ಮದ್ದೂರು ಬಂದ್ ಸಂಪೂರ್ಣ ಯಶಸ್ವಿ

| Published : Sep 10 2025, 01:03 AM IST

ಸಾರಾಂಶ

ಪಟ್ಟಣದ ರಾಮ್ ರಹೀಂ ನಗರ ಹಾಗೂ ಚನ್ನೇಗೌಡ ಬಡಾವಣೆಯಲ್ಲಿ ಮಹಿಳೆಯರ ಎರಡು ಗುಂಪುಗಳ ನಡುವೆ ನಡೆದ ಕೆಲವೊಂದು ಸಣ್ಣಪುಟ್ಟ ಘಟನೆಗಳನ್ನು ಹೊರತು ಪಡಿಸಿದರೆ ಬಂದ್ ಶಾಂತಿಯುತವಾಗಿದ್ದರೂ ಸಹ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣದಲ್ಲಿ ಭಾನುವಾರ ರಾತ್ರಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಮೇಲೆ ಅನ್ಯಕೋಮಿನ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವುದನ್ನು ಖಂಡಿಸಿ ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಮದ್ದೂರು ಬಂದ್ ಮಂಗಳವಾರ ಸಂಪೂರ್ಣ ಯಶಸ್ವಿಯಾಯಿತು.

ಪಟ್ಟಣದ ರಾಮ್ ರಹೀಂ ನಗರ ಹಾಗೂ ಚನ್ನೇಗೌಡ ಬಡಾವಣೆಯಲ್ಲಿ ಮಹಿಳೆಯರ ಎರಡು ಗುಂಪುಗಳ ನಡುವೆ ನಡೆದ ಕೆಲವೊಂದು ಸಣ್ಣಪುಟ್ಟ ಘಟನೆಗಳನ್ನು ಹೊರತು ಪಡಿಸಿದರೆ ಬಂದ್ ಶಾಂತಿಯುತವಾಗಿದ್ದರೂ ಸಹ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

ಬಂದ್ ಹಿನ್ನೆಲೆಯಲ್ಲಿ ಬೆಳಗಿನಿಂದಲೇ ವರ್ತಕರು, ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರು ತಮ್ಮ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ ಬಂದ್‌ಗೆ ಸ್ವಯಂ ಪ್ರೇರಿತವಾಗಿ ಬೆಂಬಲ ನೀಡಿದರು.

ಸರ್ಕಾರಿ ಕಚೇರಿ, ಬ್ಯಾಂಕ್‌ಗಳು, ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಸಾರಿಗೆ ಮತ್ತು ಖಾಸಗಿ ಬಸ್ ಗಳ ಸಂಚಾರ ಮಾಮೂಲಿಯಾಗಿತ್ತು. ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಬಂದ್ ಹಿನ್ನೆಲೆಯಲ್ಲಿ ಘಟನೆ ನಡೆದಿದ್ದ ಕೆಮ್ಮಣ್ಣುನಾಲೆ ಸರ್ಕಲ್ ಬಳಿ ಇರುವ ಮಸೀದಿ, ಹೊಳೆಬೀದಿ, ರಾಮ್ ರಹೀಂ ನಗರ, ಲೀಲಾವತಿ ಬಡಾವಣೆಯ ಮಸೀದಿಗಳಿಗೆ ದಕ್ಷಿಣ ವಲಯ ಐಜಿ ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಎಎಸ್ಪಿ ತಿಮ್ಮಯ್ಯ, ಡಿವೈಎಸ್ಪಿಗಳಾದ ಕೃಷ್ಣಪ್ಪ, ಲಕ್ಷ್ಮೀನಾರಾಯಣ ಪ್ರಸಾದ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪಟ್ಟಣದಲ್ಲಿ ಪರಿಸ್ಥಿತಿ ಸದ್ಯಕ್ಕೆ ಶಾಂತವಾಗಿದೆ.