ಸಾರಾಂಶ
ದಸರಾದಲ್ಲಿ ಆಗಬೇಕಾದ ಬದಲಾವಣೆ ಬಗ್ಗೆ ಮಾಹಿತಿ ಹಂಚಿಕೊಂಡ ಎಸ್ಪಿ
ಕನ್ನಡಪ್ರಭ ವಾರ್ತೆ ಮಡಿಕೇರಿಈ ಬಾರಿಯ ಐತಿಹಾಸಿಕ ಮಡಿಕೇರಿ ದಸರಾದಲ್ಲಿ ತಾನು ಹಲವು ಗಂಭೀರ ವಿಷಯಗಳನ್ನು ಮನಗಂಡಿದ್ದು, ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಬೇಕಿದೆ. ಅಲ್ಲದೆ ದಸರಾ ಉತ್ಸವ ಯುವಕರು ಮಾತ್ರವಲ್ಲದೆ ಎಲ್ಲ ವಯೋಮಾನದವರು ವೀಕ್ಷಿಸುವಂತಿರಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಹೇಳಿದ್ದಾರೆ.
ನಗರದ ತಮ್ಮ ಕಚೇರಿಯಲ್ಲಿ ಶನಿವಾರ ಸಂಜೆ ಮಡಿಕೇರಿ ದಸರಾದಲ್ಲಿ ತಮ್ಮ ಅನುಭವಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಡಿಕೇರಿ ದಸರಾದಲ್ಲಿ ಮಹಿಳೆಯರಿಗೆ, ಮಕ್ಕಳಿಗೆ, ವೃದ್ಧರಿಗೆ ರಕ್ಷಣೆ ಇದೆ ಎಂಬ ಮನೋಭಾವನೆ ಎಲ್ಲರಲ್ಲೂ ಮೂಡುವಂತಾಗಬೇಕು. ದಸರಾ ಸಂದರ್ಭ ಮೂಲ ಸೌಕರ್ಯ ವ್ಯವಸ್ಥೆ ಮಾಡಬೇಕು. ಯಾವುದೇ ಭೀತಿ ಇಲ್ಲದೆ ದಸರಾವನ್ನು ಜನರು ವೀಕ್ಷಣೆ ಮಾಡುವಂತಿರಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ತಿಳಿಸಿದರು.ನಾನು ಅಂದುಕೊಂಡ ವೈಭವದ ದಸರಾ ನಡೆಯಲಿಲ್ಲ ಮತ್ತು ನಡೆಯುತ್ತಿಲ್ಲ ಎಂಬ ನೋವು ನನ್ನಲ್ಲಿದೆ. ಹೊರ ಜಿಲ್ಲೆಯಲ್ಲಿ ನಾನು ಕರ್ತವ್ಯದಲ್ಲಿದ್ದಾಗ ಮಡಿಕೇರಿ ದಸರಾ ಬಗ್ಗೆ ಬಹಳಷ್ಟು ಕೇಳಿದ್ದೆ. ಆದರೆ ಒಬ್ಬ ಅಧಿಕಾರಿಯಾಗಿ ಮಡಿಕೇರಿ ದಸರಾವನ್ನು ನೋಡಿದ ನನಗೆ ಒಂದಷ್ಟು ಬದಲಾವಣೆ ಇದ್ದರೆ ದಸರಾ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಬಹುದೇನೋ ಎಂಬ ವೈಯಕ್ತಿಕ ಭಾವನೆ ಮೂಡಿದೆ ಎಂದರು.
ಹತ್ತು ದೇವಾಲಯಗಳ ಸಮಿತಿಯವರು ವಿಶೇಷ ರೀತಿಯಲ್ಲಿ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಮಂಟಪವನ್ನು ನಿರ್ಮಿಸುತ್ತಾರೆ. ಇದಕ್ಕೆ ಅಂದಾಜು ಕನಿಷ್ಠ ಮೂರು ತಿಂಗಳಾದರೂ ಸಮಯ ತೆಗೆದುಕೊಳ್ಳುತ್ತಾರೆಂದು ತಿಳಿದುಕೊಂಡಿದ್ದೇನೆ. ಆದರೆ ಇಷ್ಟು ಸುಂದರವಾದ ಮತ್ತು ಅದ್ಭುತವಾದ ಅಥಗರ್ಭಿತವಾದ ಮಂಟಪವನ್ನು ನಾನು ಎಲ್ಲೂ ನೋಡಿಲ್ಲ. ಇಂತಹ ಐತಿಹಾಸಿಕ ಕಥಾಸಾರಾಂಶಗಳ ದೃಶ್ಯಗಳನ್ನು ನಾಡಿನ ಎಲ್ಲ ಜನರು ನೋಡಬೇಕಾಗಿದೆ. ಮಡಿಕೇರಿ ದಸರಾಗೆ ಕೊನೆಯ ದಿನ ಅಪಾರ ಜನ ಸೇರುತ್ತಾರೆ. ಆದರೆ ಮಂಟಪಗಳ ಕಥಾ ಸಾರಾಂಶವನ್ನು ಕೇವಲ ಶೇ.೫ ರಿಂದ ೮ ರಷ್ಟು ಮಂದಿ ನೋಡುತ್ತಾರೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಸಿಗಬೇಕು:
ದಸರಾ ಎಂದರೆ ನಮ್ಮ ಹಬ್ಬ ಆಗಬೇಕು. ನಮ್ಮ ನಾಡಿನ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಬೇಕು. ನಮ್ಮದೇ ಸಂಸ್ಕೃತಿಯನ್ನು ಬಿಂಬಿಸುವ ಹಲವು ವಾದ್ಯಗಳು ಸಂಗೀತಗಳು ಇಲ್ಲಿವೆ. ಅದನ್ನು ನಂಬಿ, ಗೌರವಿಸಿ ಬದುಕುವ ಹಲವು ಕಲಾಕುಟುಂಬಗಳು ನಮ್ಮಲ್ಲಿವೆ, ನಾವು ನಮ್ಮ ಸ್ಥಳೀಯ ವೇದಿಕೆಗಳಲ್ಲಿ ಇಂತಹ ಹಬ್ಬಗಳಲ್ಲಿ ಅವಕಾಶ ನೀಡದೆ ಹೋದಲ್ಲಿ ನಮ್ಮ ಆಚಾರ ವಿಚಾರ ಮತ್ತು ಸಂಸ್ಕೃತಿಯನ್ನು ನಾವೇ ನಾಶ ಮಾಡಿದಂತಾಗುತ್ತದೆ. ಅಲ್ಲದೆ ಅದನ್ನು ನಂಬಿದವರಿಗೂ ಅವಕಾಶವಿಲ್ಲದಂತಾಗುತ್ತದೆ. ಡಿಜೆ ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿಯೂ ಇದೆ, ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ನಿಟ್ಟಿನಲ್ಲಿ ಸ್ಥಳೀಯರನ್ನು ಪ್ರೋತ್ಸಾಯಿಸುವ ಮೂಲಕ ಅವರಿಗೂ ಆದಾಯ ಸಿಕ್ಕರೆ ಒಳ್ಳೆಯದು ಎಂದರು.ತುಂಬಾ ನೂಕು ನುಗ್ಗಲು ಕಂಡೆ
ಮಡಿಕೇರಿ ದಸರಾದಲ್ಲಿ ಜನ ಮಂಟಪದ ಸಮೀಪದಲ್ಲಿ ಓಡಾಡಲೂ ಕೂಡ ಕಷ್ಟದ ಪರಿಸ್ಥಿತಿ ಉಂಟಾಗಿತ್ತು. ನೂಕು ನುಗ್ಗಲು ಉಂಟಾಗಿ ಜನರು ಸಮಸ್ಯೆ ಎದುರಿಸಿದ್ದನ್ನು ವೈಯಕ್ತಿಕವಾಗಿ ನಾನು ಕಂಡಿದ್ದೇನೆ. ನಗರ ಪೊಲೀಸ್ ಠಾಣೆಯ ಬಳಿ ಯುವಕ, ಮಹಿಳೆ ಮತ್ತು ಮಗುವೊಂದು ಕೆಳಗೆ ಬಿದ್ದು ಮೇಲೇಳಲಾಗದೆ ಕಷ್ಟ ಪಡುತ್ತಿದ್ದರು. ಈ ಸಂದರ್ಭ ನಾನು ಮತ್ತು ನಮ್ಮ ತಂಡ ಲಘು ಲಾಠಿ ಚಾರ್ಜ್ ಮಾಡಿ ಯುವಕ, ಮಹಿಳೆ ಹಾಗೂ ಮಗುವನ್ನು ರಕ್ಷಣೆ ಮಾಡಿದೆವು. ಸ್ವಲ್ಪ ತಡವಾಗಿದ್ದರೆ ಭಾರಿ ಅನಾಹುತವಾಗುತ್ತಿತ್ತು. ಮಡಿಕೇರಿ ದಸರಾಕ್ಕೂ ಅಳಿಸಲಾಗದ ಕಪ್ಪುಚುಕ್ಕೆಯಾಗುತಿತ್ತು ಎಂದು ತಿಳಿಸಿದರು.ಎಲ್ಲರೂ ಎಚ್ಚರ ವಹಿಸಲೇಬೇಕು
ಮಂಟಪಗಳಿಂದ ೨೦ ನಿವಿಷ ಕಥಾ ಸಾರಾಂಶ ಮಾಡಲಾಗುತ್ತದೆ. ಇದು ಉತ್ತಮ ಕೂಡ. ಆದರೆ ಜನರ ಓಡಾಟ ಹೆಚ್ಚಾದ ಸಂದರ್ಭ ಉಸಿರಾಟ ತೊಂದರೆಯಾಗುತ್ತದೆ. ಕೆಲವರು ಕಟ್ಟಡ ಮೇಲೆ ಕುಳಿತು ಕೂಡ ನೋಡಿದ್ದಾರೆ. ಈ ಸಂದರ್ಭ ಕೆಲವರ ಮೇಲೆ ಸುಡುಮದ್ದು ಹಾರಿದ್ದನ್ನೂ ಕೂಡ ಗಮನವಿಸಿದ್ದೇನೆ. ಗಾಬರಿಯಾದರೆ ಪರಿಸ್ಥಿತಿ ಏನಾಗುತ್ತದೆ ಎಂಬುದೂ ಕೂಡ ಅಗತ್ಯ ಎಂದರು.ಹೆಚ್ಚು ಧ್ವನಿವರ್ಧಕ ಬಳಕೆ
ಮಡಿಕೇರಿ ದಸರಾದಲ್ಲಿ ನಿಯಮ ಅನ್ನುವುದಕ್ಕಿಂತ ಅವಶ್ಯಕತೆ ಮೀರಿ ಹೆಚ್ಚು ಧ್ವನಿವರ್ಧಕವನ್ನು ಬಳಕೆ ಮಾಡಿದ್ದಾರೆ. ಮಡಿಕೇರಿಯ ಜಿಲ್ಲಾಸ್ಪತ್ರೆಯಿಂದ ಕೆಲವು ರೋಗಿಗಳನ್ನು ದಸರಾ ಹಿನ್ನೆಲೆಯಲ್ಲಿ ಬೇರೆ ಕಡೆ ಸ್ಥಳಾಂತರ ಮಾಡಿರುವುದು ಕೂಡ ನನ್ನ ಗಮನಕ್ಕೆ ಬಂದಿದೆ. ಅಲ್ಲದೆ ನಗರದ ಹಿರಿಯ ನಾಗರಿಕರು ಮನೆಗೆ ಬೀಗ ಹಾಕಿ ಠಾಣೆಗೆ ಮಾಹಿತಿ ನೀಡಿ ಸಂಬಂಧಿಕರ ಮನೆಗೂ ತೆರಳಿದ ಉದಾಹರಣೆ ಇದೆ ಎಂದು ವಿವರಿಸಿದರು.ರಸ್ತೆಗಿಂತ ಅಗಲವಾದ ಮಂಟಪಗಳಿತ್ತು!
ಮಡಿಕೇರಿ ರಸ್ತೆ ತೀರಾ ಕಿರಿದಾಗಿದೆ. ಆದರೆ ಕೆಲವು ಮಂಟಪಗಳು ರಸ್ತೆಗಿಂತ ದೊಡ್ಡದಾಗಿತ್ತು. ಹೀಗೆ ಮಾಡಿದರೆ ಜನ ಓಡಾಡುವುದು ಹೇಗೆ? ಪ್ರಶಸ್ತಿ ನೀಡುವ ಕಾರಣಕ್ಕಾಗಿ ಎಲ್ಲರೂ ಪೈಪೋಟಿಯಿಂದ ಮಂಟಪಗಳನ್ನು ನಿರ್ಮಿಸುತ್ತಾರೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಮಂಟಪಗಳ ತಯಾರು ಮಾಡಬೇಕು. ಮಂಟಪವೊಂದರ ವಾಹನದ ತೂಕ ಬ್ಯಾಲೆನ್ಸ್ ಆಗದ ಹಿನ್ನೆಲೆಯಲ್ಲಿ ಟ್ರ‍್ಯಾಕ್ಟರ್ ಮಗುಚಿದ ಘಟನೆ ಎಂ.ಎಂ. ಸರ್ಕಲ್‌ನಲ್ಲಿ ಆಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗದಿರುವುದು ನಮ್ಮ ನಾಡಿನ ಪುಣ್ಯ. ಈ ಘಟನೆ ನಮಗೆ ಪಾಠವಾಗಬೇಕು. ಅಲ್ಲಿ ಜನರು ಇದ್ದಿದ್ದರೆ ಭಾರಿ ದೊಡ್ಡ ಅನಾಹುತ ಸಂಭವಿಸುತ್ತಿತ್ತು. ಆದರೆ ದೇವರ ಕೃಪೆಯಿಂದ ದೊಡ್ಡ ಅನಾಹುತ ತಪ್ಪಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಎಲ್ಲ ಮಂಟಪ ಸಮಿತಿಯವರು ಜಾಗೃತರಾಗಬೇಕು. ಅವೈಜ್ಞಾನಿಕ ಮಂಟಪಗಳ ನಿರ್ಮಾಣ ಒಂದಲ್ಲ ಒಂದು ದಿನ ಸಮಸ್ಯೆಯಾಗುತ್ತದೆ. ಈ ಬಗ್ಗೆ ಗಂಭೀರ ಚಿಂತನೆ ಅಗತ್ಯ ಎಂದು ಎಸ್ಪಿ ರಾಮರಾಜನ್ ಹೇಳಿದರು.ಎಲ್ಲರ ದಸರಾ ಆಗಲು ಪರಿಹಾರ ಏನು?ಈ ಹಿಂದೆ ಮಡಿಕೇರಿ ದಸರಾದಲ್ಲಿ ಹತ್ತು ಮಂಟಪಗಳನ್ನೂ ಕೂಡ ಒಂದೇ ಕಡೆಗಳಲ್ಲಿ ನಿಂತು ನೋಡುತ್ತಿದ್ದರು ಎಂದು ಸಹೊದ್ಯೋಗಿಗಳಿಂದ ತಿಳಿದುಕೊಂಡಿದ್ದೇನೆ. ಎಲ್ಲ ಮಂಟಪಗಳು ನಗರದ ಮುಖ್ಯರಸ್ತೆಯಲ್ಲಿ ಹಾದುಹೋಗುತ್ತಿದ್ದ ಬಗ್ಗೆಯೂ ಕೇಳಿದ್ದೇನೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಒಂದೆಡೆ ಕುಳಿತು ಮಂಟಪಗಳನ್ನು ನೋಡಲು ಸಾಧ್ಯವಾಗುತ್ತಿಲ್ಲ. ಜನರೇ ಮಂಟಪವಿರುವ ಕಡೆ ನೂಕುನುಗ್ಗಲಿನ ಮಧ್ಯೆ ಹೋಗಿ ನೋಡಬೇಕಾಗಿದೆ. ಆದ್ದರಿಂದ ಮಡಿಕೇರಿಯಲ್ಲಿ ನಡೆಯುವ ದೊಡ್ಡ ಉತ್ಸವ ಮಡಿಕೇರಿ ದಸರಾ ಆಗಿರುವುದರಿಂದ ಮೊದಲು ನಾವೆಲ್ಲರೂ ದೊಡ್ಡ ಮೈದಾನವನ್ನು ಗುರುತಿಸಬೇಕು. ಎಲ್ಲರೂ ಕೂಡ ವ್ಯವಸ್ಥಿತವಾಗಿ ಕುಳಿತು ಮಂಟಪಗಳನ್ನು ಕಣ್ತುಂಬಿಸಿಕೊಳ್ಳುವಂತೆ ಮಾಡಬೇಕು ಎಂದು ಎಸ್ಪಿ ರಾಮರಾಜನ್ ಹೇಳಿದರು.