ವಿಧಾನ ಪರಿಷತ್ ಸದಸ್ಯ, ಭಾರತಿ ಎಜುಕೇಷನ್ ಟ್ರಸ್ಟ್ ಹಾಗೂ ಗಾಂಧಿ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಮಧು ಜಿ.ಮಾದೇಗೌಡರ 61ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ಮಮತೆಯ ಮಡಿಲು ಆಶ್ರಯದಲ್ಲಿ ರೋಗಿಗಳ ಸಂಬಂಧಿಕರಿಗೆ ಉಪಾಹಾರ ವಿತರಣೆ.
ಕನ್ನಡಪ್ರಭ ವಾರ್ತೆ ಮಂಡ್ಯ
ವಿಧಾನ ಪರಿಷತ್ ಸದಸ್ಯ, ಭಾರತಿ ಎಜುಕೇಷನ್ ಟ್ರಸ್ಟ್ ಹಾಗೂ ಗಾಂಧಿ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಮಧು ಜಿ.ಮಾದೇಗೌಡರ 61ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ಮಮತೆಯ ಮಡಿಲು ಆಶ್ರಯದಲ್ಲಿ ರೋಗಿಗಳ ಸಂಬಂಧಿಕರಿಗೆ ಉಪಾಹಾರ ವಿತರಿಸಲಾಯಿತು.ನಗರದ ಮಿಮ್ಸ್ ಆಸ್ಪತ್ರೆ ಹೆರಿಗೆ ವಾರ್ಡ್‌ನ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿದ ನಂತರ ಪೋಷಕರು, ಸಂಬಂಧಿಕರಿಗೆ ಮಮತೆಯ ಮಡಿಲು ಆಶ್ರಯದಲ್ಲಿ ಉಪಾಹಾರ ವಿತರಣೆ ನಡೆಯಿತು.
ಭಾರತಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ಮಾತನಾಡಿ, ಮಧು ಜಿ.ಮಾದೇಗೌಡರ ಹುಟ್ಟುಹಬ್ಬದಂದು ಅವರ ರಾಜಕೀಯ ಏಳಿಗೆಗೆ ಒಳಿತಾಗಲೆಂದು ಹಾರೈಸಿ ಜಿಲ್ಲಾಸ್ಪತ್ರೆ ರೋಗಿಗಳು ಮತ್ತು ಪೋಷಕರಿಗೆ ಆಹಾರ ವಿತರಿಸಿ ಶುಭ ಹಾರೈಸಲಾಗಿದೆ ಎಂದರು.ನಿವೃತ್ತ ಕಾರ್ಯಪಾಲಕ ಅಭಿಯಂತರ ಬಸವರಾಜೇಗೌಡ ಮಾತನಾಡಿ, ದಿ.ಜಿ.ಮಾದೇಗೌಡರು ರಾಜ್ಯ ಕಂಡ ಅಪ್ರತಿಮ ರೈತ ಹೋರಾಟಗಾರರು ಹಾಗೂ ರಾಜಕಾರಣಿ. ಹಳ್ಳಿಗಾಡಿನ ಮಕ್ಕಳಿಗೆ ಶಿಕ್ಷಣ ಮತ್ತು ಆರೋಗ್ಯ ಸೇವೆ ಒದಗಿಸಬೇಕೆಂಬ ಹಂಬಲದಿಂದ ಶಿಕ್ಷಣ ಸಂಸ್ಥೆ ಮತ್ತು ಆಸ್ಪತ್ರೆ ಆರಂಭಿಸಿ ಜನಾನುರಾಗಿಯಾಗಿ ಕಾರ್ಯ ನಿರ್ವಹಿಸಿದ್ದರು. ಅದೇ ರೀತಿ ಮಧು ಮಾದೇಗೌಡರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಮಧು ಮಾದೇಗೌಡರ ಸಾಮಾಜಿಕ ಕಳಕಳಿಯಿಂದ ಶಿಕ್ಷಣ, ಆರೋಗ್ಯ ಹಾಗೂ ಧಾರ್ಮಿಕ ಸೇವೆಯ ಜೊತೆ ಮಹಾತ್ಮಾ ಗಾಂಧೀಜಿಯವರ ಸರಳತೆ ಮತ್ತು ಸಂದೇಶವನ್ನು ಸಾರುವ ಕಾರ್ಯದಲ್ಲಿ ವಿಧಾನ ಪರಿಷತ್ ಸದಸ್ಯರು ಸೇವೆಗೈಯ್ಯುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಭಾರತೀನಗರದ ಶ್ರೀವೆಂಕಟೇಶ್ವರ ದೇವಾಲಯ, ಶ್ರೀಚಾಮುಂಡೇಶ್ವರಿ ದೇವಾಲಯ, ಹನುಮಂತನಗರದ ಆತ್ಮಲಿಂಗೇಶ್ವರ ದೇವಾಲಯ, ಕಾರ್ಕಳ್ಳಿಯ ಬಸವೇಶ್ವರ ದೇವಾಲಯ, ಮದ್ದೂರಿನ ಹೊಳೇ ಆಂಜನೇಯ, ವೈದ್ಯನಾಥೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಧು ಅವರಿಗೆ ರಾಜಕೀಯದಲ್ಲಿ ಉನ್ನತ ಹುದ್ದೆ ದೊರೆತು ಜಿಲ್ಲೆಯ ಜನರ ಸೇವೆ ಮಾಡುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಲಾಗುವುದು ಎಂದರು.
ಮಧು ಮಾದೇಗೌಡರ ಜನ್ಮ ದಿನದ ಅಂಗವಾಗಿ ಡಿ.29ರಂದು ಅಭಿನಂದನಾ ಸಮಾರಂಭ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಭಾರತಿ ಕಾಲೇಜಿನ ಆಡಳಿತಾಧಿಕಾರಿ ಜವರೇಗೌಡ ಮಾತನಾಡಿ, ಕಾಲೇಜಿನ 13 ಸಾವಿರ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಿ ಸಂಸ್ಥೆ ಅಧ್ಯಕ್ಷ ಮಧು ಮಾದೇಗೌಡರ ಹುಟ್ಟುಹಬ್ಬ ಆಚರಿಸಲಾಯಿತು ಎಂದರು.
ಈ ವೇಳೆ ಮುಖಂಡರಾದ ಜಿ.ಎನ್.ಕೆಂಪರಾಜು, ಯೋಗೇಶ್, ದೇವೇಗೌಡ, ಪ್ರೊ.ರಾಜಣ್ಣ, ಪ್ರೊ.ನಾಗೇಂದ್ರ, ಅಂಜನಾ ಶ್ರೀಕಾಂತ್, ಹನಕೆರೆ ನಾಗಪ್ಪ, ಕಾರಸವಾಡಿ ಸಿದ್ದೇಗೌಡ, ಬಸವರಾಜು, ಮಂಗಲ ಎಂ.ಯೋಗೇಶ್ ಇತರರು ಹಾಜರಿದ್ದರು.