ಕೆಸ್ತೂರು ಮತ್ತು ಸೋಮನಹಳ್ಳಿ ಜಿಪಂ ವ್ಯಾಪ್ತಿಯ ಶಿಂಷಾ ಎಡ ದಂಡೆ ನಾಲೆಯ ನೀರನ್ನು ಹೊರತುಪಡಿಸಿ ಬೇರೆ ಯಾವ ಜಲ ಮೂಲಗಳಿಲ್ಲ. ಹೀಗಾಗಿ ಶಿಂಷಾ ನದಿ ನೀರನ್ನು ಬಳಸಿಕೊಂಡು ಏತ ನೀರಾವರಿ ಯೋಜನೆ ಮೂಲಕ ಎರಡು ತಿಂಗಳ ಅವಧಿಯಲ್ಲಿ ಈ ಭಾಗದ ಕೆರೆಗಳನ್ನು ತುಂಬಿಸಲು ಈಗಾಗಲೇ ಮಹತ್ವದ ಯೋಜನೆ ರೂಪಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಅಡಗನಹಳ್ಳಿ ಹಾಗೂ ತೊರೆಶೆಟ್ಟಿಹಳ್ಳಿ ಗ್ರಾಮಗಳಲ್ಲಿ ಶಿಂಷಾ ಎಡ ದಂಡೆ ವ್ಯಾಪ್ತಿಯ ನಾಲೆಗಳ ಅಭಿವೃದ್ಧಿಗೆ ಅಂದಾಜು 2 ಕೋಟಿ ರು. ವೆಚ್ಚದಲ್ಲಿ ಕಾಮಗಾರಿಗೆ ಶಾಸಕ ಕೆ.ಎಂ.ಉದಯ್ ಚಾಲನೆ ನೀಡಿದರು.ಕೆಸ್ತೂರು ಮತ್ತು ಸೋಮನಹಳ್ಳಿ ಜಿಪಂ ವ್ಯಾಪ್ತಿಯ ಶಿಂಷಾ ಎಡ ದಂಡೆ ನಾಲೆಯ ನೀರನ್ನು ಹೊರತುಪಡಿಸಿ ಬೇರೆ ಯಾವ ಜಲ ಮೂಲಗಳಿಲ್ಲ. ಹೀಗಾಗಿ ಶಿಂಷಾ ನದಿ ನೀರನ್ನು ಬಳಸಿಕೊಂಡು ಏತ ನೀರಾವರಿ ಯೋಜನೆ ಮೂಲಕ ಎರಡು ತಿಂಗಳ ಅವಧಿಯಲ್ಲಿ ಈ ಭಾಗದ ಕೆರೆಗಳನ್ನು ತುಂಬಿಸಲು ಈಗಾಗಲೇ ಮಹತ್ವದ ಯೋಜನೆ ರೂಪಿಸಲಾಗಿದೆ ಎಂದರು.
ಪ್ರಸ್ತುತವಿರುವ ಏತ ನೀರಾವರಿ ಯೋಜನೆಗಳ ಪೈಪ್ ಲೈನ್ ಸಾಕಷ್ಟು ಕಿರಿದಾಗಿದ್ದು, ಕೆರೆಗಳನ್ನು ತುಂಬಿಸಲು ಬಹಳ ದಿನಗಳು ಬೇಕಾಗಿದೆ. ಹೀಗಾಗಿ ಅವುಗಳನ್ನು ತೆರವುಗೊಳಿಸಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ನೀರು ತುಂಬಿಸುವ ಮಹತ್ವದ ಯೋಜನೆಗಳಿಗೆ ಜಲ ಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಅವರ ಬಳಿ ಎರಡು ಮೂರು ದಿನಗಳಲ್ಲಿ ಸಭೆ ನಡೆಸಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸುವ ಸಂಬಂಧ ಈಗಾಗಲೇ ಆರೋಗ್ಯ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಚಿವರು ನಮ್ಮ ಬೇಡಿಕೆಗೆ ಸ್ಪಂದಿಸಿದ್ದು, ಶೀಘ್ರ ಅನುದಾನ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಪೇಟೆ ಬೀದಿ ಅಗಲೀಕರಣ ಯೋಜನೆಗೆ ಆರ್ಥಿಕ ಇಲಾಖೆಯಿಂದ ಸ್ವಲ್ಪ ಗೊಂದಲವಿತ್ತು. ಅಲ್ಲಿಯೂ ಅನುಮೋದನೆ ದೊರೆತಿದೆ. ಎಲ್ಲಾ ಪ್ರಕ್ರಿಯೆಗಳು ಪ್ರಾರಂಭಗೊಂಡು ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.ನಮಗೆ ಅಧಿಕಾರ ಇರಲಿ ಬಿಡಲಿ ನಾನು ರೈತರ ಪರ ನಿಲ್ಲುತ್ತೇನೆ. ಸರ್ಕಾರದ ಪರ ಹೋರಾಟ ಮಾಡಿದರೂ ಸಹ ನಾನು ರೈತರ ಜೊತೆಗೆ ನಿಲ್ಲುತ್ತೇನೆ. ನಮ್ಮ ನೀರನ್ನು ನಾವು ಬಳಸಿಕೊಳ್ಳೋಕೆ ಸರ್ಕಾರ ನಮಗೆ ಮೊದಲ ಆಧ್ಯತೆ ನೀಡಬೇಕೆಂದು ಆಗ್ರಹಿಸಿದರು.
ಇದೇ ವೇಳೆ ಮನ್ ಮುಲ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ತಾಪಂ ಮಾಜಿ ಅಧ್ಯಕ್ಷ ನಾಗೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ದಾಸೇಗೌಡ, ಮುಖಂಡರಾದ ಸಿಪಾಯಿ ಶ್ರೀನಿವಾಸ್, ಅಡಗನಹಳ್ಳಿ ಧನು, ಹರೀಶ್, ರೈತ ಮುಖಂಡ ತೂಬಿನಕೆರೆ ವಿನೋದ್ ಬಾಬು, ಮಹಾಲಿಂಗು, ಕಾವೇರಿ ನೀರಾವರಿ ನಿಗಮದ ಇಇ ನಾಗರಾಜ್, ಮುಖಂಡರು, ಗ್ರಾಮಸ್ಥರು ಇದ್ದರು.ಬಿಜೆಪಿ ವಿರುದ್ಧ ಉದಯ್ ವಾಗ್ದಾಳಿಮದ್ದೂರು:
ಅಮಿತ್ ಶಾ ಅವರನ್ನು ಸಿಬಿಐ ಜೈಲಿಗೆ ಹಾಕಿತ್ತು. ಗಡಿಪಾರು ಆಗಿದ್ದವರೇ ಇಂದು ಕೇಂದ್ರ ಗೃಹ ಸಚಿವರಾಗಿದ್ದಾರೆ. ಹೀಗಾಗಿ ಸಚಿವ ನಾಗೇಂದ್ರ ರಾಜೀನಾಮೆ ಕೇಳಲು ಬಿಜೆಪಿಯವರಿಗೆ ನಾಚಿಕೆಯಾಗಬೇಕು ಎಂದು ಶಾಸಕ ಕೆ.ಎಂ.ಉದಯ್ ವಾಗ್ದಾಳಿ ನಡೆಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ. ಎಲ್ಲದಕ್ಕೂ ವಿರೋಧ ಮಾಡ್ಬೇಕು ಅನ್ನೋರು ವಿರೋಧ ಮಾಡುತ್ತಾರೆ. ಹೀಗಾಗಿ ಸಚಿವ ನಾಗೇಂದ್ರ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ಪ್ರತಿಭಟನೆ ವಿರುದ್ಧ ಕಿಡಿಕಾರಿದರು.
ಬಿಜೆಪಿಗೆ ಬೇರೆ ಯಾವುದೇ ಕೆಲಸ ಇಲ್ಲ. ಬರೀ ಪ್ರತಿಭಟನೆ ಮಾಡ್ಕೊಂಡು ಹೋಗುತ್ತಿದ್ದಾರೆ. ನ್ಯಾಯಾಲಯವೇ ಸಚಿವ ನಾಗೇಂದ್ರ ಅವರಿಗೆ ಜಾಮೀನು ನೀಡಿದೆ. ಹೀಗಾಗಿ ರಾಜೀನಾಮೆ ನೀಡುವ ಪ್ರಮೇಯವೇ ಬರುವುದಿಲ್ಲ ಎಂದರು.