ಮಡಿಕೇರಿ: ಇನ್ನೊಂದು ವಾರದಲ್ಲಿ ಮಳೆಗಾಲ ಆರಂಭವಾಗಲಿದ್ದು, ಮುಂಗಾರಿನ ಸಿದ್ಧತಾ ಕಾರ್ಯಗಳು ನಡೆಸಬೇಕೆಂಬ ಆಗ್ರಹ ನಗರ ಸಭಾ ಸಾಮಾನ್ಯ ಸಭೆಯಲ್ಲಿ ಗುರುವಾರ ಕೇಳಿಬಂತು.
ನಗರಸಭೆ ಅಧ್ಯಕ್ಷೆ ಕಲಾವತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಸದಸ್ಯರಾದ ಕೆ.ಎಸ್. ರಮೇಶ್, ಸಬಿತಾ ಹಾಗೂ ಎಸ್‌ಡಿಪಿಐ ಸದಸ್ಯ ಮನ್ಸೂರ್ ಅವರು ವಿಷಯ ಪ್ರಸ್ತಾಪಿಸಿ ಆದಷ್ಟು ಬೇಗ ನಗರಸಭೆಯಿಂದ ಕೆಲಸಗಳು ಆಗಬೇಕೆಂದು ಒತ್ತಾಯಿಸಿದರು.ನಗರಸಭೆಯಲ್ಲಿರುವ ಒಂದು ಜೆಸಿಬಿಯಲ್ಲಿ ಎಲ್ಲ ಕೆಲಸ ಮಾಡುವುದು ಕಷ್ಟಸಾಧ್ಯ. ಇನ್ನೊಂದಷ್ಟು ಜೆಸಿಬಿಗಳನ್ನು ಬಾಡಿಗೆಗೆ ಪಡೆದುಕೊಂಡು ಗಿಡಗಂಟಿಗಳ ತೆರವು, ಚರಂಡಿ ಸ್ವಚ್ಛತೆ ಸೇರಿದಂತೆ ಸಿದ್ಧತಾ ಕಾರ್ಯ ನಡೆಸಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಸದಸ್ಯೆ ಸಬಿತಾ ಮಾತನಾಡಿ, ಮಂಗಳಾದೇವಿ ನಗರದಲ್ಲಿ ಜಿಗಣೆಗಳ ಕಾಟ ವಿಪರೀತವಾಗಿದೆ. ತೋಡು ಸ್ವಚ್ಛತೆಗೆ ಕಾರ್ಮಿಕರ ಅಗತ್ಯ ಇದೆ ಎಂದು ಹೇಳಿದರು.
ಪ್ರತಿಕ್ರಿಯಿಸಿದ ಪೌರಾಯುಕ್ತ ಎಚ್.ಆರ್. ರಮೇಶ್, ಈಗಾಗಲೇ ಸಿದ್ಥತಾ ಕಾರ್ಯಗಳು ನಡೆದಿವೆ. ಪ್ರತಿ ವಾರ್ಡಿಗೂ ಒಂದೊಂದು ಕಾರ್ಯಪಡೆ ರಚಿಸಲಾಗಿದೆ. ಅಪಾಯಕಾರಿ ಸ್ಥಳದಲ್ಲಿ ವಾಸಿಸುವವರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನೋಟಿಸ್ ನೀಡಲಾಗಿದೆ. ಕಾಳಜಿ ಕೇಂದ್ರ ತೆರೆಯಲು ಭವನಗಳನ್ನು ಗುರುತಿಸಲಾಗಿದೆ. ಸಹಾಯವಾಣಿಯನ್ನೂ ಆರಂಭಿಸಲಾಗಿದೆ. ಎಲ್ಲ ಸದಸ್ಯರೂ ತಮ್ಮ ತಮ್ಮ ವಾರ್ಡಿನಲ್ಲಿ ಮುಂಗಾರು ಸಿದ್ದತೆ ಕುರಿತು ಆಗಬೇಕಿರುವ ಕೆಲಸದ ಪಟ್ಟಿ ಕೊಡಿ. ಆದ್ಯತೆಯ ಮೇರೆಗೆ ಮಾಡಿಕೊಡಲಾಗುವುದು ಎಂದು ಹೇಳಿದರು. ನಗರೋತ್ಥಾನ ಕಾಮಗಾರಿಗಳು ವಿಳಂಬವಾಗುತ್ತಿರುವುದು ಹಾಗೂ ಕೆಲವೆಡೆ ಗುತ್ತಿಗೆದಾರರು ಸದ್ಯಕ್ಕೆ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ ಎಂಬ ವಿಷಯದ ಚರ್ಚೆಯಲ್ಲಿ ಕೊನೆಯಲ್ಲಿ ಶಾಸಕ ಡಾ. ಮಂತರ್ ಗೌಡ ಹಾಗೂ ಗುತ್ತಿಗೆದಾರರ ಸಭೆಯನ್ನು ಒಂದು ವಾರದಲ್ಲಿ ಕರೆದು ಶಾಸಕರಿಂದಲೇ ಗುತ್ತಿಗೆದಾರರಿಗೆ ನಿರ್ದೇಶನ ಕೊಡಿಸಬೇಕು ಎಂಬ ತೀರ್ಮಾನಕ್ಕೆ ಬರಲಾಯಿತು.ರಾಜಾಸೀಟ್ ಉದ್ಯಾನದ ರಸ್ತೆಯಲ್ಲಿನ ಕಟ್ಟಡವೊಂದರ ವಿಷಯ ಸಭೆಯಲ್ಲಿ ಮತ್ತೆ ಪ್ರಸ್ತಾಪವಾಯಿತು. ಈ ಕುರಿತು ಸದಸ್ಯರ ನಡುವೆ ವಾಗ್ವಾದ ನಡೆಯಿತು.