ಸಾರಾಂಶ
ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತ ಧರಣಿ ಸತ್ಯಾಗ್ರಹ ನಡೆಸಿ ಅಂತಾರಾಷ್ಟ್ರೀಯ ಕಾನೂನಿನ್ವಯ ಕೊಡವರ ಸಂವಿಧಾನಿಕ ಹಕ್ಕುಗಳನ್ನು ಮಂಡಿಸಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ವಿಶ್ವ ರಾಷ್ಟ್ರ ಸಂಸ್ಥೆಯ ಜಾಗತಿಕ ಆದಿಮ ಸಂಜಾತ ಜನಾಂಗಗಳ ಹಕ್ಕುಗಳ ದಿನಾಚರಣೆಯ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತ ಧರಣಿ ಸತ್ಯಾಗ್ರಹ ನಡೆಸಿ ಅಂತಾರಾಷ್ಟ್ರೀಯ ಕಾನೂನಿನ್ವಯ ಕೊಡವರ ಸಂವಿಧಾನಿಕ ಹಕ್ಕುಗಳನ್ನು ಮಂಡಿಸಿತು.ಸಾಂವಿಧಾನಿಕ ಹಕ್ಕುಗಳಿಂದ ವಂಚಿತವಾಗಿರುವ ಆದಿಮಸಂಜಾತ ಕೊಡವ ಬುಡಕಟ್ಟು ಜನರ ಹಕ್ಕೋತ್ತಯದ ಬಗ್ಗೆ ದೇಶದ ಆಡಳಿತ ವ್ಯವಸ್ಥೆ ಮತ್ತು ವಿಶ್ವದ ಗಮನ ಸೆಳೆಯವ ಸಲುವಾಗಿ ಸತ್ಯಾಗ್ರಹ ನಡೆಸಿರುವುದಾಗಿ ಧರಣಿಯ ನೇತೃತ್ವ ವಹಿಸಿದ್ದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದರು.
ಕೊಡವರು ಈ ಪವಿತ್ರ ಕೊಡವ ನೆಲದ ಮೂಲನಿವಾಸಿ ಆದಿಮಸಂಜಾತ ಬುಡಕಟ್ಟು ಸಮುದಾಯದವರಾಗಿದ್ದಾರೆ. ಕೊಡವರಿಗಿರುವ ಏಕೈಕ ನೆಲೆ ಕೊಡವ ಲ್ಯಾಂಡ್, ಕೊಡವರ ಸಾಂಪ್ರದಾಯಿಕ ಹಾಗೂ ಅವಿಭಾಜ್ಯ ಮಾತೃಭೂಮಿಯಾಗಿದೆ. ಕೊಡವರ ಜನ್ಮಭೂಮಿ ಈ ಭೂಮಂಡಲದಷ್ಟೇ ಪ್ರಾಚೀನವಾಗಿದೆ. ಕೊಡವ ಬುಡಕಟ್ಟು ಜನಾಂಗವು ಮಾನವ ಜನಾಂಗದಷ್ಟೇ ಹಳೆಯದಾಗಿದೆ. ಈ ಕೊಡವ ಮಣ್ಣಿನಲ್ಲಿ ನಮ್ಮ ಐತಿಹಾಸಿಕ ನಿರಂತರತೆಯನ್ನು ಶಾಸನಬದ್ಧವಾಗಿ ಅನುಮೋದಿಸಬೇಕು. ಕೊಡವರ ಆವಾಸಸ್ಥಾನ, ಕೊಡವಲ್ಯಾಂಡ್, ಪಾರಂಪರಿಕ ಪ್ರಾಚೀನ ಭೂಮಿಗಳು, ರಾಜಕೀಯ-ಸಾಂಸ್ಕೃತಿಕ ಹಕ್ಕುಗಳು, ಜಾನಪದ ಗುರುತು, ದೈವಿಕ ವನಗಳು (ದೇವಕಾಡ್), ಮಂದ್ ಗಳಂತಹ ಗರ್ಭಗುಡಿಗಳು, ವನದೇವಿ, ವನ್ಯಮೃಗ, ಪಕ್ಷಿ ಮತ್ತು ಸಸ್ಯ ಸಂಕುಲಗಳು, ನೈಸರ್ಗಿಕ ನೀರು/ಜಲದೇವಿ, ಪರ್ವತ ದೇವಿ ದೀರ್ಘಕಾಲಿಕ ನದಿಗಳು, ದೇವಟ್ ಪರಂಬು ಕೊಡವ ನರಮೇಧದ ಸ್ಮಾರಕ, ದುರಂತ ಸ್ಥಳ ಮತ್ತು ಕೊಡವರ ಪವಿತ್ರ ತೀರ್ಥಯಾತ್ರ ಕ್ಷೇತ್ರ ತಲಕಾವೇರಿಯನ್ನು ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ವಿಶ್ವ ರಾಷ್ಟ್ರ ಸಂಸ್ಥೆ ಆದಿಮಸಂಜಾತರ ಹಕ್ಕುಗಳಡಿಯಲ್ಲಿ ಸಾಂವಿಧಾನಿಕವಾಗಿ ರಕ್ಷಿಸಬೇಕು, ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕುಗಳನ್ನು ಒಳಗೊಂಡಂತೆ ಕೊಡವಲ್ಯಾಂಡ್‌ನ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಸ್ವ-ಆಡಳಿತವನ್ನು ವಿಶ್ವ ರಾಷ್ಟ್ರೀಯ ಸಂಸ್ಥೆಯ ಆದಿಮ ಸಂಜಾತ ಜನಾಂಗದ ಹಕ್ಕುಗಳ ಕುರಿತು ಹೊರಡಿಸಲಾದ ವಿಧಿ 3 (ಸ್ವಯಂ ನಿರ್ಣಯ ಹಕ್ಕು) 5 (ವಿಶಿಷ್ಟ ರಾಜಕೀಯ, ಕಾನೂನು, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಸಂರಕ್ಷಣೆ), 26 (ಭೂಮಿ, ಆವಾಸ್ಥಸ್ಥಾನದ ಸರಹದ್ದಿನ ಹಕ್ಕುಗಳ ರಕ್ಷಣೆ), 31 (ಬೌಧಿಕ ಆಸ್ತಿಯ ಹಕ್ಕು, ಪಾರಂಪರಿಕ ಹಕ್ಕು, ಸಾಂಪ್ರದಾಯಿಕ ಜ್ಞಾನದ ಅಭಿವ್ಯಕ್ತಿ ಇದೆಲ್ಲದರ ನಿಯಂತ್ರಣ ಮತ್ತು ಅಭಿವೃದ್ಧಿಯ ಹಕ್ಕು) ಮತ್ತು ರಾಷ್ಟ್ರೀಯ ಕಾನೂನಿನಡಿಯಲ್ಲಿ ಆದಿಮ ಸಂಜಾತ ಕೊಡವ ಬುಡಕಟ್ಟು ಸಮುದಾಯಕ್ಕೆ ಸಂಪೂರ್ಣವಾಗಿ ಮತ್ತು ಪರಿಪೂರ್ಣವಾಗಿ ಅನ್ವಯವಾಗಲಿದ್ದು, ಒಡನೆ ಈ ಕುರಿತು ಸಂವಿಧಾನಾತ್ಮಕ ಕಸರತ್ತಿಗೆ ಒತ್ತು ನೀಡಬೇಕೆಂದು ಒತ್ತಾಯಿಸಿದರು.ಹಕ್ಕೋತ್ತಾಯಗಳ ಜ್ಞಾಪನಾ ಪತ್ರವನ್ನು ಜಿಲ್ಲಾಡಳಿತದ ಮೂಲಕ ವಿಶ್ವ ರಾಷ್ಟ್ರ ಸಂಸ್ಥೇಯ ಪ್ರಧಾನ ಕಾರ್ಯದರ್ಶಿ, ಯುನೆಸ್ಕೋ ಮಹಾನಿರ್ದೇಶಕರು, ಯುಎನ್‌ಎಚ್‌ಆರ್‌ಸಿಯ ಹೈಕಮಿಷನರ್, ಅಂತಾರಾಷ್ಟ್ರೀಯ ನ್ಯಾಯಾಲಯದ ಅಧ್ಯಕ್ಷರು, ಜಿನಿವಾದಲ್ಲಿರುವ ವಿಶ್ವ ರಾಷ್ಟ್ರ ಸಂಸ್ಥೆಯ ಆದಿಮ ಸಂಜಾತರ ಹಕ್ಕುಗಳ ಶಾಶ್ವತ ವೇದಿಕೆಯಾದ ಯುನೈಟೈಡ್ ನೆಷನ್ಸ್ ಪರ್ಮನೆಂಟ್ ಫೋರಂ ಆನ್ ಇಂಡಿಜಿನಸ್ ಇಶ್ಯೂಸ್, ಸ್ಪೆಷಲ್ ರ‍್ಯಾಪೋರ್ಟಿಯರ್ ಆನ್ ದಿ ರೈಟ್ಸ್ ಆಫ್ ಇಂಡಿಜಿನಸ್ ಪೀಪಲ್ಸ್, ಭಾರತದ ರಾಷ್ಟ್ರಪತಿ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ, ಹಾರ್ವರ್ಡ್ ವಿದ್ವಾಂಸ ಡಾ.ಸುಬ್ರಮಣಿಯನ್ ಸ್ವಾಮಿ ಅವರಿಗೆ ಸಲ್ಲಿಸಿದ ಎನ್.ಯು.ನಾಚಪ್ಪ, ಬೇಡಿಕೆ ಈಡೇರುವ ವರೆಗೆ ನಿರಂತರ ಹೋರಾಟ ಶಾಂತಿಯುತವಾಗಿ ನಡೆಯಲಿದೆ ಎಂದರು.ಆದಿಮಸಂಜಾತ ಕೊಡವ ಬುಡಕಟ್ಟು ಸಮುದಾಯದ ಪ್ರಾಚೀನ ಸಾಂಪ್ರದಾಯಿಕ ಪರಿಕರಗಳ ಪ್ರದರ್ಶನದ ಮೂಲಕ ಸಿಎನ್‌ಸಿ ಪ್ರಮುಖರು ಧರಣಿ ನಡೆಸಿದರು.
ಜ್ಞಾಪನ ಪತ್ರವನ್ನು ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಸ್ವೀಕರಿಸಿದರು.ಕಲಿಯಂಡ ಮೀನಾ ಪ್ರಕಾಶ್, ಚೋಳಪಂಡ ಜ್ಯೋತಿ ನಾಣಯ್ಯ, ಮುದ್ದಿಯಡ ಲೀಲಾವತಿ, ಕಲಿಯಂಡ ಪ್ರಕಾಶ್, ಅಳ್ಮಂಡ ಜೈ, ಪಟ್ಟಮಾಡ ಕುಶಾ, ಬೇಪಡಿಯಂಡ ದಿನು, ಅಜ್ಜಿಕುಟ್ಟೀರ ಲೋಕೇಶ್, ಕಿರಿಯಮಾಡ ಶೆರಿನ್, ಅರೆಯಡ ಗಿರೀಶ್, ಮಂದಪಂಡ ಮನೋಜ್, ನಂದೇಟಿರ ರವಿ, ಕೂಪದಿರ ಸಾಬು, ಮಣವಟ್ಟಿರ ಚಿಣ್ಣಪ್ಪ, ನಂದಿನೆರವಂಡ ಅಪ್ಪಯ್ಯ, ಪುಟ್ಟಿಚಂಡ ದೇವಯ್ಯ, ನಂದಿನೆರವಂಡ ವಿಜು, ಚೋಳಪಂಡ ನಾಣಯ್ಯ, ನಂದಿನೆರವಂಡ ಅಯ್ಯಣ್ಣ, ಸಾದೇರ ರಮೇಶ್, ಅವರೇಮಾದಂಡ ರಮೇಶ್ ಸತ್ಯಗೃಹದಲ್ಲಿ ಪಾಲ್ಗೊಂಡಿದ್ದರು.