ಹಿರಿಯ ನಾಗರಿಕರ ಕಾಯ್ದೆ- 2007, ಹಿರಿಯ ನಾಗರಿಕರ ಆಸ್ತಿ ಸಂರಕ್ಷಣೆ, ಹಿರಿಯ ನಾಗರಿಕರಿಗೆ ಇರುವ ಸೌಲಭ್ಯಗಳ ಕುರಿತಾಗಿ ಸಾರ್ವಜನಿಕರಿಗೆ ಕಾನೂನು ಅರಿವು ಮತ್ತು ನೆರವು ಶಿಬಿರ ಕಾರ್ಯಕ್ರಮ ನಗರದ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಶುಕ್ರವಾರ ನಡೆಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಿರಿಯ ನಾಗರಿಕರಿಗಾಗಿ ಕೇಂದ್ರ ಪ್ರಾಯೋಜಿತ ಅಟಲ್ ವಯೋ ಅಭ್ಯುದಯ ಯೋಜನೆಯಡಿ ಕೇಂದ್ರ ಸರ್ಕಾರದ ಸ್ಟೇಟ್ ಆಕ್ಷನ್ ಪ್ಲಾನ್ ಫಾರ್ ಸೀನಿಯರ್ ಸಿಟಿಜನ್ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಸಲುವಾಗಿ ಕೊಡಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಹಿರಿಯ ನಾಗರಿಕರ ಕಾಯ್ದೆ- 2007, ಹಿರಿಯ ನಾಗರಿಕರ ಆಸ್ತಿ ಸಂರಕ್ಷಣೆ, ಹಿರಿಯ ನಾಗರಿಕರಿಗೆ ಇರುವ ಸೌಲಭ್ಯಗಳ ಕುರಿತಾಗಿ ಸಾರ್ವಜನಿಕರಿಗೆ ಕಾನೂನು ಅರಿವು ಮತ್ತು ನೆರವು ಶಿಬಿರ ಕಾರ್ಯಕ್ರಮ ನಗರದ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಶುಕ್ರವಾರ ನಡೆಯಿತು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಅವರು ಉದ್ಘಾಟಿಸಿ ಮಾತನಾಡಿ, ಹಿರಿಯ ನಾಗರಿಕರು ಸಮಾಜದ ಆಸ್ತಿ. ಹಿರಿಯರಿಗೆ ಸರ್ಕಾರ ಹಾಗೂ ಸಂಘ ಸಂಸ್ಥೆಗಳಿಂದ ಇರುವಂತಹ ಅವರ ಹಕ್ಕುಗಳನ್ನು ಪಡೆಯುವಲ್ಲಿ ಹಾಗೂ ತಮ್ಮ ಆಸ್ತಿಯಲ್ಲಿ ತಮಗೆ ಅಗತ್ಯವಿರುವಷ್ಟನ್ನು ಇಟ್ಟುಕೊಂಡು ಮಕ್ಕಳಿಗೆ ನೀಡುವಂತಾಗಬೇಕು ಎಂದು ಸಲಹೆ ಮಾಡಿದರು.ಜ. 28ರಂದು ನಡೆಯುವ ಲೋಕ ಅದಾಲತ್‍ನಲ್ಲಿ ಈಗಾಗಲೇ ಉಪ ವಿಭಾಗಾಧಿಕಾರಿ ಅವರ ಕಚೇರಿಯಲ್ಲಿ ಇರುವ ಅರ್ಜಿಯನ್ನು ವಿಲೇವಾರಿಗೊಳಿಸಲು ಹಿರಿಯ ನಾಗರಿಕರು ತಮ್ಮ ದೂರನ್ನು ಇತ್ಯರ್ಥಪಡಿಸಿಕೊಳ್ಳಲು ಮುಂದಾಗಬೇಕು ಎಂದರು. ಹಿರಿಯ ನಾಗರಿಕರ ಪಾಲನೆ ಘೋಷಣೆ ಸಂರಕ್ಷಣೆ ಕಾಯ್ದೆ 2007ರ ಕುರಿತು ವಕೀಲರಾದ ಮೀನಾ ಕುಮಾರಿ ಉಪನ್ಯಾಸ ನೀಡಿದರು. ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ ಸ್ಪೆಕ್ಟರ್ ಚಂದ್ರಶೇಖರ್ ಅವರು ಹಿರಿಯ ನಾಗರಿಕರಿಗೆ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ತಿಮ್ಮಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಾದಮಯ, ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ವಿಮಲ ಹಾಗೂ ಕಚೇರಿ ಮತ್ತು ಸ್ವಯಂ ಸೇವಾ ಸಂಸ್ಥೆಯ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು ಹಾಜರಿದ್ದರು.