ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿ ನಗರಸಭೆಯ ನೂತನ ಅಧ್ಯಕ್ಷರಾಗಿ ಕಲಾವತಿ ಹಾಗೂ ಉಪಾಧ್ಯಕ್ಷರಾಗಿ ಮಹೇಶ್ ಜೈನಿ ಅವರು ನೇಮಕವಾಗಿದ್ದಾರೆ.ಸೋಮವಾರ ನಗರಸಭೆಯಲ್ಲಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ನಡೆಯಿತು. ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.
ಸಂಸದ ಯದುವೀರ್ ಒಡೆಯರ್ ಅವರ ಮತ ಸೇರಿದಂತೆ ಆಡಳಿತ ಪಕ್ಷ ಬಿಜೆಪಿ 17 ಮತಗಳು ಕಲಾವತಿ ಹಾಗೂ ಮಹೇಶ್ ಜೈನಿ ಅವರಿಗೆ ದೊರಕಿತು. ಇದರಿಂದ ಚುನಾವಣಾಧಿಕಾರಿಗಳು ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಾಯಿತು.ಈ ಸಂದರ್ಭ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದರು. ನೂತನ ಅಧ್ಯಕ್ಷೆ ಕಲಾವತಿ ಸುದ್ದಿಗಾರರೊಂದಿಗೆ ಮಾತನಾಡಿ ಅಧ್ಯಕ್ಷ ಸ್ಥಾನವನ್ನು ಕನಸಿನಲ್ಲೂ ಎಣಿಸಿರಲಿಲ್ಲ. ಸಾಮಾನ್ಯ ಜನರಿಗೆ ಸ್ಪಂದನೆ ನೀಡುವುದೇ ನಮ್ಮ ಮೊದಲ ಆದ್ಯತೆ. ಪಕ್ಷದ ನಿಷ್ಠೆಯಿಂದ ಅಧ್ಯಕ್ಷೆ ಸ್ಥಾನ ದೊರಕಿದೆ. ಬಡವರಿಗೆ ಸ್ಪಂದಿಸುವ ಜಬಾಬ್ದಾರಿ ಮಾಡಲಾಗುವುದು ಎಂದು ಹೇಳಿದರು.
ಉಪಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ ಅಭಿವೃದ್ಧಿ ಕಾರ್ಯಕ್ಕೆ ಆದ್ಯತೆ ನೀಡಲಾಗುವುದು. ಬಿಜೆಪಿ ಸದಸ್ಯರ ಮಧ್ಯೆ ಯಾವುದೇ ಅಸಮಾಧಾನ ಇಲ್ಲ. ಮುಂದಿನ ಅವಧಿಯಲ್ಲಿ ಎಲ್ಲ ಸಹಕಾರ ಪಡೆದು ನಗರದಲ್ಲಿ ಉತ್ತಮ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.ಕೋರ್ ಕಮಿಟಿ : ಇದಕ್ಕೂ ಮುನ್ನ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಅಧ್ಯಕ್ಷರಾಗಿ ಕಲಾವತಿ ಹಾಗೂ ಉಪಾಧ್ಯಕ್ಷರಾಗಿ ಮಹೇಶ್ ಜೈನಿ ಅವರನ್ನು ಆಯ್ಕೆ ಮಾಡಲಾಯಿತು. ಇದರಿಂದ ಅಧ್ಯಕ್ಷ ಸ್ಥಾನಾಂಕಾಕ್ಷಿಗಳಾಗಿದ್ದ ಶ್ವೇತಾ ಪ್ರಶಾಂತ್, ಉಷಾ ಕಾವೇರಪ್ಪ, ಸಬಿತಾ, ಸವಿತಾ ರಾಕೇಶ್ ಅವರುಗಳಿಗೆ ತೀವ್ರ ನಿರಾಶೆಯುಂಟಾಗಿದೆ.
ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಎಸ್. ರಮೇಶ್ ಆಕಾಂಕ್ಷಿಯಾಗಿದ್ದರು.ಸಂಸದ ಯದುವೀರ್ ಒಡೆಯರ್, ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ ಸೇರಿದಂತೆ ಬಿಜೆಪಿ ಪ್ರಮುಖರು ಕೋರ್ ಕಮಿಟಿಯಲ್ಲಿದ್ದರು.
ಮಡಿಕೇರಿ ನಗರಸಭೆ ಅಧ್ಯಕ್ಷ - ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ರಾಜ್ಯಕ್ಕೇ ಉತ್ತಮ ಸಂದೇಶ ನೀಡಿದೆ ಎಂದು ಬಿಜೆಪಿ ರಾಜ್ಯ ಮುಖಂಡ ರವಿಕುಮಾರ್ ಹೇಳಿದ್ದಾರೆ.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿಯೂ ಇದೇ ರೀತಿಯ ಸಂದೇಶ ಬರುತ್ತದೆ.
ಆಂತರಿಕ ಪ್ರಜಾಪ್ರಭುತ್ವದಲ್ಲಿ ಬಿಜೆಪಿಗೆ ನಂಬಿಕೆಯಿದೆ. ಓಬಿಸಿ ಸಮುದಾಯಕ್ಕೆ ಸೇರಿದ ಕಲಾವತಿ ನಗರಸಭೆಯ ಅಧ್ಯಕ್ಷೆಯಾಗಿಯೂ, ಗೌಡ ಸಮುದಾಯಕ್ಕೆ ಸೇರಿದ ಮಹೇಶ್ ಜೈನಿ ಉಪಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದಾರೆಂದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿಕಾಳಪ್ಪ ಮಾತನಾಡಿ ಮಡಿಕೇರಿ ನಗರದ ಜನತೆ ಸಂಪೂಣ೯ ವಿಶ್ವಾಸವನ್ನು ಬಿಜೆಪಿಯತ್ತ ವ್ಯಕ್ತಪಡಿಸಿದ್ದಾರೆ. ಅನೇಕ ಸದಸ್ಯರು ಅಧಿಕಾರಕ್ಕಾಗಿ ಬೇಡಿಕೆಯಿಟ್ಟದ್ದು ಸಹಜ ಪ್ರಕ್ರಿಯೆ. ಚಚೆ೯ ಮಾಡಿದ ಬಳಿಕ ಎಲ್ಲರೂ ಒಪ್ಪಿಕೊಂಡಂತೆ ಅಂತಿಮ ಆಯ್ಕೆಯಾಗಿದೆ. ಯಾರಿಗೂ ಯಾವುದೇ ಅಸಮಾಧಾನವಾಗಿಲ್ಲ. ಅವಿರೋಧವಾಗಿ ಆಯ್ಕೆ ಮಾಡಿದ್ದೇವೆ. ಬಿಜೆಪಿಯ 16 ಸದಸ್ಯರು ಮತ್ತು ಸಂಸದರ ಮತದೊಂದಿಗೆ ಬಿಜೆಪಿ ಅಧ್ಯಕ್ಷ - ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ತಿಳಿಸಿದರು.