ಸಾರಾಂಶ
12ನೇ ಶತಮಾನದಲ್ಲಿ ವಚನಗಳನ್ನು ರಚನೆ ಮಾಡುವ ಮೂಲಕ ಸಮಾಜದಲ್ಲಿದ್ದ ಮೌಢ್ಯಗಳ ಕುರಿತು ಜಾಗೃತಿ ಮೂಡಿಸುವಲ್ಲಿ ಮಡಿವಾಳ ಮಾಚಿದೇವರು ಪ್ರಮುಖರಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಕುಷ್ಟಗಿ
12ನೇ ಶತಮಾನದಲ್ಲಿ ವಚನಗಳನ್ನು ರಚನೆ ಮಾಡುವ ಮೂಲಕ ಸಮಾಜದಲ್ಲಿದ್ದ ಮೌಢ್ಯಗಳ ಕುರಿತು ಜಾಗೃತಿ ಮೂಡಿಸುವಲ್ಲಿ ಮಡಿವಾಳ ಮಾಚಿದೇವರು ಪ್ರಮುಖರಾಗಿದ್ದಾರೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ತಾಲೂಕಾಡಳಿತ ವತಿಯಿಂದ ನಡೆದ ಶರಣ ಮಡಿವಾಳ ಮಾಚಿದೇವರ ಜಯಂತಿಯಲ್ಲಿ ಮಾತನಾಡಿದರು. ಬಸವಣ್ಣನವರ ಸಮಕಾಲೀನರಾದ ಮಡಿವಾಳ ಮಾಚಿದೇವರು 12ನೇ ಶತಮಾನದ ಸಮಾಜದಲ್ಲಿದ್ದ ಮೌಢ್ಯಗಳ ಕುರಿತು ವಚನದ ಮೂಲಕ ಅರಿವು ಮೂಡಿಸಿದ್ದಾರೆ. ಜನಸಾಮಾನ್ಯರು ಮಡಿವಾಳ ಮಾಚಿದೇವರ ಬಗ್ಗೆ ಅರಿತು ತತ್ವ, ಆದರ್ಶಗಳನ್ನು ಪಾಲಿಸಬೇಕು ಎಂದು ಹೇಳಿದರು.
ತಹಸೀಲ್ದಾರ ಅಶೋಕ ಶಿಗ್ಗಾಂವಿ ಮಾತನಾಡಿ, ಮಡಿವಾಳ ಮಾಚಿದೇವರು ಒಂದು ವರ್ಗಕ್ಕೆ ಸೀಮಿತವಲ್ಲ. ಅವರ ವಚನಗಳು, ಸಾಮಾಜಿಕ ಚಿಂತನೆಗಳು ಇಂದಿನ ಯುವಕರಿಗೆ ಮಾದರಿಯಾಗಲಿವೆಎಂದರು.ಬಸವ ಸಮಿತಿ ಕಾರ್ಯದರ್ಶಿ ಮಹೇಶ ಹಡಪದ ಉಪನ್ಯಾಸ ನೀಡಿ, ದುರ್ಬಲರ ಶೋಷಣೆ, ಜಾತೀಯತೆ, ಮೇಲು-ಕೀಳು ತಾರತಮ್ಯ, ಅಸ್ಪೃಶ್ಯತೆ, ಮೂಢನಂಬಿಕೆಗಳ ಸೃಷ್ಟಿ, ಶಿಕ್ಷಣದಲ್ಲಿ ಅವಕಾಶ ವಂಚನೆ ಹೀಗೆ ಅನೇಕ ಸಾಮಾಜಿಕ ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾಗಿದ್ದರು. ಇದನ್ನು ಮನಗಂಡ ಶರಣ ಮಡಿವಾಳ ಮಾಚಿದೇವರು ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಒದಗಿಸಿಕೊಡಲು ಸಾಮಾಜಿಕ ಕ್ರಾಂತಿ ಕೈಗೊಂಡರು. ಇಂತಹ ಶರಣರ ತತ್ವ, ಸಿದ್ಧಾಂತಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭ ಮುಖಂಡರಾದ ಬಸವರಾಜ ಹಳ್ಳೂರ, ರಮೇಶ ಗಿರಣಿ, ಚಿದಾನಂದಪ್ಪ ಮಡಿವಾಳರ, ತಿಪ್ಪಣ್ಣ ಮಡಿವಾಳ, ಸತ್ಯಪ್ಪ ಮಡಿವಾಳ, ದ್ಯಾಮಣ್ಣ ಮಡಿವಾಳರ, ಶಿವಪ್ಪ ಮಡಿವಾಳ, ವಿರೂಪಾಕ್ಷಪ್ಪ ಮಡಿವಾಳ, ಬಸವರಾಜ್ ಮಡಿವಾಳ, ತಹಸೀಲ್ದಾರ ಕಾರ್ಯಾಲಯದ ಸಿಬ್ಬಂದಿ ಅಬ್ದುಲ್ ರಜಾಕ, ಸುಂದರ್ ರಾಜ್, ಶರಣಪ್ಪ ಹುಡೇದ, ಚಂದ್ರು ಪೂಜಾರ, ಪ್ರಜ್ವಲ್ ಇತರರಿದ್ದರು.