ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಗಾಂಧಿ ಮೈದಾನದ ತುಂಬೆಲ್ಲ ಬುಧವಾರ ಕಾಫಿ ಘಮಲು ಪಸರಿಸಿಕೊಂಡಿತ್ತು. ಮಡಿಕೇರಿ ದಸರಾ ಅಂಗವಾಗಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರ ಪರಿಕಲ್ಪನೆಯಲ್ಲಿ ಎರಡನೇ ವರ್ಷದ ಕಾಫಿ ದಸರಾ ಜನರನ್ನು ಆಕರ್ಷಿಸಿತು.ಕಾಫಿ ದಸರಾ ಅಂಗವಾಗಿ ಸುಮಾರು 45 ವಿವಿಧ ಬಗೆಯ ಮಳಿಗೆಗಳನ್ನು ತೆರೆಯಲಾಗಿತ್ತು. ವಿವಿಧ ಬಗೆಯ ಕಾಫಿ, ವಿವಿಧ ಉತ್ಪನ್ನಗಳು ಪ್ರೇಕ್ಷಕರ ಬಾಯಲ್ಲಿ ನೀರೂರುವಂತೆ ಮಾಡಿತು. ವೇದಿಕೆಯಲ್ಲಿ ಕಾಫಿ ಗಿಡ ಫಸಲು ತುಂಬಿಕೊಂಡು ಆಕರ್ಷಿಸಿತು.
ಸಂಕಷ್ಟ ಪರಿಹರಿಸುವಲ್ಲಿ ಎಲ್ಲರೂ ಕೈಜೋಡಿಸಿ:ಕಾಫಿಗೆ ಉತ್ತಮ ದರವಿದ್ದರೂ ಸಹ ಕಾಫಿ ಬೆಳೆಗಾರರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಕಾಫಿ ಬೆಳೆಗಾರರ ಸಂಕಷ್ಟವನ್ನು ಪರಿಹರಿಸುವಲ್ಲಿ ಎಲ್ಲರೂ ಕೈಜೋಡಿಸಬೇಕಿದೆ ಎಂದು ಶಾಸಕರಾದ ಡಾ.ಮಂತರ್ ಗೌಡ ತಿಳಿಸಿದ್ದಾರೆ.
ಮಡಿಕೇರಿ ನಗರ ದಸರಾ ಸಮಿತಿ, ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ, ಕೂರ್ಗ್ ಪ್ಲಾಂಟಸ್ಸ್ ಅಸೋಸಿಯೇಷನ್ ಸಹಯೋಗದೊಂದಿಗೆ ನಗರದ ಗಾಂಧಿ ಮೈದಾನದ ಕರ್ನಾಟಕದ ಮೊದಲ ಮಹಿಳಾ ಕಾಫಿ ಉದ್ಯಮಿ ದಿ.ಸಾಕಮ್ಮ ಸಭಾಂಗಣದ ಕಲಾಸಂಭ್ರಮ ವೇದಿಕೆಯಲ್ಲಿ ಬುಧವಾರ ನಡೆದ ಕಾಫಿ ದಸರಾದಲ್ಲಿ ಅವರು ಮಾತನಾಡಿದರು.ಕಾಫಿ ಬೆಳೆಗೆ ಒಳ್ಳೆಯ ದರ ಇದ್ದರೂ ಸಹ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಾಫಿ ಉತ್ಪಾದನೆಯಲ್ಲಿ ಸಣ್ಣ ಬೆಳೆಗಾರರು ಸಹ ಇದ್ದು, ಹಲವು ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದರು.
ರಾಷ್ಟ್ರದಲ್ಲಿ ಕಾಫಿ ಬೆಳೆಗೆ 250 ರಿಂದ 300 ವರ್ಷಗಳ ಇತಿಹಾಸವಿದ್ದು, ಕಾಫಿ ಬೆಳೆಗೆ ಒಳ್ಳೆಯ ದರವಿದ್ದರೂ ಸಹ ಕಾರ್ಮಿಕರ ಕೊರತೆ, ವಾತಾವರಣದಲ್ಲಿನ ಬದಲಾವಣೆ ಸೇರಿದಂತೆ ಹಲವು ಸಮಸ್ಯೆ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂದು ಡಾ.ಮಂತರ್ ಗೌಡ ಅವರು ವಿವರಿಸಿದರು.ಕಾಫಿ ದಸರಾದಲ್ಲಿ 45 ಮಳಿಗೆ ತೆರೆದಿರುವುದು ವಿಶೇಷವಾಗಿದೆ. ವರ್ಷದಿಂದ ವರ್ಷಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಕಾಫಿಯಲ್ಲಿ ಬಗೆ ಬಗೆಯ ತಿನಿಸು ತಯಾರಿಸಬಹುದಾಗಿದೆ ಎಂದರು.
ವಿಮೆ ನೀಡಬೇಕು:ಭಾರತೀಯ ಕಾಫಿ ಮಂಡಳಿ ಅಧ್ಯಕ್ಷರಾದ ದಿನೇಶ್ ದೇವವೃಂದ ಅವರು ಮಾತನಾಡಿ ತೋಟಗಾರಿಕೆ ಬೆಳೆಯಾದ ಅಡಿಕೆ ಮತ್ತು ಕಾಳು ಮೆಣಸಿಗೆ ವಿಮಾ ಸೌಲಭ್ಯ ಇರುವಂತೆ ಕಾಫಿ ಬೆಳೆಗೂ ಸಹ ವಿಮೆ ನೀಡಬೇಕು ಎಂದು ಒತ್ತಾಯಿಸಿದರು.
ರಾಷ್ಟ್ರದ ಈಶಾನ್ಯ ರಾಜ್ಯಗಳು ಹಾಗೂ ರಾಜ್ಯದ ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿ ಬೆಳೆ ಬೆಳೆಯಲಾಗುತ್ತದೆ. ಮಲೆನಾಡು ಭಾಗದಲ್ಲಿ ಕಾಫಿ ನಮ್ಮ ಬದುಕಿನಲ್ಲಿ ಒಂದಾಗಿದ್ದು, ಕಾಫಿ ವೃತ್ತಿಯನ್ನು ಅನುಭವಿಸಬೇಕು ಮತ್ತು ಪ್ರೀತಿಸಬೇಕು ಎಂದು ಕರೆ ನೀಡಿದರು.ಕೃಷಿ ಪ್ರತಿಯೊಬ್ಬರ ಬದುಕಿಗೆ ಸಂಪರ್ಕ ಸೇತುವೆಯಾಗಿದೆ. ಕಾಫಿ ಬೆಳೆಗೆ ಒಳ್ಳೆಯ ಬೆಲೆ ಇದ್ದರೂ ಸಹ ಕೃಷಿಕರು ಹಲವು ಸಂಕಷ್ಟ ಎದುರಿಸುತ್ತಾರೆ. ಬೆಲೆಯಲ್ಲಿ ಏರುಪೇರು ಸೇರಿದಂತೆ ಹಲವು ತೊಂದರೆಗಳ ನಡುವೆ ಕಾಫಿ ಬೆಳೆಗಾರರು ಕೃಷಿಯನ್ನು ನಂಬಿಕೊಂಡು ಬದುಕುತ್ತಿದ್ದಾರೆ ಎಂದು ಹೇಳಿದರು.
ಕಾಫಿ ಬೆಳೆ ಸಂಕಷ್ಟ ನಿವಾರಣೆ ಬಗ್ಗೆ ಚರ್ಚೆಗಳು ನಡೆಯಬೇಕು. ಚರ್ಚೆಯ ಮೂಲಕ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು ಎಂದು ದಿನೇಶ್ ದೇವವೃಂದ ಅವರು ಸಲಹೆ ಮಾಡಿದರು.ಇಡೀ ಜಗತ್ತಿನಲ್ಲಿ ಕಾಫಿ ಬೆಳೆಯ ದರ ಒಂದು ರೀತಿಯ ಸಂಚಲನ ಮೂಡಿಸಿದೆ. ಕಾಫಿ ಬೆಳೆಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆ ಸೌಲಭ್ಯವಿದ್ದು, ಈ ಅವಕಾಶವನ್ನು ಬಳಸಿಕೊಳ್ಳುವಂತಾಗಬೇಕು ಎಂದರು.
ಕೃಷಿಯಲ್ಲಿ ಮುನ್ನಡೆ ಸಾಧಿಸಿ:ಕಾಫಿ ಮಂಡಳಿಯು ಕಾಫಿ ಬೆಳೆಗಾರರಿಗೆ ಹೊಸ ಹೊಸ ತಂತ್ರಜ್ಞಾನದ ಮಾಹಿತಿ ನೀಡುವ ಮೂಲಕ ಅರಿವು ಮೂಡಿಸುತ್ತಿದೆ. ಹೊಸ ರೀತಿಯ ಬದಲಾವಣೆಗೆ ಹೊಂದಿಕೊಂಡು ಕಾಫಿ ಬೆಳೆಗಾರರು ಕೃಷಿಯಲ್ಲಿ ಮುನ್ನಡೆ ಸಾಧಿಸಬೇಕು ಎಂದರು.
ಕೊಡಗು ಜಿಲ್ಲೆಯಲ್ಲಿ ಕಾಫಿಯನ್ನು ಶೇ.75 ರಷ್ಟು ಬೆಳೆಯಲಾಗುತ್ತಿದೆ. ಕಾಫಿ ಬೆಳೆಗೆ ಇನ್ನಷ್ಟು ಉತ್ತೇಜನ ನೀಡುವಲ್ಲಿ ಸಹಕರಿಸಬೇಕು ಎಂದರು.ಹೊಸ ಹೊಸ ಪ್ರಯೋಗಗಳಿಗೆ ಹೊಂದಿಕೊಂಡು ಕಾಫಿ ಬೆಳೆಯನ್ನು ಅಭಿವೃದ್ಧಿ ಪಡಿಸಬೇಕು. ವಿಯಟ್ನಾಂ, ಬ್ರೆಜಿಲ್‍ಗೆ ಹೋಲಿಸಿದರೆ ಭಾರತದಲ್ಲಿ ಕಾಫಿ ಉತ್ಪಾದನೆ ಕಡಿಮೆ ಇದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಕಾಫಿ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಜಿಲ್ಲಾಡಳಿತ ರೈತರ, ಸಾರ್ವಜನಿಕರ ಹಿತಾಸಕ್ತಿ ಕಾಪಾಡುವಲ್ಲಿ ಸದಾ ಸಿದ್ಧವಾಗಿದೆ. ಕಾಫಿ ಬೆಳೆಗಾರರ ಸಮಸ್ಯೆಯನ್ನು ಪರಿಹರಿಸುವಲ್ಲಿ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಲಿದೆ ಎಂದರು.ವರ್ಷದಿಂದ ವರ್ಷಕ್ಕೆ ಹೊಸತನ ಕಂಡುಕೊಳ್ಳಬೇಕು. ಆ ನಿಟ್ಟಿನಲ್ಲಿ ವಿಡಿಯೋ ಸಂವಾದ ಮೂಲಕ ಕಾಫಿ ಬೆಳೆ ಉತ್ಪಾದನೆ, ಮಾರುಕಟ್ಟೆ ಸೌಲಭ್ಯ ಮತ್ತಿತರ ಬಗ್ಗೆ ತರಬೇತಿ ಕಾರ್ಯಕ್ರಮ ಏರ್ಪಡಿಸುವಲ್ಲಿ ಜಿಲ್ಲಾಡಳಿತ ಕೈಜೋಡಿಸಲಿದೆ ಎಂದರು.
ಕಾಫಿ ಕೃಷಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಕುರಿತು ಕಾಫಿ ಮಂಡಳಿಯ ನಿರ್ದೇಶಕರಾದ ಐಚೆಟ್ಟೀರ ಡಾ.ಮಂದಪ್ಪ, ಕಾಫಿ ಕೃಷಿಯಲ್ಲಿನ ಹೊಸತಳಿ ಕುರಿತು ಕಾಫಿ ಕೃಷಿ ಪರಿಣಿತರಾದ ಕರಣ್ ರೋಬಸ್ಟಾ ಕಾಫಿಯಲ್ಲಿ ಕುಬ್ಜ ತಳಿಯ ಮಾಹಿತಿ ಕುರಿತು ಜರ್ಮಿ ಡಿಸೋಜ, ಮಣ್ಣಿನ ಫಲವತ್ತತೆ ಮಹತ್ವ ಕುರಿತು ಪಶುವೈದ್ಯಕೀಯ ಆಸ್ಪತ್ರೆಯ ಸಹಾಯಕ ನಿರ್ದೇಶಕರಾದ ಡಾ.ಚೇಂದ್ರ್ರಿಮಾಡ ಕ್ಯಾಪ್ಟನ್ ತಿಮ್ಮಯ್ಯ ಅವರು ಮಾತನಾಡಿದರು.ಕಾಫಿ ಕ್ಷೇತ್ರದ ಸಾಧಕ ಕೃಷಿಕರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ, ಉಪಾಧ್ಯಕ್ಷರಾದ ಮಹೇಶ್ ಜೈನಿ, ದಸರಾ ಸಮಿತಿ ಕಾರ್ಯಾಧ್ಯಕ್ಷರಾದ ಬಿ.ಕೆ.ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಿ.ವೈ.ರಾಜೇಶ್, ಕೂರ್ಗ್ ಪ್ಲಾಂಟರ್ಸ್ ಅಸೋಷಿಯೇಷನ್‍ನ ಅಧ್ಯಕ್ಷರಾದ ನಂದ ಬೆಳ್ಯಪ್ಪ, ಕೊಡಗು ಮಹಿಳಾ ಜಾಗೃತಿ ಸಂಘದ ಅಧ್ಯಕ್ಷರಾದ ಜ್ಯೋತಿಕಾ, ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಎಸ್.ಜಿ.ಮೇದಪ್ಪ, ಬೂಕರ್ ಪ್ರಶಸ್ತಿ ವಿಜೇತರಾದ ದೀಪಾ ಬಾಸ್ತಿ, ಇತರರು ಇದ್ದರು.
ಕಾಫಿ ದಸರಾ ಸಂಚಾಲಕರಾದ ಅನಿಲ್ ಎಚ್.ಟಿ. ಸ್ವಾಗತಿಸಿದರು, ಕಾಫಿ ದಸರಾ ಸಮಿತಿ ಸದಸ್ಯರಾದ ವಿನೋದ್ ಮೂಡಗದ್ದೆ ನಿರೂಪಿಸಿದರು. ಸಪ್ನ ಮಧುಕರ ಕಾಫಿ ಕುರಿತು ಹಾಡು ಹಾಡಿದರು.ರು. 50 ಸಾವಿರ ಕೋಟಿ ವಹಿವಾಟು!
ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಮಾತನಾಡಿ2047ಕ್ಕೆ 7 ಲಕ್ಷ ಟನ್ ಕಾಫಿ ಉತ್ಪಾದಿಸುವ ಗುರಿ ಹೊಂದಲಾಗಿದೆ. ಭಾರತೀಯ ಕಾಫಿಯಲ್ಲಿ ಸುಮಾರು ರು.50 ಸಾವಿರ ಕೋಟಿ ವಹಿವಾಟು ನಡೆಸಲು ಉದ್ದೇಶಿಸಲಾಗಿದೆ. ಆ ನಿಟ್ಟಿನಲ್ಲಿ ವಿದೇಶಿ ವಿನಿಮಯ ಮಾಡಬೇಕು. ಮಾರುಕಟ್ಟೆ ಸೌಲಭ್ಯ ಕಲ್ಪಿಸಬೇಕು. ಬೆಳೆಗಾರರಿಗೆ ಅನುಕೂಲವಾಗಬೇಕು ಎಂದು ತಿಳಿಸಿದರು.
45 ಮಳಿಗೆಗಳಲ್ಲಿ ಏನೇನಿತ್ತು.....?ಕಾಫಿ ದಸರಾ ಅಂಗವಾಗಿ ಗಾಂಧಿ ಮೈದಾನದಲ್ಲಿ ಸುಮಾರು 45 ವಿವಿಧ ಮಳಿಗೆಗಳನ್ನು ತೆರೆಯಲಾಗಿತ್ತು. ಪ್ರಮುಖವಾಗಿ ಕಾಫಿ ಬೋರ್ಡ್, ವಿವಿಧ ಖಾಸಗಿ ಕಾಫಿ ಸಂಸ್ಥೆಗಳು, ಕಾಫಿ ಉತ್ಪನ್ನ ತಯಾರಿಕಾ ಸಂಸ್ಥೆಗಳು, ಕಾಫಿಯಿಂದ ಮಾಡಿದ ವಿವಿಧ ಬಗೆತ ಉತ್ಪನ್ನಗಳು, ಕಾಫಿಯಿಂದ ತಯಾರಿಸಲಾದ ಅಲಂಕೃತವಾದ ವಸ್ತುಗಳು ಮಾತ್ರವಲ್ಲದೇ ಮೀನುಗಾರಿಕೆ ಇಲಾಖೆ, ತೋಟಗಾರಿಕೆ ಇಲಾಖೆ, ಚೆಟ್ಟಳ್ಳಿಯ ಪ್ರಾಯೋಗಿಕ ಸಂಶೋಧನಾ ಕೇಂದ್ರ, ಕೃಷಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ಕಾಫಿ ಕೃಷಿಕರಿಗೆ ಮಾಹಿತಿ ನೀಡುವ ಮಳಿಗೆ ಹಾಗೂ ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು.ರಾಜ್ಯದಲ್ಲಿ ಕಾಫಿಯನ್ನು ಹೆಚ್ಚಾಗಿ ಉತ್ಪಾದನೆ ಮಾಡುವುದು ಕೊಡಗು ಜಿಲ್ಲೆ. ಆ ನಿಟ್ಟಿನಲ್ಲಿ ಕಾಫಿ ದಸರಾವನ್ನು ಕಳೆದ ವರ್ಷದಿಂದ ಏರ್ಪಡಿಸಲಾಗುತ್ತಿದ್ದು, ಇದೇ ರೀತಿ ಮುಂದುವರೆಯುವಂತಾಗಬೇಕು. ಕಾಫಿ ಬೆಳೆಗಾರರು ಎಲ್ಲರೂ ಒಂದೆಡೆ ಸೇರಿ ಕಾಫಿ ಬೆಳೆ ಉತ್ಪಾದನೆ ಮತ್ತು ಮಾರುಕಟ್ಟೆ ವಿಸ್ತರಣೆ ಮತ್ತಿತರ ಬಗ್ಗೆ ಚರ್ಚಿಸುವಂತಾಗಬೇಕು
। ಡಾ. ಮಂತರ್ ಗೌಡ, ಶಾಸಕರು ಮಡಿಕೇರಿ ಕ್ಷೇತ್ರ