ಸಾರಾಂಶ
ಅಖಂಡ ಭಾರತ ಸಂಕಲ್ಪದೊಂದಿಗೆ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಅಖಂಡ ಭಾರತ ಸಂಕಲ್ಪ ಯಾತ್ರೆಯ ಪಂಜಿನ ಮೆರವಣಿಗೆ ನಡೆಸಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಸ್ವಾತಂತ್ರ‍್ಯೋತ್ಸವ ಅಂಗವಾಗಿ ಅಖಂಡ ಭಾರತ ಸಂಕಲ್ಪದೊಂದಿಗೆ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಅಖಂಡ ಭಾರತ ಸಂಕಲ್ಪ ಯಾತ್ರೆಯ ಪಂಜಿನ ಮೆರವಣಿಗೆ ನಡೆಯಿತು.ಕೊಡಗು ಜಿಲ್ಲಾ ಹಿಂದೂ ಜಾಗರಣ ವೇದಿಕೆ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಪಂಜಿನ ಮೆರವಣಿಗೆಗೆ ಸಂಜೆ ಮಹದೇವಪೇಟೆಯಲ್ಲಿ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಚಾಲನೆ ನೀಡಲಾಯಿತು. ಮಕ್ಕಳ ತಜ್ಞ ಡಾ. ಮೇ. ಕುಶ್ವಂತ್ ಕೋಳಿಬೈಲು ಮೆರವಣಿಗೆಗೆ ಚಾಲನೆ ನೀಡಿದರು.ರಾಷ್ಟ್ರಧ್ವಜ, ಭಗವಾಧ್ವಜ ಹಾಗೂ ಪಂಜನ್ನು ಹಿಡಿದ ಮಹಿಳೆಯರು ಮೆರವಣಿಗೆಯ ಮುಂಚೂಣಿಯಲ್ಲಿ ಸಾಗಿದರೆ ನೂರಾರು ಸಂಖ್ಯೆಯಲ್ಲಿದ್ದ ಪುರುಷರು, ಯುವಕರು ಹೆಜ್ಜೆ ಹಾಕಿದರು.ವಿಭಜಿತವಾಗಿರುವ ಅಖಂಡ ಭಾರತವನ್ನು ಮತ್ತೆ ಒಟ್ಟುಗೂಡಿಸಬೇಕೆಂಬ ಸಂಕಲ್ಪದೊಂದಿಗೆ ಭಾರತ್ ಮಾತೆ, ಗೋ ಮಾತೆ, ಗಂಗಾ ಮಾತೆ, ಕಾವೇರಿ ಮಾತೆಗೆ ಜೈಘೋಷಗಳು ಹಾದಿಯುದ್ದಕ್ಕೂ ಮೊಳಗಿದವು.ಮಹದೇವಪೇಟೆಯಿಂದ ಆರಂಭಗೊಂಡ ಮೆರವಣಿಗೆಯು ಇಂದಿರಾಗಾಂಧಿ ವೃತ್ತ, ಹಳೆ ಖಾಸಗಿ ಬಸ್ ನಿಲ್ದಾಣ, ಮೇ.ಮಂಗೇರಿರ ಮುತ್ತಣ್ಣ ವೃತ್ತ, ಜ.ತಿಮ್ಮಯ್ಯ ವೃತ್ತವನ್ನು ಹಾದು ಮರಳಿ ಕೊಡವ ಸಮಾಜಕ್ಕೆ ತೆರಳಿ ಅಲ್ಲಿ ಸಮಾಪನಗೊಂಡಿತು.ಈ ಸಂದರ್ಭದಲ್ಲಿ ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಂಯೋಜಕ ಸುನಿಲ್, ಸಹ ಸಂಯೋಜಕ ಚೇತನ್, ಮಡಿಕೇರಿ ತಾಲೂಕು ಸಂಚಾಲಕ ಅಪ್ಪು ರೈ, ದ.ಕ. ಜಿಲ್ಲಾ ಸಾಮಾಜಿಕ ಕಾರ್ಯಕರ್ತ ನವೀನ್ ಸುಬ್ರಮಣ್ಯ, ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಜಿ.ಪಂ. ಮಾಜಿ ಅಧ್ಯಕ್ಷ ರವಿ ಕುಶಾಲಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಕಾಳಪ್ಪ ಸೇರಿದಂತೆ ದೇಶಭಕ್ತರು ಪಾಲ್ಗೊಂಡಿದ್ದರು.ಬಿಗಿ ಬಂದೋಬಸ್ತ್: ಸಂಕಲ್ಪ ಯಾತ್ರೆ ಸಂದರ್ಭ ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸುವ ಸಲುವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಡಿವೈಎಸ್ಪಿ ಸೂರಜ್, ವೃತ್ತ ನಿರೀಕ್ಷಕ ರಾಜು ಅವರ ನೇತೃತ್ವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಬಂದೋಬಸ್ತ್ ಕಾರ್ಯದಲ್ಲಿ ಪಾಲ್ಗೊಂಡಿದ್ದರು.