ಕದಂಬ ನದಿ ತೀರದ ಪುರಾಣ ಪ್ರಸಿದ್ಧ ಶ್ರೀ ಹೊಳೆ ಆಂಜನೇಯಸ್ವಾಮಿ, ಕೋಟೆ ಬೀದಿ ಶ್ರೀಉಗ್ರನರಸಿಂಹ ಸ್ವಾಮಿ, ಹಳೇ ಎಂ.ಸಿ.ರಸ್ತೆ ಆಂಜನೇಯ ಸ್ವಾಮಿ, ಹಾಗೂ ತಾಲೂಕಿನ ಕದಲಿಪುರದ ಶ್ರೀಲಕ್ಷ್ಮಿ ವೆಂಕಟೇಶ್ವರ ಮತ್ತು ಆಬಲವಾಡಿ ಗ್ರಾಮದ ಶ್ರೀತೋಪಿನ ತಿಮ್ಮಪ್ಪ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು.

ಕನ್ನಡಪ್ರಭ ವಾರ್ತೆ ಮದ್ದೂರು

ಕಡೇ ಶ್ರಾವಣ ಶನಿವಾರದ ಅಂಗವಾಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ವಿಜೃಂಭಣೆಯಿಂದ ಜರುಗಿದವು.

ಕದಂಬ ನದಿ ತೀರದ ಪುರಾಣ ಪ್ರಸಿದ್ಧ ಶ್ರೀ ಹೊಳೆ ಆಂಜನೇಯಸ್ವಾಮಿ, ಕೋಟೆ ಬೀದಿ ಶ್ರೀಉಗ್ರನರಸಿಂಹ ಸ್ವಾಮಿ, ಹಳೇ ಎಂ.ಸಿ.ರಸ್ತೆ ಆಂಜನೇಯ ಸ್ವಾಮಿ, ಹಾಗೂ ತಾಲೂಕಿನ ಕದಲಿಪುರದ ಶ್ರೀಲಕ್ಷ್ಮಿ ವೆಂಕಟೇಶ್ವರ ಮತ್ತು ಆಬಲವಾಡಿ ಗ್ರಾಮದ ಶ್ರೀತೋಪಿನ ತಿಮ್ಮಪ್ಪ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು.

ಮುಂಜಾನೆಯಿಂದಲೇ ಸ್ಥಳೀಯರು ಸೇರಿದಂತೆ ಬೆಂಗಳೂರು, ಮೈಸೂರು, ಮಂಡ್ಯ ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಅಸಂಖ್ಯಾತ ಭಕ್ತಾದಿಗಳು ದೇವರ ದರ್ಶನ ಪಡೆದು ಧನ್ಯತಾ ಭಾವ ಮೆರೆದರು.

ಶ್ರೀ ಹೊಳೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಮುಂಜಾನೆ ಪ್ರಧಾನ ಅರ್ಚಕ ಪ್ರದೀಪ ಆಚಾರ್ಯ ನೇತೃತ್ವದಲ್ಲಿ ಸ್ವಾಮಿ ಮೂಲ ವಿಗ್ರಹಕ್ಕೆ ಮಧು, ಪಂಚಾಮೃತ ಅಭಿಷೇಕ ಪುಷ್ಪಾಲಕಾರದೊಂದಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು.

ನಂತರ ಸೀತಾರಾಮ ಲಕ್ಷ್ಮಣ ಸಮೇತ ಹನುಮನ ಉತ್ಸವ ಮೂರ್ತಿಗಳನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡಿ ದೇಗುಲದ ಪ್ರಾಂಗಣದಲ್ಲಿ ಮೆರವಣಿಗೆ ನಡೆಸಲಾಯಿತು. ದೇವರ ದರ್ಶನಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆ ಮಾಡಲಾಯಿತು.

ಪಟ್ಟಣದ ಹಳೆ ಬಸ್ ನಿಲ್ದಾಣದ ವಿಶ್ವೇಶ್ವರ ಸ್ವಾಮಿ ದೇಗುಲದಲ್ಲಿ ಸಹ ಕಡೆ ಶ್ರಾವಣ ಶನಿವಾರದ ಅಂಗವಾಗಿ ವಿಶೇಷ ಪೂಜೆಯೊಂದಿಗೆ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.