ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕ್ಷಯ ಮುಕ್ತ ಜಿಲ್ಲೆಯಾಗಿಸುವತ್ತ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಿಗೆ ಕ್ಷಯ ರೋಗದ ಬಗ್ಗೆ ಅರಿವು ಕಾರ್ಯಾಗಾರವು ಜಿ.ಪಂ.ಸಭಾಂಗಣದಲ್ಲಿ ಬುಧವಾರ ನಡೆಯಿತು.ಜಿ.ಪಂ. ಸಿಇಒ ಆನಂದ್ ಪ್ರಕಾಶ್ ಮೀನಾ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಕ್ಷಯ ಮುಕ್ತ ಗ್ರಾಮ ಪಂಚಾಯಿತಿಯನ್ನಾಗಿ ಮಾಡಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಹಾಗೂ ಜನರು ಸಹಕಾರ ನೀಡುವಂತಾಗಬೇಕು ಎಂದು ತಿಳಿಸಿದರು.
ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರರಾದ ಡಾ.ಜೋಶ ತೋಮಸ್ ಅವರು ಕಾರ್ಯಕ್ರಮದ ಬಗ್ಗೆ ಮಾತನಾಡಿ ಕ್ಷಯ ರೋಗ ನಿರ್ಮೂಲನೆಗಾಗಿ ಕೈಗೊಂಡ ಕ್ರಮಗಳನ್ನು ಪ್ರಶಂಸಿಸಿ ಕೊಡಗು ಜಿಲ್ಲೆಗೆ ಕಂಚಿನ ಪದಕ ಲಭಿಸುವಂತೆ ಕಾರ್ಯನಿರ್ವಹಿಸಿದ ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಕಚೇರಿ ಇದೀಗ 2025ರ ವೇಳೆಗೆ ಕ್ಷಯ ಮುಕ್ತ ಜಿಲ್ಲೆಯಾಗಿರುವ ಉದ್ದೇಶ ಹೊಂದಿದೆ ಎಂದರು.ಕೊಡಗು ಜಿಲ್ಲೆ 2015ಕ್ಕೆ ಹೋಲಿಸಿದರೆ 2023 ಕ್ಷಯ ರೋಗದ ಪ್ರಕರಣಗಳಲ್ಲಿ ಶೇ.20ರಷ್ಟು ಕಡಿಮೆ. ಆದ್ದರಿಂದ ಕ್ಷಯ ರೋಗ ನಿರ್ಮೂಲನೆಗೆ ಕೈಗೊಂಡ ಕ್ರಮಗಳನ್ನು ಮೆಚ್ಚಿ ಕೊಡಗು ಜಿಲ್ಲೆಗೆ ರಾಷ್ಟ್ರಮಟ್ಟದ ವಾರಾಣಾಸಿಯಲ್ಲಿ ಕಂಚಿನ ಪದಕ ನೀಡಿ ಗೌರವಿಸಲಾಗಿದೆ. ಈಗ ಕ್ಷಯ ಮುಕ್ತ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಕ್ಷಯ ರೋಗ ನಿರ್ಮೂಲನ ಕಾರ್ಯಕ್ರಮದಡಿಯಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಮಾತ್ರವಲ್ಲದೆ ಜನರಲ್ಲಿ ಅರಿವು ಮೂಡಿಸಲು ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾ ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಕ್ಷಯ ರೋಗ ನಿರ್ಮೂಲನೆ ಕುರಿತು ಜಿಲ್ಲಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯಿತಿಯ ಸಹಕಾರದೊಂದಿಗೆ ಸಮುದಾಯದಲ್ಲಿ ಕ್ಷಯ ರೋಗದ ಬಗ್ಗೆ ಇರುವ ಭಯ, ಆತಂಕ ನಿವಾರಣೆ ಮಾಡಲಾಗುತ್ತದೆ. ಜೊತೆಗೆ ಗ್ರಾಮ ಪಂಚಾಯಿತಿಯಲ್ಲಿ ಕ್ಷಯ ರೋಗವನ್ನು ನಿರ್ಮೂಲನೆ ಮಾಡುವ ಗುರಿ ಹೊಂದಿದ್ದು, ಶಂಕಿತ ಪ್ರಕರಣಗಳು ಶೀಘ್ರ ಪತ್ತೆ ಮಾಡಿ ತ್ವರಿತ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದರು.ಜಿಲ್ಲೆಯಲ್ಲಿ ಕ್ಷಯರೋಗ ಪ್ರಕರಣಗಳು ಹೆಚ್ಚಾಗಿ ವರದಿಯಾದ ಸ್ಥಳಗಳಲ್ಲಿ ಜನಪದ ಬೀದಿ ನಾಟಕ ಕಲಾತಂಡಗಳ ಪ್ರದರ್ಶನ ಸಾರ್ವಜನಿಕ ಸ್ಥಳಗಳು, ಸರ್ಕಾರಿ ಕಚೇರಿಗಳಲ್ಲಿ ಗೋಡೆ ಬರಹ ಮತ್ತು ಸಾರ್ವಜನಿಕ ಸ್ಥಳಗಳು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ರೇಡಿಯೋ ಜಿಂಗಲ್ಸ್ ಮುಖಾಂತರ ಜಾಗೃತಿ ಮೂಡಿಸಲಾಯಿತು ಎಂದರು.
ಕ್ಷಯರೋಗ ಮೈಕೋ ಬ್ಯಾಕ್ಟೀರಿಯ ಟ್ಯೂಬರ್ ಕ್ಯುಲೋಸಿಸ್ ಎಂಬ ರೋಗಾಣುವಿನಿಂದ ಉಂಟಾಗುವ ಸಾಂಕ್ರಾಮಿಕ ರೋಗ. ಎರಡು ವಾರಕ್ಕಿಂತ ಹೆಚ್ಚು ಕೆಮ್ಮು ರಾತ್ರಿಯ ವೇಳೆಯಲ್ಲಿ ಜ್ವರ ಕಫದಲ್ಲಿ ರಕ್ತ, ಎದೆ ನೋವು, ಹಸಿವಾಗದಿರುವುದು, ತೂಕ ಇಳಿಕೆ ಕ್ಷಯ ರೋಗದ ಲಕ್ಷಣಗಳಾಗಿವೆ ಎಂದರು.ಕ್ಷಯ ರೋಗದ ತ್ವರಿತ ಪತ್ತೆಗಾಗಿ ಎಲ್ಲಾ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಸಿಬಿ ನೆಟ್ ಹಾಗೂ ಟ್ರು ನೆಟ್ ಯಂತ್ರಗಳಿಂದ ಟಿಬಿ ಪರೀಕ್ಷೆ ಮಾಡಲಾಗುತ್ತದೆ. ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸೆ ಸಂಪೂರ್ಣ ಉಚಿತವಾಗಿದ್ದು, ಸಂಪೂರ್ಣವಾಗಿ ರೋಗವನ್ನು ಗುಣಪಡಿಸಬಹುದು ಎಂದು ತಿಳಿಸಿದರು.
ಪ್ರಧಾನ ಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮದ ಅಡಿಯಲ್ಲಿ ಕ್ಷಯರೋಗಿಗಳನ್ನು ದತ್ತು ಪಡೆದು ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರವನ್ನು ಒದಗಿಸುವಂತೆ ಡಾ.ಜೋಶ್ ತೋಮಸ್ ಅವರು ವಿವರಿಸಿದರು. ಮಹದೇವಪ್ಪ, ಸಚಿನ್, ಮಂಜು, ನವೀನ್, ಶ್ರೀಧರ್ ಇತರರು ಇದ್ದರು. ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಅವರು ಸ್ವಾಗತಿಸಿದರು.