ಸಾರಾಂಶ
ಮಡಿಕೇರಿ : ನಗರದ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ 14 ದೇವಾನು ದೇವತೆಗಳ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ಶ್ರೀ ಮುತ್ತಪ್ಪ ಜಾತ್ರೆ ಬುಧವಾರದಿಂದ ಏ.6ರ ತನಕ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ.ಸುಧೀರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ದೇವಾಲಯದ ತಂತ್ರಿ ಕೇರಳದ ಪಯ್ಯನ್ನೂರಿನ ಬ್ರಹ್ಮಶ್ರೀ ಕುನ್ನತ್ತಿಲ್ಲತ್ತ್ ಮುರಳಿಕೃಷ್ಣನ್ ನಂಬೂದರಿ ಹಾಗೂ ಪರಿಶಿನಿಕಡವು ಶ್ರೀ ಮುತ್ತಪ್ಪ ಕ್ಷೇತ್ರದ ಆಚಾರಪಟ್ಟ ಮಡೆಯಚ್ಚನ್, ಶ್ರೀ ಬ್ಲಾತೂರ್ ಚಂದ್ರನ್ ಮಡೆಯಚ್ಚನ್ ಅವರ ನೇತೃತ್ವದಲ್ಲಿ ನಾಲ್ಕುದಿನಗಳ ಕಾಲ ವಿವಿಧ ಪೂಜಾ ವಿಧಿವಿಧಾನಗಳು ಜರುಗಲಿದೆ ಎಂದು ಮಾಹಿತಿ ನೀಡಿದರು.
ಶ್ರೀ ಮುತ್ತಪ್ಪ ಉತ್ಸವ ಸಮಿತಿ ಅಧ್ಯಕ್ಷ ಬಿ.ಕೆ.ರವೀಂದ್ರ ರೈ ಮಾತನಾಡಿ, ಏ.3ರಂದು ಸಂಜೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಕಾರ್ಯಕ್ರಮದ ಪ್ರಯುಕ್ತ ಏ.4ರಂದು ಬೆಳಗ್ಗೆ ಗಣಪತಿ ಹೋಮ ಸೇರಿದಂತೆ ವಿವಿಧ ಪೂಜೆಗಳು ನಡೆಯಲಿವೆ. ಏ.5ರಂದು ಸಂಜೆ ಗಾಂಧಿ ಮೈದಾನದಿಂದ ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.
ಶ್ರೀ ಮುತ್ತಪ್ಪ ಮಹಿಳಾ ವೇದಿಕೆ ಅಧ್ಯಕ್ಷ ಶಾರದ ರಾಮನ್, ಮುತ್ತಪ್ಪ ದೇವಾಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಸುಬ್ರಮಣಿ, ಖಜಾಂಚಿ ಉಣ್ಣಿ ಕೃಷ್ಣ, ವೇದಿಕೆ ಸಮಿತಿ ಸಂಚಾಲಕ ಸದಾಶಿವ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.
ಗೌಡಳ್ಳಿ ಸನ್ನಿಧಿಯಲ್ಲಿ ಪರಿವಾರ ದೈವಗಳ ನೇಮೋತ್ಸವ:
ಗೌಡಳ್ಳಿ ಶ್ರೀ ನವದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿನ ಪರಿವಾರ ದೈವಗಳ ನೇಮೋತ್ಸವ ಇತ್ತೀಚೆಗೆ ದೇವಾಲಯ ಅವರಣದಲ್ಲಿ ನಡೆಯಿತು.
ಶ್ರೀ ರಕ್ತೇಶ್ವರಿ, ಶ್ರೀ ವರ್ಣಾರ ಪಂಜುರ್ಲಿ, ಶ್ರೀ ಮಂತ್ರ ಗುಳಿಗದ ಕೋಲ ನಡೆಯಿತು. ನೂರಾರು ಭಕ್ತಾದಿಗಳು ಪೂಜಾ ಉತ್ಸವದಲ್ಲಿ ಭಾಗವಹಿಸಿದ್ದರು. ಗಣ ಹೋಮ, ದೈವಗಳ ಶುದ್ಧೀಕರಣ, ಅನ್ನದಾನ ನಡೆಯಿತು.ಅನೇಕರು ಹರಕೆ ತೀರಿಸಿದರು. ಕೆಲವರು ಇಷ್ಟಾರ್ಥ ಸಿದ್ದಿಗಾಗಿ ದೈವಗಳಲ್ಲಿ ಹರಕೆ ಹೊತ್ತರು.
ದೇವಾಲಯ ಸಮಿತಿ ಅಧ್ಯಕ್ಷ ಬಿ.ಪಿ.ಮೊಗಪ್ಪ ಮಾತನಾಡಿ, ದಿ.ವೆಂಕಟರಮಣಚಾರ್ಯ ಅವರ ಶ್ರಮದಿಂದ ಗೌಡಳ್ಳಿಯಲ್ಲಿ ಶ್ರೀನವದುರ್ಗಾ ಪರಮೇಶ್ವರಿ ದೇವಾಲಯ ನಿರ್ಮಿಸಿ, ಸರ್ವಧರ್ಮಕ್ಷೇತ್ರವಾಗಿ ಬೆಳೆಯಲು ಕಾರಣಕರ್ತರಾಗಿದ್ದಾರೆ. ಈ ಕ್ಷೇತ್ರದ ಶಕ್ತಿ ಇಲ್ಲಿನ ಭಕ್ತಾದಿಗಳಿಗೆ ತಿಳಿದಿದೆ. ದಕ್ಷಿಣ ಕನ್ನಡ ಯಕ್ಷಗಾನ ಕಲೆಯ ಪ್ರದರ್ಶನ ಪ್ರತಿವರ್ಷ ಗೌಡಳ್ಳಿಯಲಿ ಕ್ಷೇತ್ರದಲ್ಲಿ ನಡೆಯುತ್ತದೆ. ಇತ್ತೀಚಿನ ವರ್ಷಗಳಲ್ಲಿ ಪರಿವಾರ ದೈವಗಳ ಪ್ರತಿಷ್ಠಾಪನೆ ಹಾಗು ನೇಮೋತ್ಸವ ನಡೆಯುತ್ತಿದೆ. ಇದರಿಂದ ಕ್ಷೇತ್ರದ ಶಕ್ತಿ ಹೆಚ್ಚಾಗಿದೆ ಎಂದು ಹೇಳಿದರು.ಪ್ರಧಾನ ಅರ್ಚಕ ವಿಶ್ವರೂಪಾಚಾರ್ಯ, ಪದಾಧಿಕಾರಿಗಳಾದ ಮಹೇಶ್, ಚಂದ್ರಶೇಖರ್, ಗುರುಪ್ರಸಾದ್ ಮತ್ತಿತರರು ಇದ್ದರು.