ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಗೊರವನಹಳ್ಳಿ ಗ್ರಾಪಂ ಅನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡುವ ಸಂಬಂಧ ಕಚೇರಿಯ ಕಡತಗಳನ್ನು ಸಾಗಿಸುತ್ತಿದ್ದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ ಮಹಿಳೆಯರು ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ ಖಂಡಿಸಿ ಗ್ರಾಮಸ್ಥರು ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಪಟ್ಟಣದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.ಗೊರವನಹಳ್ಳಿ ಗ್ರಾಮಸ್ಥರ ಹೋರಾಟಕ್ಕೆ ಗೆಜ್ಜಲಗೆರೆ, ಚಾಮನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ರೈತರು, ಸಂಘಟನೆಗಳ ಮುಖಂಡರು ಭಾಗವಹಿಸಿ ಬೆಂಬಲ ಸೂಚಿಸಿದರು. ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ ಮದ್ದೂರು ಪೊಲೀಸ್ ಠಾಣೆ ಸಿಪಿಐ ನವೀನ್, ಇದಕ್ಕೆ ಕುಮ್ಮಕ್ಕು ನೀಡಿದ ತಾಪಂ ಇಒ ರಾಮಲಿಂಗಯ್ಯ, ಪಿಡಿಒ ಪೂರ್ಣಿಮಾ ಅವರುಗಳನ್ನು ಕೂಡಲೇ ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಮಹಿಳೆಯರು ಸೇರಿದಂತೆ ಸಾವಿರಾರು ಮಂದಿ ಮೆರವಣಿಗೆ ನಡೆಸಿದರು. ಶಾಸಕ ಕೆ.ಎಂ.ಉದಯ್, ಪೊಲೀಸ್ ಮತ್ತು ತಾಲೂಪಂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆ ಮೂಲಕ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಕೆಲಕಾಲ ಧರಣಿ ನಡೆಸಿ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದರು.ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿರುವ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ ಹಾಗೂ ಸೋಮನಹಳ್ಳಿ ಗ್ರಾಮಗಳನ್ನು ಕೈಬಿಡಬೇಕು ಎಂದು ಪಟ್ಟು ಹಿಡಿದು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಕೆಲಕಾಲ ಧರಣಿ ನಡೆಸಿದರು. ನಂತರ ಪ್ರತಿಭಟನಾಕಾರರು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ರೈತಪರ ಹೋರಾಟಗಾರ್ತಿ ಸುನಂದ ಜಯರಾಂ ಮಾತನಾಡಿ, ಮದ್ದೂರು ನಗರಸಭೆ ವ್ಯಾಪ್ತಿಗೆ ಗೆಜ್ಜಲಗೆರೆ, ಗೊರವನಹಳ್ಳಿ ಗ್ರಾಮಗಳ ಸೇರ್ಪಡೆ ಮಾಡುವ ವಿವಾದ ನ್ಯಾಯಾಲಯದ ವಿಚಾರಣೆ ಹಂತದಲ್ಲಿದೆ. ಆದರೆ, ಅಧಿಕಾರಿಗಳು ನ್ಯಾಯಾಲಯದ ಆದೇಶಕ್ಕೂ ಕಾಯದೆ ಶಾಸಕರ ಒತ್ತಡಕ್ಕೆ ಒಳಗಾಗಿ ಏಕಾಏಕಿ ಗ್ರಾಪಂ ಕಚೇರಿಗೆ ಬಂದು ಕಡತಗಳನ್ನು ಸಾಗಾಣಿಕೆ ಮಾಡಿರುವುದು ನ್ಯಾಯಾಲಯದ ನಿಂದನೆಗೆ ಅವಕಾಶ ಮಾಡಿಕೊಟ್ಟಿದೆ ಎಂದು ಕಿಡಿಕಾರಿದರು.
ಜನರನ್ನು ರಕ್ಷಣೆ ಮಾಡಬೇಕಾದ ಪೊಲೀಸರು ನೆಲದ ಕಾನೂನನ್ನು ಗೌರವಿಸದೆ ವಿಚಾರದಲ್ಲಿ ವಿವೇಚನೆ ಇಲ್ಲದೆ ಕಡತ ಸಾಗಿಸಲು ವಿರೋಧಿಸಿದ ಧರಣಿ ನಿರತ ಗೊರವನಹಳ್ಳಿ ಮಹಿಳೆಯರ ಮೇಲೆ ಮೃಗಗಳಂತೆ ವರ್ತಿಸಿದ್ದೀರಿ ಎಂದು ಪೊಲೀಸರಿಗೆ ಛೀಮಾರಿ ಹಾಕಿದರು.
ನಗರಸಭೆ ವ್ಯಾಪ್ತಿಗೆ ಗ್ರಾಪಂಗಳ ಸೇರ್ಪಡೆ ಮಾಡುವ ಬಗ್ಗೆ ಗೆಜ್ಜಲಗೆರೆ ಗೊರವನಹಳ್ಳಿ ಗ್ರಾಮಸ್ಥರು ಕಳೆದ 80 ದಿನಗಳಿಂದ ಅಹೋ ರಾತ್ರಿ ಧರಣಿ ನಡೆಸುತ್ತಿದ್ದರೂ ಸಹ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಮಾತ್ರ ಈ ವಿಚಾರದಲ್ಲಿ ಸತ್ತು ಹೋಗಿದೆ ಎಂದು ಆಕ್ರೋಶ ಹೊರ ಹಾಕಿದರು.ಪ್ರತಿಭಟನೆಯಲ್ಲಿ ಮುಖಂಡರಾದ ಶ್ರೀಲತಾ, ಗೊರವನಹಳ್ಳಿ ಪ್ರಸನ್ನ, ಸೋಶಿ ಪ್ರಕಾಶ್, ಜಿ.ಸಿ .ಶಿವಪ್ಪ, ಗ್ರಾಮದ ಯಜಮಾನರುಗಳಾದ ರವಿ, ಸಿದ್ದರಾಜು, ಸುರೇಶ, ಉಮೇಶ, ಅವಿನಾಶ್, ಮಹೇಶ, ಶಿವಪ್ಪ, ರೈತ ಸಂಘದ ಜಿಲ್ಲಾಧ್ಯಕ್ಷ ಇಂಡವಾಳು ಚಂದ್ರಶೇಖರ,ಮುಖಂಡರಾದ ಜಿ.ಎ .ಶಂಕರ್, ಲಿಂಗಪ್ಪಾಜಿ, ಶಿವಲಿಂಗಯ್ಯ, ಸಿದ್ದರಾಜು, ಶಂಕರೇಗೌಡ, ರಾಜಶೇಖರ್, ಕುಮಾರ್, ಶಿವ ಬೋರಯ್ಯ ಮತ್ತಿತರರು ಭಾಗವಹಿಸಿದ್ದರು. ಗ್ರಾಮಸ್ಥರು ಪ್ರತಿಭಟನೆ ಹಿನ್ನೆಲೆಯಲ್ಲಿ ಮದ್ದೂರು ನಗರಸಭೆ ಕಚೇರಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.