ಕಾಂಗ್ರೆಸ್ ಸರ್ಕಾರದಿಂದ ಮಾದಿಗ ಸಮಾಜಕ್ಕೆ ವಂಚನೆ: ಸಿ.ಅನ್ನದಾನಿ

| Published : Jan 31 2025, 12:45 AM IST

ಕಾಂಗ್ರೆಸ್ ಸರ್ಕಾರದಿಂದ ಮಾದಿಗ ಸಮಾಜಕ್ಕೆ ವಂಚನೆ: ಸಿ.ಅನ್ನದಾನಿ
Share this Article
  • FB
  • TW
  • Linkdin
  • Email

ಸಾರಾಂಶ

ಒಳ ಮೀಸಲಾತಿ ಜಾರಿಗೊಳಿಸಲು ಕಾಂಗ್ರೆಸ್ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತಿದೆ. ೨೦೨೩ರ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ಘೋಷಣೆ ಮಾಡಿ, ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾದರೂ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೊದಲ ಅಧಿವೇಶನದಲ್ಲೇ ಸದಾಶಿವ ವರದಿ ಆಯೋಗದ ವರದಿಯನ್ವಯ ಒಳ ಮೀಸಲಾತಿ ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈವರೆಗೂ ಅದನ್ನು ಅನುಷ್ಠಾನಗೊಳಿಸದೆ ಮಾದಿಗ ಸಮುದಾಯಕ್ಕೆ ದ್ರೋಹವೆಸಗಿದ್ದಾರೆ ಎಂದು ಭೀಮ್ ಆರ್ಮಿ ಸೌತ್ ಇಂಡಿಯಾ ಕರ್ನಾಟಕ ಸಂಘಟನೆ ಸಂಸ್ಥಾಪಕ ಸಿ.ಅನ್ನದಾನಿ ಆಕ್ರೋಶ ವ್ಯಕ್ತಪಡಿಸಿದರು.

ಒಳ ಮೀಸಲಾತಿ ಜಾರಿಗೊಳಿಸಲು ಕಾಂಗ್ರೆಸ್ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತಿದೆ. ೨೦೨೩ರ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ಘೋಷಣೆ ಮಾಡಿ, ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾದರೂ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಒಳಮೀಸಲಾತಿ ಜಾರಿಗೆ ಎಂಫರಿಕಲ್ ದತ್ತಾಂಶ ದೊರೆಯುತ್ತಿಲ್ಲ ಎಂದು ನೆಪ ಒಡ್ಡುತ್ತಿರುವ ಕಾಂಗ್ರೆಸ್ ಸರ್ಕಾರ, ನ್ಯಾಯಮೂರ್ತಿ ಎ.ಜೆ.ಸದಾಶಿವ ವರದಿ ಅವೈಜ್ಞಾನಿಕ ಎಂದು ಮೂಲೆಗುಂಪು ಮಾಡಿ ಮತ್ತೋರ್ವ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್‌ರವರ ಅಧ್ಯಕ್ಷತೆಯಲ್ಲಿ ಹೊಸ ಸಮಿತಿ ನೇಮಕ ಮಾಡುವ ಮೂಲಕ ಈ ಹಿಂದಿನ ನ್ಯಾಯಮೂರ್ತಿಗೆ ಅವಮಾನ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಾವುಗಳು ಮಲತಾಯಿ ಮಕ್ಕಳಾಗಿದ್ದೇವೆ. ನಮ್ಮ ಸಮುದಾಯಕ್ಕೆ ರಾಹುಲ್‌ಗಾಂಧಿ ಅವರೇ ನಾಯಕರು, ಅವರು ರಾಜ್ಯದಲ್ಲಿ ಒಳ ಮೀಸಲಾತಿ ಜಾರಿ ಮಾಡದಿದ್ದರೆ, ರಾಜ್ಯದ ಸಮುದಾಯವು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸುತ್ತದೆ ಎಂದು ಎಚ್ಚರಿಸಿದರು.

ಲೋಕಸಭಾ ವಿಪಕ್ಷ ನಾಯಕ ರಾಹುಲ್‌ಗಾಂಧಿ ಅವರು ಎಲ್ಲ ಕಡೆಯೂ ಸಂವಿಧಾನ ಪ್ರತಿಯನ್ನು ಹಿಡಿದುಕೊಂಡು ಮಾತನಾಡುತ್ತಾರೆ, ಸಂವಿಧಾನ ಓದು ಎನ್ನುತ್ತಾರೆ. ದೇಶದ ಕಾನೂನು ಕಾಲೇಜು, ರಾಜ್ಯಶಾಸ್ತ್ರ ವಿಭಾಗಳ ವಿದ್ಯಾರ್ಥಿಗಳು ಸಂವಿಧಾನವನ್ನು ನಿತ್ಯ ಓದುತ್ತಲೇ ಇರುತ್ತಾರೆ. ಆದರೆ, ಅಧಿಕಾರದಲ್ಲಿರುವವರು ಸಂವಿಧಾನ ಓದುವುದನ್ನು ಬಿಟ್ಟು ಅನುಷ್ಠಾನಗೊಳಿಸಿ ಎಂದು ಒತ್ತಾಯಿಸಿದರು.

ಮುಖಂಡ ಸಿ.ಕೆ.ಪಾಪಯ್ಯ ಮಾತನಾಡಿ, ಕಾಂಗ್ರೆಸ್ ಸರ್ಕಾರವು ನಾಗಮೋಹನ್‌ದಾಸ್ ಅವರಿಂದ ಮಧ್ಯಂತರ ವರದಿ ಪಡೆದು ಮಾದಿಗ ಸಮುದಾಯಕ್ಕೆ ಇರುವ ಸವಲತ್ತುಗಳನ್ನು ಯಥಾವತ್ತಾಗಿ ಮುಂದುವರೆಸುವುದನ್ನು ಬಿಟ್ಟು ಒಳಮೀಸಲಾತಿ ಜಾರಿಗೆ ಇಷ್ಟವಿಲ್ಲದೇ ಸುಮ್ಮನೆ ನೆಪವೊಡ್ಡಿ ಮುಂದಕ್ಕೆ ತಳ್ಳುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಸಂಘಟನೆಯ ಸಿದ್ದರಾಜು, ಶಿವಕುಮಾರ್, ಶ್ರೀನಿವಾಸ್ ಇತರರು ಗೋಷ್ಠಿಯಲ್ಲಿದ್ದರು.