ಸಾರಾಂಶ
ಸರ್ಕಾರ ಹಸಿಸುಳ್ಳು ಹೇಳುತ್ತಾ ಬಂದಿದೆ.
ಹೂವಿನಹಡಗಲಿ: ಸದನದಲ್ಲಿ ಮಾದಿಗರ ಒಳಮೀಸಲಾತಿ ಕುರಿತು ಶಾಸಕರು ಚರ್ಚಿಸಲು ಒತ್ತಾಯಿಸಿ ಮಾದಿಗರ ಒಳ ಮೀಸಲಾತಿ ಹೋರಾಟ ಸಮಿತಿಯು ಶಾಸಕ ಕೃಷ್ಣನಾಯ್ಕ ಮನೆ ಎದುರು ಶನಿವಾರ ತಮಟೆ ಚಳವಳಿ ನಡೆಸಿದರು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಮದಲಗಟ್ಟಿ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ, ನಂತರದಲ್ಲಿ ತಾಲೂಕಿನ ಕೊಯಿಲಾರಗಟ್ಟಿ ತಾಂಡದಲ್ಲಿರುವ ಶಾಸಕ ಕೃಷ್ಣನಾಯ್ಕ ಮನೆ ಮುಂದೆ ನೂರಾರು ತಮಟೆ ಬಾರಿಸಿ ಮನವಿ ಸಲ್ಲಿಸಿದರು. ಹೋರಾಟ ಸಮಿತಿ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಮಾತನಾಡಿ, ಆ.1ರಂದು ಸುಪ್ರೀಂಕೊರ್ಟಿನ ಐತಿಹಾಸಿಕ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಒಳ ಮೀಸಲಾತಿ ಜಾರಿ ಮಾಡುವ ಅಧಿಕಾರವನ್ನು ಆಯಾ ರಾಜ್ಯ ಸರ್ಕಾರಗಳಿಗೆ ಆಯ್ಕೆ ಕೊಟ್ಟು 4 ತಿಂಗಳು ಕಳೆದಿವೆ. ಆದರೂ ಈವರೆಗೂ ರಾಜ್ಯ ಸರ್ಕಾರ ಕುಂಟು ನೆಪ ಹುಡುಕುತ್ತಾ ಮೀನಮೇಷ ಎನಿಸುತ್ತಿದೆ ಎಂದು ದೂರಿದರು.ಸರ್ಕಾರ ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಆಯೋಗ ರಚಿಸಿ, 2 ತಿಂಗಳಲ್ಲಿ ಆಯೋಗ ವರದಿ ಕೊಡುತ್ತದೆ ಎಂದು, ಸರ್ಕಾರ ಹಸಿಸುಳ್ಳು ಹೇಳುತ್ತಾ ಬಂದಿದೆ. ಈಗ್ಗೆ 45 ದಿನಗಳಾದರೂ ಆಯೋಗ ತನ್ನ ಕೆಲಸ ಆರಂಭಿಸಿಯೇ ಇಲ್ಲ. ಆಯೋಗವನ್ನು ನಾಮಕವಾಸ್ತೆ ಘೋಷಿಸಿರುವುದು ಬಿಟ್ಟರೆ, ಆಯೋಗಕ್ಕೆ ಕಛೇರಿ, ಸಿಬ್ಬಂದಿ, ಹಣಕಾಸಿನ ನೆರವು ಯಾವುದನ್ನೂ ಕೊಟ್ಟಿಲ್ಲ ಎಂದು ಆರೋಪಿಸಿದರು.
ಮುಖಂಡ ಎಚ್.ಪೂಜೆಪ್ಪ, ಜೆ.ಶಿವರಾಜ ಮಾತನಾಡಿ, ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಒಳ ಮೀಸಲಾತಿ ಜಾರಿ ಮಾಡುವುದಾಗಿ ಹಸಿಸುಳ್ಳು ಹೇಳಿದ್ದು, ಇದೇ ಕಾಂಗ್ರೆಸ್ ನಾಯಕರು ಈಗ ಸಚಿವ ಸಂಪುಟ ಸಭೆಯನ್ನು ಯಾವುದೇ ಸಿದ್ಧತೆಯಿಲ್ಲದೆ ನಡೆಸಿ, ಆಮೆ ವೇಗದಲ್ಲಿ ಸಾಗುತ್ತಿರುವುದನ್ನು ನೋಡಿದರೆ ಈ ಸರ್ಕಾರಕ್ಕೆ ಮೀಸಲಾತಿಯಲ್ಲಿ ಅವಕಾಶ ವಂಚಿತ ಅಸ್ಪೃಶ್ಯ ಸಮುದಾಯಗಳಿಗೆ ಒಳ ಮೀಸಲಾತಿ ಒದಗಿಸಲು ಮನಸ್ಸಿಲ್ಲ ಎಂಬುವುದು ಸ್ಪಷ್ಟವಾಗುತ್ತದೆ ಎಂದರು.ಒಳ ಮೀಸಲಾತಿ ವಿರೋಧಿಗಳ ಒತ್ತಡಕ್ಕೆ ಮಣಿದು ಸರ್ಕಾರ ಈ ಕಾಟಾಚಾರದ ಆಯೋಗ ನೇಮಕದ ನಾಟಕವಾಡುತ್ತಿದೆ, ಮಾದಿಗರನ್ನು ಓಟ ಬ್ಯಾಂಕ್ ಮಾಡಿಕೊಂಡಿದೆ ಎಂದರು.
ಹಲಗಿ ಸುರೇಶ, ಕೆ.ಪುತ್ರೇಶ ಮಾತನಾಡಿ, ಒಳ ಮೀಸಲಾತಿ ಜಾರಿ ಆಗುವವರೆಗೂ ಸರ್ಕಾರಿ ಯಾವುದೇ, ನೇಮಕಾತಿ ಮಾಡಬಾರದೆಂಬ ನಮ್ಮ ಬೇಡಿಕೆಗೆ ಒಪ್ಪಿ ಕೊಂಡಂತೆ ನಾಟಕ ಮಾಡುತ್ತಿರುವ, ರಾಜ್ಯ ಸರ್ಕಾರ ಹಲವು ಇಲಾಖೆಗಳಲ್ಲಿ ಸಧ್ಯ ನೇಮಕಾತಿ ಪ್ರಕ್ರಿಯೆಗಳನ್ನು ಮಾಡುತ್ತಲೆ ಬಂದಿದೆ. ಈ ಕೂಡಲೇ ಶಾಸಕರು ಒಳಮೀಸಲಾತಿ ಪರವಾಗಿ ಸದನದಲ್ಲಿ ಧ್ವನಿ ಎತ್ತಿ ಶೋಷಿತ ಸಮಾಜಕ್ಕೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ದುರ್ಗೇಶ ಹೊಳಗುಂದಿ, ಪಿ.ನಿಂಗಪ್ಪ, ಎಸ್.ನಿಂಗರಾಜ, ಗೋಣೇಶ ಮಕರಬ್ಬಿ ಸೇರಿದಂತೆ ಇತರರು ಶಾಸಕರ ಆಪ್ತ ಸಹಾಯಕ ಮಲ್ಲಣ್ಣ ಇವರಿಗೆ ಮನವಿ ಸಲ್ಲಿಸಿದರು.