ಸಾರಾಂಶ
ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯ ಪಟ್ಟಿಯಲ್ಲಿ ಪರಿಶಿಷ್ಟದ 15 ಜಾತಿಗಳ ಮುಂದೆ ಇರುವ ಕ್ರೈಸ್ತ ಪದವನ್ನು ತೆಗೆದು ಹಾಕಬೇಕು.
ಬಳ್ಳಾರಿ: ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯ ಪಟ್ಟಿಯಲ್ಲಿ ಪರಿಶಿಷ್ಟದ 15 ಜಾತಿಗಳ ಮುಂದೆ ಇರುವ ಕ್ರೈಸ್ತ ಪದವನ್ನು ತೆಗೆದು ಹಾಕಬೇಕು. ಇಲ್ಲದಿದ್ದರೆ ಸಮೀಕ್ಷೆ ಬಹಿಷ್ಕರಿಸಲಾಗುವುದು ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ ಎಚ್.ಹನುಮಂತಪ್ಪ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೊದಲಿಗೆ 51 ಜಾತಿಗಳ ಮುಂದೆ ಕ್ರೈಸ್ತ ಪದ ಸೇರಿಸಲಾಗಿತ್ತು. ತೀವ್ರ ವಿರೋಧದ ಬಳಿಕ ತೆಗೆಯಲಾಯಿತು. ಆದರೆ, ಪರಿಶಿಷ್ಟ ಜಾತಿಯ ಹೆಸರು ಮುಂದಿನ ಕ್ರೈಸ್ತ ಪದವನ್ನು ತೆರವು ಮಾಡಿಲ್ಲ. ಸಮೀಕ್ಷೆಯ ಆಯ್ಯಪ್‌ನಲ್ಲಿ ಸಹ ಡಿಲಿಟ್ ಮಾಡಿಲ್ಲ. ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ ಸಮುದಾಯವನ್ನು ಕ್ರೈಸ್ತ ಸಮಾಜಕ್ಕೆ ಮತಾಂತರಗೊಳಿಸುವ ಹುನ್ನಾರ ಎಂಬುದು ಮೇಲ್ನೊಟಕ್ಕೆ ಕಂಡು ಬರುತ್ತಿದೆ. ಕೂಡಲೇ ಕ್ರೈಸ್ತ ಪದ ತೆಗೆಯದೇ ಹೋದರೆ ಮಾದಿಗ ಸಮಾಜ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಎಚ್ಚರಿಸಿದರು.ಸಮೀಕ್ಷೆಯ ಪಟ್ಟಿಯಲ್ಲಿ ಅಧಿಕೃತ ಜಾತಿಪಟ್ಟಿಯಲ್ಲಿ ಇಲ್ಲದ ಸಮುದಾಯಗಳನ್ನು ಸೃಷ್ಟಿ ಮಾಡಲಾಯಿತು. ಕ್ರೈಸ್ತ ಎಂಬ ಪದವನ್ನು ಮತಾಂತರ ದೃಷ್ಟಿಯಿಂದಲೇ ಸೇರಿಸಲಾಯಿತು. ರಾಜ್ಯ ಸರ್ಕಾರ ಯಾವುದೋ ಒತ್ತಡಕ್ಕೆ ಮಣಿದು ಹಿಂದೂ ಸಮಾಜವನ್ನು ದುಷ್ಕೃತ್ಯಕ್ಕೆ ಮುಂದಾಗಿರುವುದು ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಗಮೋಹನದಾಸ್ ವರದಿ ನೀಡುವ ವೇಳೆ ಪರಿಶಿಷ್ಟ ಜಾತಿಯ ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯನ್ನು ಮಾಡಲಾಗಿದೆ. ಸರ್ಕಾರ ಹಾಗೂ ಪರಿಶಿಷ್ಟ ಸಮುದಾಯ ವರದಿಯನ್ನು ಒಪ್ಪಿಕೊಂಡಾಗಿದೆ. ಮತ್ತೆ ಇದೀಗ ಸಮೀಕ್ಷೆ ಮಾಡಿಸುತ್ತಿರುವುದರ ಹಿಂದಿನ ಉದ್ದೇಶ ಏನು? ಎಂದು ಹನುಮಂತಪ್ಪ ಪ್ರಶ್ನಿಸಿದರು.ಆತುರವಾಗಿ ಯಾವುದೇ ಸಿದ್ಧತೆಯಿಲ್ಲದೇ ಸಮೀಕ್ಷೆ ಮಾಡುವುದು ಸರಿಯಲ್ಲ. ಸರ್ಕಾರಕ್ಕೆ ನಿಜಕ್ಕೂ ಕಾಳಜಿಯಿದ್ದರೆ ಕೂಡಲೇ ಸಮೀಕ್ಷೆ ಪ್ರಕ್ರಿಯೆ ಸ್ಥಗಿತಗೊಳಿಸಬೇಕು. ಸಮರ್ಪಕವಾಗಿ ಸಮೀಕ್ಷೆಯಾಗಬೇಕಾದಲ್ಲಿ ಪೂರಕ ಸಿದ್ಧತೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಜನರ ತೆರಿಗೆ ಹಣ ವೃಥಾ ಪೋಲಾಗುತ್ತದೆ ಎಂದು ಹೇಳಿದರು.
ಸಮುದಾಯದ ಮುಖಂಡರಾದ ರಾಜೇಶ್, ಸೋಮಶೇಖರ್, ಅರುಣಾಚಲಂ, ಆರ್.ಶಿವಶಂಕರ್, ನರಸಪ್ಪ, ಎಚ್.ಮಾರೆಣ್ಣ, ನಾರಾಯಣಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.