ಸಾರಾಂಶ
ಚಾಮರಾಜನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಶಾಸಕ ಪುಟ್ಟರಂಗಶೆಟ್ಟಿ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಬಸವಣ್ಣನವರ ಅನುಭವ ಮಂಟಪದಲ್ಲಿದ್ದ ಶಿವಶರಣರಲ್ಲಿ ಮಡಿವಾಳ ಮಾಚಯ್ಯ ಅವರು ಅತ್ಯಂತ ಶ್ರೇಷ್ಠ ವಚನಕಾರರಾಗಿದ್ದಾರೆ ಎಂದು ಎಂಎಸ್ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಡಿವಾಳ ಮಾಚಿದೇವ ಕಾಯಕದಲ್ಲಿ ನಿಷ್ಠೆಯುಳ್ಳ ಶಿವಶರಣರ ಮೈಲಿಗೆ ಬಟ್ಟೆಗಳನ್ನು ಮಡಿ ಮಾಡಿ ಅವರಿಗೆ ತಲುಪಿಸುವ ಕಾಯಕ ಮಾಡುತ್ತಿದ್ದರು. ಮಡಿ ಬಟ್ಟೆ ಹೊತ್ತುಕೊಂಡು ವೀರಗಂಟೆ ಬಾರಿಸುತ್ತಾ ಭಕ್ತರಲ್ಲದವರು ತಮ್ಮನ್ನು ಮುಟ್ಟಬಾರದೆಂಬ ನಿಯಮವನ್ನು ವಿಧಿಸಿಕೊಂಡಿದ್ದ ನೇರ ಹಾಗೂ ನಿಷ್ಠೂರವಾದಿ ಮಾಚಿದೇವರು. ಅವರ ಆದರ್ಶ ಮೌಲ್ಯಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಶಾಸಕರು ತಿಳಿಸಿದರು.ಅನುಭವ ಮಂಟಪ ಕಟ್ಟುವಲ್ಲಿ ಮಾಚಿದೇವರ ಕಾಯಕ ಅತಿ ಮಹತ್ವದ್ದಾಗಿದೆ. ದೇಶದ ವಿವಿಧ ಭಾಗಗಳಿಂದ ಕಲ್ಯಾಣಕ್ಕೆ ಬರುವವರನ್ನು ಪರಿಕ್ಷೀಸಿ ಮಡಿ ಹಾಸಿ ಸ್ವಾಗತಿಸುವ ಜವಾಬ್ದಾರಿಯುತ ಕೆಲಸ ನಿರ್ವಹಿಸುತ್ತಿದ್ದರು. ಮಾಚಿದೇವರ ಪರೀಕ್ಷೆಗೆ ಒಳಪಡದ ಹೊರತು ಕಲ್ಯಾಣಪುರ ಪ್ರವೇಶದ ಪ್ರಮಾಣ ಪತ್ರ ಹೊರಗಿನಿಂದ ಬರುವವರಿಗೆ ಸಿಗುತ್ತಿರಲಿಲ್ಲ ಇದು ಮಡಿವಾಳ ಮಾಚಿದೇವರ ಮಹಾ ಘನತೆಗೆ ಸಾಕ್ಷಿಯಾಗಿದೆ ಎಂದರು.
ಮಾಚಿದೇವರು ಸ್ವಾಮಿ ನಿಷ್ಠೆಗೆ ತನ್ನ ಮಗನ ಪ್ರಾಣವನ್ನೆ ತ್ಯಾಗ ಮಾಡಿದಂತಹ ಒಬ್ಬಶ್ರೇಷ್ಟ ವ್ಯಕ್ತಿಯಾಗಿದ್ದಾರೆ. ೧೨ನೇ ಶತಮಾನದಲ್ಲಿ ಬಸವಣ್ಣನವರ ಜೊತೆ ಸೇರಿ ಅಸ್ಪೃಶ್ಯತೆ, ಸಾಮಾಜಿಕ ಅಸಮಾನತೆ ಹೋಗಲಾಡಿಸುವ ಸಲುವಾಗಿ ಸರಳ ವಚನಗಳನ್ನು ರಚಿಸಿ ಜನರನ್ನು ಎಚ್ಚರಿಸಿದರು ಎಂದರು.ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚೂಡಾ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉದಯಕುಮಾರ್, ಜಿಲ್ಲಾ ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಎಂ.ಎನ್.ಶಶಿಧರ್, ಸಮಾಜದ ಮುಖಂಡರಾದ ದುಂಡುಮಹದೇವ, ಸಿದ್ದಶೆಟ್ಟಿ, ರಮೇಶ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.