ಸಾರಾಂಶ
ಪಡುಕಾನ ತಿಮ್ಮಯ್ಯರು ಗತಿಸಿ ನಾಲ್ಕು ದಶಕದ ಹತ್ತಿರವಾದರೂ ಅವರನ್ನು ಸ್ಮರಿಸಿ ಗೌರವಿಸುವ ಮೂಲಕ ಅವರ ಶಿಷ್ಯ ಗೋವಿಂದ ನಾಯಕರು ನಿಜಾರ್ಥದ ಗುರುವಂದನೆಯನ್ನು ಸಲ್ಲಿಸಿದ್ದಾರೆ ಎಂದು ನಾ. ಕಾರಂತ ಪೆರಾಜೆ ಹೇಳಿದರು.
ಕನ್ನಡಪ್ರಭ ವಾರ್ತೆ ಪುತ್ತೂರು
ಕಾಲಘಟ್ಟಕ್ಕೆ ಅನುಗುಣವಾಗಿ ಯಕ್ಷಗಾನವನ್ನು ಮನಸಾ ಆರಾಧಿಸಿ, ಅದನ್ನು ಜನಮಾನಸದಲ್ಲಿ ಹಬ್ಬಿಸಿದ ಅನೇಕರು ಗತಿಸಿದ್ದಾರೆ. ಅವರ ಕೊಡುಗೆಗಳು ದಾಖಲಾಗಲಿಲ್ಲ. ದಾಖಲು ಮಾಡಬೇಕಾದ ಸಂಪನ್ಮೂಲಗಳು ವಿರಳವಾಗಿದ್ದುವು. ಅವರ ಸಾಂಗತ್ಯದಲ್ಲಿದ್ದ ಬೆರಳೆಣಿಕೆಯ ಮಂದಿ ಅಂತಹ ಹಿರಿಯರನ್ನು ಜ್ಞಾಪಿಸಿ, ಹೊಸ ತಲೆಮಾರಿಗೆ ಪರಿಚಯಿಸುವುದು ಕಲೆಯ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಬದ್ಧತೆಯಲ್ಲಿ ಮಾಡಬೇಕಾದ ಕಾಯಕವಾಗಿದೆ ಎಂದು ಕಲಾವಿದ, ಲೇಖಕ ನಾ. ಕಾರಂತ ಪೆರಾಜೆ ಹೇಳಿದ್ದಾರೆ.ಅವರು ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ದೊಡ್ಡಡ್ಕದ ಪಾಲೆಚ್ಚಾರು ಗೋವಿಂದ ನಾಯಕರ ‘ಶಿವಕೃಪಾ ನಿವಾಸ’ದಲ್ಲಿ ಜರುಗಿದ ಕೀರ್ತಿಶೇಷ ಮದ್ದಲೆಗಾರ ಪಡುಕಾನ ತಿಮ್ಮಯ್ಯ ಆಚಾರ್ ಸ್ಮೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಡುಕಾನ ತಿಮ್ಮಯ್ಯರು ಗತಿಸಿ ನಾಲ್ಕು ದಶಕದ ಹತ್ತಿರವಾದರೂ ಅವರನ್ನು ಸ್ಮರಿಸಿ ಗೌರವಿಸುವ ಮೂಲಕ ಅವರ ಶಿಷ್ಯ ಗೋವಿಂದ ನಾಯಕರು ನಿಜಾರ್ಥದ ಗುರುವಂದನೆಯನ್ನು ಸಲ್ಲಿಸಿದ್ದಾರೆ ಎಂದರು.
ಯಕ್ಷಗಾನ ಹಿಮ್ಮೇಳದ ಕಲಾವಿದ ಪದ್ಯಾಣ ಶಂಕರನಾರಾಯಣ ಭಟ್ ಹಾಗೂ ಅರ್ಥಧಾರಿ, ವೇಷಧಾರಿ ಗುಂಡ್ಯಡ್ಕ ಈಶ್ವರ ಭಟ್ ಜತೆಯಾಗಿ ಸಮಾರಂಭ ಉದ್ಘಾಟಿಸಿದರು.ತಿಮ್ಮಯ್ಯ ಆಚಾರ್ ಪುತ್ರ ಕೃಷ್ಣಯ್ಯ ಆಚಾರ್ ಉಪಸ್ಥಿತರಿದ್ದರು. ಗೋವಿಂದ ನಾಯಕ್ ಸ್ವಾಗತಿಸಿ, ವಂದಿಸಿದರು.
ಬಳಿಕ ‘ಶ್ರೀಕೃಷ್ಣ ರಾಯಭಾರ ಸುಧನ್ವ ಮೋಕ್ಷ’ ಪ್ರಸಂಗಗಳ ತಾಳಮದ್ದಳೆ ನಡೆಯಿತು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))