ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿ ದಸರಾ ಜನೋತ್ಸವದಲ್ಲಿ ಅ.5ರಂದು ಶನಿವಾರ ಮಕ್ಕಳ ಕಲರವ ಕಂಡಬರಲಿದೆ, 11 ನೇ ವರ್ಷ೯ದ ಮಕ್ಕಳ ದಸರಾ ಅಂಗವಾಗಿ ನಗರದ ಗಾಂಧಿ ಮೈದಾನದಲ್ಲಿ ಬೆಳಗ್ಗಿನಿಂದಲೇ ಮಕ್ಕಳಿಗಾಗಿ ವೈವಿಧ್ಯಮಯ ಸ್ಪರ್ಧಾ ಕಾರ್ಯಕ್ರಮವನ್ನು ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಆಯೋಜಿಸಲಾಗಿದೆ ಎಂದು ಮಕ್ಕಳ ದಸರಾ ಸಮಿತಿ ಸಂಚಾಲಕ ಅನಿಲ್ ಎಚ್.ಟಿ. ತಿಳಿಸಿದ್ದಾರೆ.ಶನಿವಾರ ಬೆಳಗ್ಗೆ 9 ಗಂಟೆಯಿಂದಲೇ ಗಾಂಧಿ ಮೈದಾನದಲ್ಲಿ ಮಕ್ಕಳ ಸಂತೆ, ಮಕ್ಕಳ ಅಂಗಡಿ, ಮಕ್ಕಳಿಂದ ಮಂಟಪ, ಕ್ಲೇಮಾಡೆಲಿಂಗ್ ಮತ್ತು ಛದ್ಮವೇಷ ಸ್ಪರ್ಧೆ ನಡೆಯಲಿದೆ. ಅತ್ಯಧಿಕ ಸಂಖ್ಯೆಯಲ್ಲಿ ಮಕ್ಕಳ ದಸರಾಕ್ಕೆ ಮಕ್ಕಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಛದ್ಮವೇಷ ಸ್ಪರ್ಧೆಗೆ 130 ಸ್ಪರ್ಧಿಗಳಿದ್ದಾರೆ. ಮಕ್ಕಳ ಅಂಗಡಿಗೆ 80, ಮಕ್ಕಳ ಸಂತೆಗೆ 65, ಮಕ್ಕಳ ಮಂಟಪಕ್ಕೆ 20, ಕ್ಲೇಮಾಡೆಲಿಂಗ್ ಸ್ಪರ್ಧೆಗೆ 23 ಸ್ಪರ್ಧಿಗಳು ನೋಂದಾಯಿಸಿದ್ದಾರೆ. ನಂಜನಗೂಡಿನ ಸುನಾದ್ ವಿನೋದಿನಿ ಸಂಗೀತ ಶಾಲಾ ಮಕ್ಕಳು ನಡೆಸಿಕೊಡುವ ವಾದ್ಯ ವೈವಿಧ್ಯ ಮಕ್ಕಳ ದಸರಾ ಸಂಭ್ರವಮನ್ನು ಹೆಚ್ಚಿಸಲಿದೆ. ಸಂಜೆ 6 ಗಂಟೆಯಿಂದ ಕಲಾಸಂಭ್ರಮ ವೇದಿಕೆಯಲ್ಲಿ ಆಯೋಜಿಸಲಾಗಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 4 ಗಂಟೆಗಳ ಕಾಲ ಮಕ್ಕಳಿಂದಲೇ ವೈವಿಧ್ಯಮಯ ಕಾರ್ಯಕ್ರಮಗಳು ಪ್ರೇಕ್ಷಕರಿಗೆ ಮನರಂಜನೆ ನೀಡಲಿದೆ. ಹುಬ್ಬಳ್ಳಿಯ ಭೂಮಿಕಾ- ದೀಪಿಕಾ ಸಹೋದರಿಯರಿಂದ ಗಾನವೈವಿಧ್ಯ, ಮಡಿಕೇರಿಯ ವಿಕ್ರಂಶೆಟ್ಟಿ ಅವರಿಂದ ಮಾಂತ್ರಿಕ ಜಾದೂ ಕಾರ್ಯಕ್ರಮ , ಬನ್ನೂರಿನ ಚಿಲಿಪಿಲಿ ಗೊಂಬೆ ತಂಡದಿಂದ ಬೊಂಬೆಗಳ ಕಲರವ ಕೂಡ ಮಕ್ಕಳ ದಸರಾದ ಪ್ರಮುಖ ಆಕರ್ಷಣೆಗಳಾಗಿವೆ.