ಸಾರಾಂಶ
ಕಾರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಮಡಿವಾಳ ಮಾಚಿದೇವ ಜಯಂತಿಯ ಅಂಗವಾಗಿ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಶಿಕ್ಷಕಿ ಶ್ರೀದೇವಿ ಕೆರೆಮನೆ ಮಡಿವಾಳ ಮಾಚಿದೇವ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರವಾರ: 12ನೇ ಶತಮಾನದ ಬಸವಣ್ಣನವರ ಸಮಕಾಲೀನ ಶರಣರಲ್ಲಿ ಮಡಿವಾಳ ಮಾಚಿದೇವ ಒಬ್ಬರಾಗಿದ್ದು, ಯಾವುದೇ ಜಾತಿ-ಧರ್ಮ, ಭೇದ-ಭಾವವಿಲ್ಲದೇ ಎಲ್ಲರೂ ಸಾಹಿತ್ಯ ರಚಿಸಲು ಸಹಕರಿಸಿ, ಅವುಗಳ ರಕ್ಷಣೆ ಮಾಡುವ ಮೂಲಕ ಸಮಾಜಕ್ಕೆ ಸಾಹಿತ್ಯವನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಮಡಿವಾಳ ಮಾಚಿದೇವ ಜಯಂತಿಯ ಅಂಗವಾಗಿ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಸಮಾಜದಲ್ಲಿ ಮೂಢನಂಬಿಕೆ, ಮೇಲು-ಕೀಳು ಎಂಬ ತಾರತಮ್ಯ ಹೋಗಲಾಡಿಸಲು ದಿಟ್ಟತನದಿಂದ ದುಷ್ಟರ ವಿರುದ್ಧ ಹೋರಾಡಿ ಸಮಾಜದ ಸಾಮರಸ್ಯ ಮತ್ತು ಏಕತೆಗೆ ತಮ್ಮ ಜೀವದ ಹಂಗನ್ನು ತೊರೆದು ಸಾಹಿತ್ಯದ ಜತೆಗೆ ಸಮಾಜಕ್ಕೆ ಸಮಾನತೆ ಸಂದೇಶವನ್ನು ಸಾರಿ ಉತ್ತಮ ಸಮಾಜ ಸೇವೆಯಲ್ಲಿ ತೊಡಗಿದ್ದವರು ಎಂದರು.ಸಮಯಪ್ರಜ್ಞೆ ಅರಿತುಕೊಂಡು, ಪ್ರತಿಯೊಬ್ಬರೂ ವಚನ ಸಾಹಿತ್ಯದ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಿರಂತರ ಪ್ರಯತ್ನಪಟ್ಟಲ್ಲಿ ಯಶಸ್ಸು ಖಚಿತವಾಗಿ ದೊರೆಯಲಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಾಲೂಕಿನ ಚಿತ್ತಾಕುಲಾ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಶ್ರೀದೇವಿ ಕೆರೆಮನೆ ಮಡಿವಾಳ ಮಾಚಿದೇವ ಅವರ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ವೀರಘಂಟೆ ಎಂದೇ ಪ್ರಸಿದ್ಧಿ ಪಡೆದ ಮಡಿವಾಳ ಮಾಚಿದೇವ, ಎಲ್ಲ ಧರ್ಮದವರನ್ನು ಸೇರಿಸಿಕೊಂಡು ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಹೋರಾಡಿದವರಲ್ಲಿ ಒಬ್ಬರಾಗಿದ್ದಾರೆ. ಅವರು ದೇವರ ಭಕ್ತಿಗಿಂತ ಕಾಯಕಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಕಾಯಕ ನಿಷ್ಠೆ, ಶ್ರದ್ಧೆಗೆ ಹೆಸರುವಾಸಿಯಾದವರು. 339 ವಚನ ಸಾಹಿತ್ಯಗಳು ಲಭ್ಯವಿದೆ ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ, ಸಮುದಾಯದ ಮುಖಂಡ ಶಾಂತ ಮಡಿವಾಳ, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.