ಮದಿಹಳ್ಳಿ ಗ್ರಾಪಂಗೆ ಲಕ್ಕವ್ವ ಬಾಗಿ ಅಧ್ಯಕ್ಷೆ

| Published : Jul 26 2024, 01:37 AM IST

ಸಾರಾಂಶ

ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮ ಪಂಚಾಯತಿಯ 2ನೇ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಲಕ್ಕವ್ವ ಬಾಳಪ್ಪ ಬಾಗಿ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ತಾಲೂಕಿನ ಮದಿಹಳ್ಳಿ ಗ್ರಾಮ ಪಂಚಾಯತಿಯ 2ನೇ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಲಕ್ಕವ್ವ ಬಾಳಪ್ಪ ಬಾಗಿ ಆಯ್ಕೆಯಾದರು.

ಶಿರಗಾಂವ ಗ್ರಾಮದ 6ನೇ ವಾರ್ಡ್‌ನ ರೇಣುಕಾ ಕೆಂಪಣ್ಣ ಚೌಗಲಾ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಗ್ರಾಪಂ ಕಾರ್ಯಾಲಯದಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಹುದ್ದೆಗೆ ಆಯ್ಕೆ ಬಯಸಿ ನಾಲ್ವರು ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಇಬ್ಬರು ಕೊನೆ ಘಳಿಗೆಯಲ್ಲಿ ತಮ್ಮ ಉಮೇದುವಾರಿಕೆ ಹಿಂತೆಗೆದುಕೊಂಡರು.

ಅಂತಿಮವಾಗಿ ಲಕ್ಕವ್ವ ಬಾಗಿ ಮತ್ತು ಶಿವಕ್ಕ ಮಾದರ ಸ್ಪರ್ಧಾ ಕಣದಲ್ಲಿದ್ದರು. ಲಕ್ಕವ್ವ ಬಾಗಿ 12 ಮತ ಪಡೆದು ಜಯಭೇರಿ ಬಾರಿಸಿದರೆ, ಪ್ರತಿಸ್ಪರ್ಧಿ ಶಿರಗಾಂವ ಗ್ರಾಮದ 5ನೇ ವಾರ್ಡನ್ ಶಿವಕ್ಕ ಪುಂಡಲೀಕ ಮಾದರ ಕೇವಲ 6 ಮತ ಪಡೆದು ಪರಾಭವಗೊಂಡರು.

ಚುನಾವಣೆ ಪ್ರಕ್ರಿಯೆಯಲ್ಲಿ ಒಬ್ಬ ಸದಸ್ಯರು ಗೈರು ಹಾಜರಿದ್ದರು. ಮದಿಹಳ್ಳಿ, ಶಿರಗಾಂವ ಗ್ರಾಮಗಳನ್ನು ಒಳಗೊಂಡಿರುವ ಮದಿಹಳ್ಳಿ ಗ್ರಾಪಂ ಒಟ್ಟು 19 ಸದಸ್ಯರ ಬಲ ಹೊಂದಿದೆ.

ಚುನಾವಣಾಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎ. ಮಾಹುತ, ಸಹಾಯಕ ಚುನಾವಣಾಧಿಕಾರಿಯಾಗಿ ಪ್ರಭಾರಿ ಪಿಡಿಒ ಸುರೇಶ ತಳವಾರ ಕರ್ತವ್ಯ ನಿರ್ವಹಿಸಿದರು.

ಬಳಿಕ ನೂತನ ಅಧ್ಯಕ್ಷೆ ಲಕ್ಕವ್ವ ಬಾಗಿ ಮಾತನಾಡಿ, ಅಧಿಕಾರವಧಿಯಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುವುದು ಎಂದರು.

ಈ ಚುನಾವಣೆಯು ಹಿರಿಯ ವಕೀಲರಾದ ಕಾಡಪ್ಪ ಕುರಬೇಟ, ಭೀಮಸೇನ ಬಾಗಿ ಮಾರ್ಗದರ್ಶನದಲ್ಲಿ ಮುಖಂಡರಾದ ಕಾಡಪ್ಪ ಹೊಸಮನಿ, ಮಾರುತಿ ಬನ್ನನವರ, ತಾನಾಜಿ ಹೊಸೂರ, ಕೆಂಪಣ್ಣಾ ಚೌಗಲಾ, ಪ್ರಶಾಂತ ನಾಗನೂರಿ, ಬಾಹುಸಾಬ ಪಾಂಡ್ರೆ ನೇತೃತ್ವದಲ್ಲಿ ನಡೆಯಿತು.

ಬೆಂಬಲಿಗರು, ಕಾರ್ಯಕರ್ತರು, ಪಟಾಕಿ ಸಿಡಿಸಿ, ಸಿಹಿ ಹಂಚಿ, ವಿಜಯೋತ್ಸವ ಆಚರಿಸಿದರು.ಹೊಸದಾಗಿ ಅಧ್ಯಕ್ಷ ಹುದ್ದೆ ದೊರೆತಿದ್ದು, ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಹಿರಿಯರ ಮಾರ್ಗದರ್ಶನ, ಸದಸ್ಯರ ಸಲಹೆ-ಸೂಚನೆ, ಸಿಬ್ಬಂದಿಯ ಸಹಕಾರದಿಂದ ಮದಿಹಳ್ಳಿ ಗ್ರಾಪಂನ್ನು ಮಾದರಿ ಮಾಡಲಾಗುವುದು. ಆಯ್ಕೆಗೆ ಶ್ರಮಿಸಿದ ಎಲ್ಲರಿಗೂ ಆಭಾರಿಯಾಗಿದ್ದೇನೆ.

-ಲಕ್ಕವ್ವ ಬಾಗಿ, ಗ್ರಾಪಂ ನೂತನ ಅಧ್ಯಕ್ಷೆ