ಹುಬ್ಬಳ್ಳಿ:
ರಾಜ್ಯದಲ್ಲಿನ ಹಲವು ಮದರಸಾ ಮಕ್ಕಳನ್ನು ಮತಾಂತರ ಮಾಡುವ ಕೇಂದ್ರಗಳಾಗಿವೆ. ಸರ್ಕಾರ ಇಂತಹವುಗಳ ಮೇಲೆ ಸೂಕ್ತ ಕ್ರಮಕೈಗೊಳ್ಳುವಂತೆ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲವ್ ಜಿಹಾದ್ ಎನ್ನುವುದು ಅಮಾಯಕ ಯುವತಿಯರ ಜೀವನ ಹಾಳು ಮಾಡುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಕಾನೂನು ಜಾರಿಗೆ ತರಬೇಕು. ಅಲ್ಲದೆ ರಾಜ್ಯದಲ್ಲಿ ನೋಂದಣಿ ಕಚೇರಿಗಳು ಸುಳ್ಳು ದಾಖಲೆ ನೀಡಿದರೆ ಮದುವೆ ನೋಂದಣಿ ಮಾಡಿಕೊಳ್ಳುವ ಭ್ರಷ್ಟಾಚಾರದ ಕೂಪಗಳಾಗಿವೆ. ಈ ವರೆಗೆ ನಡೆದಿರುವ ಮದುವೆಗಳ ನೋಂದಣಿಯ ವಾಸ್ತವತೆ ಕುರಿತು ತನಿಖೆ ನಡೆಸಬೇಕು. ಲವ್ ಜಿಹಾದ್ ವಿರೋಧಿ ಕಾನೂನುಗಳು ಕೆಲ ರಾಜ್ಯಗಳಲ್ಲಿದ್ದು, ಇವುಗಳನ್ನು ಕೇಂದ್ರ ಸರ್ಕಾರವೇ ಇಡೀ ದೇಶಕ್ಕೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ದೇಶದಲ್ಲಿ ಕಳೆದ ಮೂರು ವರ್ಷದ ಅವಧಿಯಲ್ಲಿ 13.13 ಲಕ್ಷ ಯುವತಿಯರ ನಾಪತ್ತೆ ಪ್ರಕರಣಗಳು ನಡೆದಿವೆ. ಇದರಲ್ಲಿ 2,51,430 ಅಪ್ರಾಪ್ತರು. ಶೇ. 62ರಷ್ಟು ಪ್ರಕರಣಗಳಲ್ಲಿ ಹಿಂದೂ ಹೆಸರು ಹೇಳಿಕೊಂಡು ಯುವತಿಯರನ್ನು ವಂಚಿಸಿದ್ದಾರೆ. ಶೇ. 37 ಪ್ರಕರಣಗಳಲ್ಲಿ ನಿಜವಾದ ಹೆಸರು ಹೇಳಿ ಲವ್ ಜಿಹಾದ್ ಬಲೆಗೆ ಬೀಳಿಸಿದ್ದಾರೆ. ಓರಿಸ್ಸಾ, ಹರಿಯಾಣ, ಬಿಹಾರ, ಪಶ್ಚಿಮ ಬಂಗಾಳ, ಜಾರ್ಖಂಡ ರಾಜ್ಯಗಳಲ್ಲಿ ಹೆಚ್ಚು ಪ್ರಕರಣಗಳು ನಡೆದಿವೆ. ರಾಜ್ಯದಲ್ಲಿಯೂ ಕೂಡ ಯುವತಿಯರ ನಾಪತ್ತೆ ಪ್ರಕರಣಗಳು ನಡೆದಿದ್ದು, ಸರ್ಕಾರ ಇವುಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.ಮತಾಂತರ:
ಕೇರಳದ ಪಳನಿ ಎನ್ನುವಲ್ಲಿ 10 ಎಕರೆ ಪ್ರದೇಶದಲ್ಲಿರುವ ಮದರಸಾದಲ್ಲಿ ಅಪಹರಣ ಮಾಡಿದ ಯುವಕ, ಯುವತಿಯರ ಮತಾಂತರ ಮಾಡುವ ಕೆಲಸ ನಡೆಯುತ್ತಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಕೇರಳ ಫೈಲ್ಸ್ ಸಿನಿಮಾ ಮಾಡಿದ್ದಾರೆ ಎಂದರು.
ಶ್ರೀರಾಮಸೇನೆಯು 20 ವರ್ಷದಲ್ಲಿ 4800 ಲವ್ ಜಿಹಾದ್‌ಗೆ ಒಳಗಾಗಿದ್ದ ಯುವತಿಯರನ್ನು ರಕ್ಷಣೆ ಮಾಡಿ ಅವರ ಬೆನ್ನಿಗೆ ನಿಂತಿದೆ. 2 ವರ್ಷದ ಹಿಂದೆ ಆರಂಭಿಸಿರುವ ಸಹಾಯವಾಣಿಗೆ 8000 ಕಾಲ್ ಬಂದಿದ್ದು, ಶೇ. 70 ಪ್ರಕರಣಗಳಿಗೆ ಸ್ಪಂದಿಸಿ ಸಮಸ್ಯೆ ಬಗೆಹರಿಸಿದ್ದೇವೆ. ನಗರದ ಪ್ರತಿಷ್ಠಿಯ ಹೈಸ್ಕೂಲ್‌ನಲ್ಲಿ 9ನೇ ತರಗತಿಯ ವಿದ್ಯಾರ್ಥಿಯೊಬ್ಬ ಮೂವರು ವಿದ್ಯಾರ್ಥಿನಿಯರಿಗೆ ನಮಾಜ್, ಉಪವಾಸ ಮಾಡುವುದನ್ನು ತುಂಬಿದ್ದ. ಮತಾಂತರ ಎನ್ನುವ ಮನಸ್ಥಿತಿ ಚಿಕ್ಕ ಮಕ್ಕಳಿಂದಲೂ ತುಂಬುವ ಕೆಲಸ ಆಗುತ್ತಿದ್ದು, ಶಿಕ್ಷಣ ಸಂಸ್ಥೆಗಳು ಇವುಗಳ ಬಗ್ಗೆ ಎಚ್ಚರ ವಹಿಸಬೇಕು ಎಂದು ಒತ್ತಾಯಿಸಿದರು.