ್ಯಮಾಡುವ ಕೆಲಸ ಒಂದೇ ಆಗಿದ್ದರೂ ಅದನ್ನು ಸಮಾನ ದೃಷ್ಟಿಯಿಂದ ಕಾಣದೆ ಮೇಲು-ಕೀಳು ಎಂಬ ಆಯಾಮದಲ್ಲಿ ನೋಡುವ ಮನೋಭಾವವನ್ನು ತೊರೆಯಬೇಕು ಎಂದು ಪ್ರಾಧ್ಯಾಪಕ ಮ.ರಾಮಕೃಷ್ಣ ಹೇಳಿದರು.

ನಗರದ ಗಾಂಧಿ ಭವನದಲ್ಲಿ ವಿಶ್ವಮಾನವ ವಿಚಾರ ವೇದಿಕೆ, ಕನ್ನಡ ಸೇನೆ ಕರ್ನಾಟಕ ಹಾಗೂ ಕಸ್ತೂರಿ ಸಿರಿಗನ್ನಡ ವೇದಿಕೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀಮಾದಾರ ಚನ್ನಯ್ಯನವರು ಹೊಸ್ತಿಲ ಹುಣ್ಣಿಮೆಯ’ ೯೫೪ನೇ ಜಯಂತ್ಯುತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.

ಪಾದಗಳಿಗೆ ರಕ್ಷೆಗಳನ್ನು ಹೊಲಿದು ಕೊಡುವ ವ್ಯಕ್ತಿಯನ್ನು ಕೀಳಾಗಿ ಕಾಣದೆ ಉತ್ತಮ ನಾಗರಿಕನನ್ನಾಗಿ ನೋಡಬೇಕು ಎನ್ನುವುದನ್ನು ಅಂದಿನ ಕಾಲದಲ್ಲಿಯೇ ಮಾದಾರ ಚನ್ನಯ್ಯ ಅವರ ಹೇಳಿಕೊಟ್ಟು ಹೋಗಿದ್ದಾರೆ. ಜನರ ಪಾದಗಳಿಗೆ ರಕ್ಷೆಯಾಗಿ ಪಾದರಕ್ಷೆಗಳನ್ನು ನೀಡಿದವರು ಮಾದಿಗರು. ಈ ಮಾದಿಗರು ನಮ್ಮ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ. ಚರ್ಮವನ್ನು ಹದ ಮಾಡಿ ತಮಟೆ, ಡೋಲು, ನಗಾರಿಯನ್ನು ಮಾಡುವ ಮೂಲಕ ಸಾಂಸ್ಕೃತಿಕವಾಗಿಯೂ ಕೊಡುಗೆ ನೀಡಿರುವವರು ಮಾದಿಗರು. ತಂತಿ ವಾದ್ಯಗಳೇ ಶ್ರೇಷ್ಠವಾಗಿದ್ದ ಕಾಲದಲ್ಲಿ ಮಂಗಳವಾದ್ಯಗಳನ್ನು ಸೃಷ್ಟಿಸಿಕೊಟ್ಟರು.

ಎಲ್ಲ ದೇವರ ಕಾರ್ಯಗಳಲ್ಲಿ ಮಂಗಳವಾದ್ಯಗಳು ಇರಲೇ ಬೇಕು. ಮಾದಿಗರು ತಯಾರಿಸಿದ ವಾದ್ಯಗಳಿಲ್ಲದೆ ಯಾವ ಉತ್ಸವವೂ ನಡೆಯುವುದಿಲ್ಲ. ವಿಚಿತ್ರವೆಂದರೆ ಮಾದಿಗರನ್ನು ಕೀಳು ಮನಸ್ಥಿತಿಯಿಂದ ನೋಡುವ ಮನೋಭಾವ ದೂರವಾಗಿಲ್ಲ. ಅವರನ್ನು ದೇವಾಲಯದ ಒಳಗಡೆ ಬಿಡುವುದೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಶ್ರೀಮಲೆ ಮಹದೇಶ್ವರ ಸ್ವಾಮಿ, ಶ್ರೀಮಂಟೇಸ್ವಾಮಿ ಅವರ ಕಥೆಗಳನ್ನು ಓದಿದರೆ ನಮಗೆ ಎಂತಹ ನಾಯಕರು, ಎಂತಹ ಸಾಂಸ್ಕೃತಿಕ ಚಿಂತಕರು ಸಿಕ್ಕಿದ್ದಾರೆ ಎಂಬುದು ತಿಳಿಯುತ್ತದೆ. ಆದರೆ, ಅವರ್ಯಾರನ್ನೂ ನಾವು ಓದಲೇ ಇಲ್ಲ. ಉದ್ದಕ್ಕೂ ಆಚಾರ್ಯತ್ರಯರನ್ನೇ ಓದಿಕೊಂಡು ಬಂದೆವು. ಅವರನ್ನೇ ಮಹಾನ್ ನಾಯಕರು ಎಂಬುದನ್ನು ಬಿಂಬಿಸುತ್ತಿರುವುದು ಸರಿಯಲ್ಲ ಎಂದರು.

ಇದೇ ಸಂದರ್ಭದಲ್ಲಿ ಸಾಹಿತಿ ಮ.ಸಿ.ನಾರಾಯಣ ರಚಿತ ‘ಮಾನವೀಯತೆಯ ಹರಿಕಾರರು’ ಎಂಬ ಕೃತಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಸಹಾಯಕ ಪ್ರಾಧ್ಯಾಪಕಿ ಸಮಿತ್ರಾ, ಕನ್ನಡ ಉಪನ್ಯಾಸಕಿ ಕೆಂಪಮ್ಮ, ವಾಣಿಜ್ಯ ತೆರಿಗೆ ಇಲಾಖೆಯ ಮುಖ್ಯ ಆಯುಕ್ತ ಭೀಮಾ ಶಂಕರ್, ಕೆಪಿಎಸ್‌ಸಿ ಮಾಜಿ ಸದಸ್ಯ ದುಗ್ಗಪ್ಪ, ರಾಜ್ಯ ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ, ಮಾದಿಗ ಮಿಸಲಾತಿ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಚಿಕ್ಕಪಾಪಯ್ಯ, ವೇದಿಕೆಯ ಪ್ರಧಾನ ಕಾರ್ಯದರ್ಶಿ ಎನ್.ಎಲ್.ಭರತ್‌ರಾಜ್ ಭಾಗವಹಿಸಿದ್ದರು.