ಮದ್ದೂರು ತಾಲೂಕಿನ ಕೆ.ಹೊನ್ನಲಗೆರೆ ಗ್ರಾಮದ ಆರ್.ಕೆ.ವಿದ್ಯಾಸಂಸ್ಥೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು. ಸಮಾರಂಭದಲ್ಲಿ ದಿವಂಗತ ಯೋಧನ ಪತ್ನಿ ರಾಧಾ ಧ್ವಜಾರೋಹಣ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಕೆ.ಹೊನ್ನಲಗೆರೆ ಗ್ರಾಮದ ಆರ್.ಕೆ.ವಿದ್ಯಾಸಂಸ್ಥೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.ಸಮಾರಂಭದಲ್ಲಿ ದಿವಂಗತ ಯೋಧನ ಪತ್ನಿ ರಾಧಾ ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಶಿಕ್ಷಣ ಸಂಸ್ಥೆ ಕಾರ್ಯನಿರ್ವಾಹಕ ಅಧಿಕಾರಿ ಕೀರ್ತನ ಬಿ.ನಿಖಿಲ್ ಅವರು, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ದೇಶಪ್ರೇಮ ಬೆಳೆಸಿಕೊಳ್ಳಬೇಕು. ಒಳ್ಳೆಯ ನಾಗರಿಕ ಪ್ರಜೆಗಳಾಗಿ ದೇಶ ಕಾಯುವ ಸೈನಿಕರ ಬೆಂಬಲಕ್ಕೆ ನಿಲ್ಲಬೇಕು ಎಂದು ಮನವಿ ಮಾಡಿದರು.
ವ್ಯವಸ್ಥಾಪಕ ನಿರ್ದೇಶಕ ವಿನಯ್ ರಾಮಕೃಷ್ಣ ಮಾತನಾಡಿ, ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣ ಗಳ ಮೊರೆ ಹೋಗದೆ ಶಿಕ್ಷಣದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದರು.ಕಾರ್ಯಕ್ರಮದಲ್ಲಿ ಹುತಾತ್ಮ ಸೈನಿಕ ಮೆಣಸಗೆರೆಯ ಪ್ರಸನ್ನ ಕುಮಾರ್ ರವರ ತಾಯಿ ಕಮಲಮ್ಮ, ಪತ್ನಿ ರಾಧ, ಪ್ರಸ್ತುತ ಸೇವೆಗೆ ಸಲ್ಲಿಸುತ್ತಿರುವ ಸೈನಿಕರಾದ ಕೆ.ಹೊನ್ನಲಗೆರೆ ಎಚ್.ಸಿ.ಪ್ರಶಾಂತ್ ಅವರ ತಂದೆ ಚೆಲುವರಾಜು ಮತ್ತು ತಾಯಿ ಸಾವಿತ್ರಮ್ಮ, ಹುಣಸೆ ಮರದದೊಡ್ಡಿ ಎಚ್.ಟಿ.ರಾಜೇಗೌಡರ ತಂದೆ ತಮ್ಮಣ್ಣೇಗೌಡ, ನೀಲಕಂಠನಹಳ್ಳಿ ರಮೇಶ್ ರವರ ತಾಯಿ ವಸಂತ, ಎನ್.ಪಿ.ಪ್ರಸಾದ್ ರವರ ತಾಯಿ ಪುಷ್ಪಲತಾ, ಆಲೂರಿನ ಎ.ಎನ್.ಸಂತೋಷ್ ಅವರ ತಾಯಿ ಜಯಮ್ಮ ಅವರನ್ನು ಸನ್ಮಾನಿಸಲಾಯಿತು.
ಇದೇ ವೇಳೆ ಶಿಕ್ಷಣ ಸಂಸ್ಥೆ ವಾಹನ ಚಾಲಕರು ಮತ್ತು ಕುಟುಂಬ ವರ್ಗದವರು ಹಾಗೂ ಪತ್ರಕರ್ತರನ್ನು ಅಭಿನಂದಿಸಲಾಯಿತು. ವಿಶೇಷವಾಗಿ ಸಂಸ್ಥೆ ವಿದ್ಯಾರ್ಥಿಗಳು ಕೆ.ಬೆಳ್ಳೂರು ಗ್ರಾಮದಿಂದ ರಾಷ್ಟ್ರಧ್ವಜಗಳನ್ನು ಹಿಡಿದು ಸೈಕಲ್ ರ್‍ಯಾಲಿ ನಡೆಸಿ ಹೊನ್ನಲಗೆರೆ ಗ್ರಾಮದಲ್ಲಿ 80 ಅಡಿ ಉದ್ದ ದ ತ್ರಿವರ್ಣ ಧ್ವಜವನ್ನು ಹಿಡಿದು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಗ್ರಾಮಸ್ಥರು ಹಾಗೂ ಸಾರ್ವಜನಿಕರಲ್ಲಿ ರಾಷ್ಟ್ರಪ್ರೇಮದ ಬಗ್ಗೆ ಅರಿವು ಮೂಡಿಸಿದರು.ನಂತರ ವೇದಿಕೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆಗಳು ಒಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಿಕ್ಷಣ ಸಂಸ್ಥೆ ಆಡಳಿತ ಅಧಿಕಾರಿ ಮರಿಸ್ವಾಮಿಗೌಡ, ಪ್ರಾಂಶುಪಾಲರಾದ ಸತೀಶ್ ಬಾಬು, ಆರ್.ಪ್ರವೀಣ್, ಮುಖ್ಯ ಶಿಕ್ಷಕರಾದ ರಮೇಶ್, ಕಲ್ಯಾಣಿ, ಪ್ರಭಾವತಿ ಸೇರಿದಂತೆ ಬೋಧಕ ಮತ್ತು ಬೋಧಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಭಾಗವಹಿಸಿದ್ದರು.