ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ನಗರದ ನಾಲ್ಕು ಶಕ್ತಿ ದೇವತೆಗಳ ಕರಗೋತ್ಸವ ಅ.15ರಿಂದ ಮತ್ತು ಸಾಂಸ್ಕೃತಿಕ ಕಲಾವೈಭವ ಅ.16ರಿಂದ ಆರಂಭಗೊಳ್ಳುತ್ತಿದ್ದು, ನಗರಸಭೆ ಭರದ ಸಿದ್ಧತೆ ನಡೆಸಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ನಗರದ ನಾಲ್ಕು ಶಕ್ತಿ ದೇವತೆಗಳ ಕರಗೋತ್ಸವ ಅ.15ರಿಂದ ಮತ್ತು ಸಾಂಸ್ಕೃತಿಕ ಕಲಾವೈಭವ ಅ.16ರಿಂದ ಆರಂಭಗೊಳ್ಳುತ್ತಿದ್ದು, ನಗರಸಭೆ ಭರದ ಸಿದ್ಧತೆ ನಡೆಸಿದೆ. ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ನೇತೃತ್ವದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ನಗರ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಂಡರು. ಶಕ್ತಿ ದೇವತೆಗಳ ಕರಗಗಳು ನಗರ ಸಂಚಾರ ಆರಂಭಿಸುವ ಪಂಪಿನ ಕೆರೆ ಭಾಗದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಯಿತು. ಕುರುಚಲು ಗಿಡಗಳನ್ನು ಕಡಿದು, ಕಸವನ್ನು ತೆರವುಗೊಳಿಸಿ ಸುಣ್ಣಬಣ್ಣ ಬಳಿಯಲಾಯಿತು. ಬೀದಿದೀಪಗಳನ್ನು ದುರಸ್ತಿ ಪಡಿಸಲಾಯಿತು, ಚರಂಡಿಗಳ ತ್ಯಾಜ್ಯಗಳನ್ನು ತೆಗೆಯಲಾಯಿತು. ರಸ್ತೆಗಳ ಗುಂಡಿಗಳನ್ನು ಮುಚ್ಚುವ ಕಾರ್ಯ ಭರದಿಂದ ಸಾಗಿತು. ಹತ್ತು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಗಾಂಧಿ ಮೈದಾನದಲ್ಲಿ ಪ್ರೇಕ್ಷಕರಿಗೆ ಅನುಕೂಲವಾಗುವಂತೆ ಕೆಸರುಮಯವಾಗಿದ್ದ ಮೈದಾನವನ್ನು ಸಮತಟ್ಟುಗೊಳಿಸಲಾಯಿತು. ಇಲ್ಲಿರುವ ಶೌಚಾಲಯಗಳನ್ನು ಸ್ವಚ್ಛಗೊಳಿಸಿ ನೀರಿನ ವ್ಯವಸ್ಥೆ ಕಲ್ಪಿಸಲಾಯಿತು. ಈ ಭಾಗದಲ್ಲೂ ರಸ್ತೆಗಳ ಗುಂಡಿಗಳನ್ನು ಮುಚ್ಚಲಾಯಿತು. ಅಂತಿಮ ಹಂತದ ಸಿದ್ಧತೆಗಳನ್ನು ಪರಿಶೀಲಿಸಿದ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಸುದ್ದಿಗಾರರೊಂದಿಗೆ ಮಾತನಾಡಿ ಭಕ್ತರು, ಕಲಾವಿದರು ಹಾಗೂ ಪ್ರೇಕ್ಷಕರಿಗೆ ಎಲ್ಲೂ ಅನನುಕೂಲವಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ಕರಗಗಳು ಮತ್ತು ದಶಮಂಟಪಗಳು ಸಂಚರಿಸುವ ಮಾರ್ಗಗಳನ್ನು ದುರಸ್ತಿ ಪಡಿಸಲಾಗುತ್ತಿದೆ. ಎಲ್ಲ ವಾರ್ಡ್‌ಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ, ಅಲ್ಲದೆ ಬೀದಿದೀಪಗಳನ್ನು ಅಳವಡಿಸಲಾಗುತ್ತಿದೆ. ದಸರಾ ಸಂದರ್ಭ ಸಾರ್ವಜನಿಕರ ಹಿತ ಕಾಯಲು ನಗರಸಭೆ ಬದ್ಧವಾಗಿದೆ. ಸಂಭ್ರಮದ ದಸರಾ ಆಚರಣೆಗೆ ಜನರು ಕೂಡ ನಗರಸಭೆಯೊಂದಿಗೆ ಕೈಜೋಡಿಸಬೇಕು ಮತ್ತು ಸ್ವಚ್ಛತೆಯನ್ನು ಕಾಪಾಡಬೇಕೆಂದು ಮನವಿ ಮಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.