ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮಡಿವಾಳ ಸಮಾಜದ ಬಿ.ಶಿವಲಿಂಗಪ್ಪನವರನ್ನು ಭೀಕರವಾಗಿ ಹತ್ಯೆಗೈದಿರುವುದನ್ನು ಖಂಡಿಸಿ ಜಿಲ್ಲಾ ಮಡಿವಾಳರ ಸಂಘ ಹಾಗೂ ಸಾಮಾಜಿಕ ಸಂಘರ್ಷ ಸಮಿತಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಹೆಚ್ಚುವರಿ ರಕ್ಷಣಾಧಿಕಾರಿ ಡಾ.ಆರ್.ಶಿವಕುಮಾರ್‌ಗೆ ಮನವಿ ಸಲ್ಲಿಸಲಾಯಿತು.

ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ರಕ್ಷಣಾಧಿಕಾರಿ ಕಚೇರಿಗೆ ತೆರಳಿದ ಪ್ರತಿಭಟನಾಕಾರರು, ದಾರಿಯುದ್ದಕ್ಕೂ ಹತ್ಯೆಕೋರರ ವಿರುದ್ಧ ಧಿಕ್ಕಾರಗಳನ್ನು ಕೂಗಿದರು. ಮಡಿವಾಳ ಜನಾಂಗಕ್ಕೆ ಸೇರಿದ ಬಿ.ಶಿವಲಿಂಗಪ್ಪನವರು ರಾಜಕಾರಣ ಹಾಗೂ ಉದ್ಯಮದಲ್ಲಿ ವೇಗವಾಗಿ ಬೆಳೆಯುತ್ತಿರುವುದನ್ನು ಕಂಡು ಸಹಿಸದವರಿಂದ ಹತ್ಯೆಯಾಗಿರಬಹುದೆಂಬ ಅನುಮಾನವಿದ್ದು, ತನಿಖೆ ನಡೆಸಿ ಶೀಘ್ರವೇ ಹಂತಕರನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕು. ದುಃಖತಪ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದ ಜಿಲ್ಲಾ ಮಡಿವಾಳರ ಸಂಘದ ಗೌರವಾಧ್ಯಕ್ಷ ಡಾ.ವಿ.ಬಸವರಾಜ್ ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಹೆಚ್ಚುವರಿ ರಕ್ಷಣಾಧಿಕಾರಿ ಡಾ.ಆರ್.ಶಿವಕುಮಾರ್, ಮೃತದೇಹ ಪತ್ತೆಯಾದ ಜಾಗಕ್ಕೆ ಜಿಲ್ಲಾ ರಕ್ಷಣಾಧಿಕಾರಿ, ನಾನು ಮತ್ತು ಡಿವೈಎಸ್‌ಪಿ ಭೇಟಿ ನೀಡಿದ್ದು, ಹಂತಕರ ಪತ್ತೆಗೆ ತಂಡ ರಚಿಸಲಾಗಿದೆ. ಆದಷ್ಟು ಬೇಗನೆ ಹತ್ಯೆಕೋರರನ್ನು ಬಂಧಿಸಿ ಅವರ ಕುಟುಂಬಕ್ಕೆ ನ್ಯಾಯ ಒದಗಿಸುವ ಭರವಸೆ ನೀಡಿದರು.

ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಬಿ.ರಾಮಜ್ಜ, ಪ್ರಧಾನ ಕಾರ್ಯದರ್ಶಿ ಕೆ.ಆರ್.ಮಂಜುನಾಥ್, ಮಡಿವಾಳ ಸಮಾಜದ ವಿರುಪಾಕ್ಷಪ್ಪ, ಲೋಕೇಶ್ವರಪ್ಪ, ರಾಮಕೃಷ್ಣ, ಧ್ರುವಕುಮಾರ್, ಬಸವರಾಜ್, ನಾಗಣ್ಣ, ಮಂಜುನಾಥ್, ಟಿ.ರುದ್ರಮುನಿ, ರಮೇಶ್, ರಂಗಮ್ಮ, ಪ್ರಕಾಶ್ ಎಸ್‍ಜೆಎಂಐಟಿ, ರಮೇಶ್ ಜಗಳೂರು, ಮಾದಿಗರ ಸಾಂಸ್ಕøತಿಕ ಸಂಘದ ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿ ಮಲ್ಲಿಕಾರ್ಜುನ್, ಸಾಮಾಜಿಕ ಸಂಘರ್ಷ ಸಮಿತಿಯ ಪ್ರೊ.ಸಿ.ಕೆ.ಮಹೇಶ್, ಟಿ.ರಾಮು, ರಾಮುಗೋಸಾಯಿ, ಸಿ.ಎ.ಚಿಕ್ಕಣ್ಣ, ಅಖಿಲ ಕರ್ನಾಟಕ ಕೊರಚ ಮಹಾ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.