ಸಾರಾಂಶ
12ನೇ ಶತಮಾನದಲ್ಲಿ ಮೇಲು ಕೀಳು, ಅಸ್ಪೃಶ್ಯತೆ, ಜಾತಿಯತೆ, ಶಿಕ್ಷಣದಿಂದ ವಂಚನೆ ಸೇರಿದಂತೆ ಅನೇಕ ಕಾರಣಗಳಿಂದ ಜನರು ತುಳಿತಕ್ಕೆ ಒಳಗಾಗಿದ್ದರು. ಅಂತಹ ಸಂದರ್ಭದಲ್ಲಿ ಸಮಾಜ ತಿದ್ದುವ ಕೆಲಸ ಮಾಡಿದ ಅನೇಕ ಶರಣರಲ್ಲಿ ಮಡಿವಾಳ ಮಾಚಿದೇವರು ಒಬ್ಬರು.
ಕಾರವಾರ:
12ನೇ ಶತಮಾನದಲ್ಲಿ ಮೇಲು ಕೀಳು, ಅಸ್ಪೃಶ್ಯತೆ, ಜಾತಿಯತೆ, ಶಿಕ್ಷಣದಿಂದ ವಂಚನೆ ಸೇರಿದಂತೆ ಅನೇಕ ಕಾರಣಗಳಿಂದ ಜನರು ತುಳಿತಕ್ಕೆ ಒಳಗಾಗಿದ್ದರು. ಅಂತಹ ಸಂದರ್ಭದಲ್ಲಿ ಸಮಾಜ ತಿದ್ದುವ ಕೆಲಸ ಮಾಡಿದ ಅನೇಕ ಶರಣರಲ್ಲಿ ಮಡಿವಾಳ ಮಾಚಿದೇವರು ಒಬ್ಬರು ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಹೇಳಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ವರಿಗೂ ಸಮಪಾಲು, ಸಮಬಾಳು ಒದಗಿಸುವ ನಿಟ್ಟಿನಲ್ಲಿ ಸಮಾಜದಲ್ಲಿ ಬದಲಾಣೆ ತರಲು ಬಯಸಿದ ಶರಣರಲ್ಲಿ ಮಡಿವಾಳ ಮಾಚಿದೇವರು ಅಗ್ರಗಣ್ಯರಾಗಿದ್ದಾರೆ. ಕಾಯಕವೇ ಕೈಲಾಸ ಎಂಬಂತೆ ತಾವು ಮಾಡುವ ವೃತ್ತಿಯಲ್ಲಿ ಶ್ರದ್ಧೆ, ನಿಷ್ಠೆಯ ಮೂಲಕ ತಾವು ಮಾಡುವ ವೃತ್ತಿಯನ್ನು ಗೌರವದಿಂದ ಕಾಣುವುದನ್ನು ಅವರು ತೋರಿಸಿಕೊಟ್ಟಿದ್ದಾರೆ ಎಂದರು.ಶಿಕ್ಷಕ ಗಣೇಶ ಬಿಷ್ಠಣ್ಣನವರ ಉಪನ್ಯಾಸ ನೀಡಿ, ಕಾಯಕದಲ್ಲಿ ಕಾಯಕ ಯೋಗಿಯಾಗಿ, ಶರಣರಲ್ಲಿ ಶರಣರಾಗಿ, ಬದುಕಿದವರು ಮಡಿವಾಳ ಮಾಚಿದೇವರು. ಅವರ ದೂರದೃಷ್ಟಿ, ಸಾತ್ವಿಕ ಗುಣ ಮತ್ತು ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ರಾಮಚಂದ್ರ ಕೆ.ಎಂ, ತಾಲೂಕು ಮಡಿವಾಳ ಸಮಾಜದ ಅಧ್ಯಕ್ಷ ಶಾಂತಾ ಮಡಿವಾಳ, ಉಪಾಧ್ಯಕ್ಷ ನಾಗರಾಜ ಮಡಿವಾಳ, ಕಾರ್ಯದರ್ಶಿ ವಿಜಯ ಮಡಿವಾಳ ಹಾಗೂ ಸಮಾಜದ ಮುಖಂಡರು ಇದ್ದರು.