ಹೆಣ್ಣು ಮಕ್ಕಳು ಕಾಣೆಯಾಗುವ ಹಿಂದೆ ಮಾಫಿಯಾ: ಡಾ. ನಾಗಲಕ್ಷ್ಮೀ ಚೌಧರಿ

| Published : Oct 06 2024, 01:15 AM IST

ಸಾರಾಂಶ

ಚಿಕ್ಕಮಗಳೂರು, ಹೆಣ್ಣು ಮಕ್ಕಳು ಕಾಣೆಯಾಗುವ ಹಿಂದೆ ದೊಡ್ಡ ಮಾಫಿಯಾ ನಮ್ಮ ದೇಶದಲ್ಲಿ ಇದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಹೇಳಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದೇ ವರ್ಷದಲ್ಲಿ 250 ಮಹಿಳೆಯರು ಕಾಣೆಯಾಗಿದ್ದಾರೆ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಹೆಣ್ಣು ಮಕ್ಕಳು ಕಾಣೆಯಾಗುವ ಹಿಂದೆ ದೊಡ್ಡ ಮಾಫಿಯಾ ನಮ್ಮ ದೇಶದಲ್ಲಿ ಇದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಹೇಳಿದ್ದಾರೆ.

ಶನಿವಾರ ನಗರದ ಸರ್ಕಾರಿ ಮೆಡಿಕಲ್‌ ಕಾಲೇಜು ಹಾಗೂ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದೇ ವರ್ಷದಲ್ಲಿ 250 ಮಹಿಳೆಯರು ಕಾಣೆಯಾಗಿದ್ದಾರೆ. ಈ ಕುರಿತು ಮಾಹಿತಿ ನೀಡುವಂತೆ ಪೊಲೀಸ್‌ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಕೌಟುಂಬಿಕ ದೌರ್ಜನ್ಯದಲ್ಲಿ ಮಹಿಳೆಯರ ಹತ್ಯೆ, ಅತ್ಯಾಚಾರ, ಮಹಿಳೆಯರು ಕಾಣೆಯಾಗಿರುವ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ಕೇಳಿದ್ದೇನೆ.

ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಹಿಳೆಯರು ಕೆಲವು ದೂರುಗಳನ್ನು ನೀಡಿದ್ದಾರೆ. ಆಸ್ಪತ್ರೆಗೆ ಅಡ್ಮಿಟ್ ಆಗಲು ಬರುವ ಸಂದರ್ಭದಲ್ಲಿ ಹಾಗೂ ರಕ್ತ ಪರೀಕ್ಷೆ ವೇಳೆಯಲ್ಲಿ ಓಡಾಡಿಸುತ್ತಾರೆ. ಇದರಿಂದ ಗರ್ಭಿಣಿ ಮಹಿಳೆ ಯರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಹೇಳಿದ್ದಾರೆ. ಈ ಕುರಿತು ಪರಿಶೀಲನೆ ನಡೆಸಬೇಕು. ಈ ರೀತಿ ತೊಂದರೆಯಾಗದಂತೆ ನೋಡಿ ಕೊಳ್ಳಬೇಕೆಂದು ವೈದ್ಯರಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಒಂದು ಸಂಸ್ಥೆಯಲ್ಲಿ ಹತ್ತಕ್ಕಿಂತ ಹೆಚ್ಚು ಜನ ಮಹಿಳೆಯರಿದ್ದರೆ ಅಲ್ಲೊಂದು ಸಮಿತಿ ರಚನೆ ಮಾಡಬೇಕೆಂದು ಕಾನೂನು ಇದೆ. ಮೆಡಿಕಲ್‌ ಕಾಲೇಜಿಗೆ ಹೋಗಿದ್ದ ಸಂದರ್ಭದಲ್ಲಿ ಸಮಿತಿ ರಚನೆ ಬಗ್ಗೆ ಮಾಹಿತಿ ನೀಡಲಾಯಿತು. ಆ ಸಮಿತಿ ಯಾವ ಯಾವ ಕ್ರಮಗಳನ್ನು ತೆಗೆದುಕೊಳ್ಳ ಬೇಕೆಂದು ತಿಳಿಸಲಾಯಿತು ಎಂದರು.

ಪ್ರೀತಿಸಿ ಮದುವೆಯಾಗುವವರ ಸಂಖ್ಯೆ ಹೆಚ್ಚಾಗಿದೆ. ಅವರಲ್ಲಿ ಹೆಚ್ಚಿನ ಸಂಖ್ಯೆಯವರು ಬಾಲ್ಯ ವಿವಾಹದೊಳಗೆ ಒಳಪಡುತ್ತಾರೆ. ಕೆಲವೆಡೆ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗುತ್ತಿದೆ. ಈ ಕಾಯ್ದೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದರಿಂದ ಪ್ರಕರಣಗಳು ಬೆಳಕಿಗೆ ಬರುತ್ತಿವೆ ಎಂದ ಅವರು, ಈ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಸರ್ಕಾರ ತೆರೆದ ಮನೆ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ಕಾರ್ಯಕ್ರಮ ನಿರಂತರವಾಗಿ ನಡೆಸಿಕೊಂಡು ಬರಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಂಗನವಾಡಿ ಕೇಂದ್ರದಲ್ಲಿ ಮಹಿಳೆಯರಿಗೆ ಮೊಟ್ಟೆ ಹಾಗೂ ಆಹಾರ ಧಾನ್ಯ ನೀಡುತ್ತಿಲ್ಲ ಎಂಬ ದೂರು ಬಂದಿದೆ. ರಾಜ್ಯ ಸರ್ಕಾರ ಈ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಕೋಟ್ಯಂತರ ರು. ಖರ್ಚು ಮಾಡುತ್ತಿದೆ. ಆದರೆ, ಅದರ ಸಮರ್ಪಕ ಜಾರಿಯತ್ತ ಅಧಿಕಾರಿ ಗಳು ಗಮನ ಹರಿಸಬೇಕು ಎಂದರು.

ಈ ಹಿಂದೆ ಸಾಲದಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು ಆದರೆ ಇದೀಗ ಮೈಕ್ರೋ ಫೈನಾನ್ಸ್ ನಿಂದಾಗಿ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಇದು ಪಡಂಭೂತವಾಗಿ ಬೆಳೆಯುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ಸೆಳೆಯಲಾಗುವುದು ಎಂದು ಹೇಳಿದರು.

--- ಬಾಕ್ಸ್‌ -----ಸಚಿವ ದಿನೇಶ್‌ ಗುಂಡೂರಾವ್‌ ಪತ್ನಿಯಿಂದ ಆಯೋಗಕ್ಕೆ ಪತ್ರಚಿಕ್ಕಮಗಳೂರು: ಬಿಜೆಪಿಯ ಅಧಿಕೃತ ಟಿಟ್ವರ್‌ನಲ್ಲಿ ವೈಯಕ್ತಿಕವಾಗಿ ತೇಜೋವಧೆ ಮಾಡಿರುವ ಬಗ್ಗೆ ಸಚಿವ ದಿನೇಶ್‌ ಗುಂಡೂರಾವ್‌ ಅವರ ಪತ್ನಿ ಟಬು ಅವರು ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದಾರೆ ಎಂದು ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಹೇಳಿದ್ದಾರೆ.

ಶನಿವಾರ ಚಿಕ್ಕಮಗಳೂರು ಜಿಲ್ಲಾ ಪ್ರವಾಸ ಕೈಗೊಂಡಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮುಸ್ಲಿಂ ಹೆಣ್ಣು ಮಗಳು ಹಿಂದೂ ಧರ್ಮಕ್ಕೆ ಮದುವೆಯಾಗಿದ್ದಾರೆಂಬ ಒಂದೇ ಕಾರಣಕ್ಕಾಗಿ ಪ್ರತಿ ಸಲ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆ ಮಾಡುತ್ತಾ ಬಂದಿದ್ದಾರೆ ಎಂದು ಹೇಳಿದರು.

ನಾನು ಸುಮ್ಮನೆ ಇರಬೇಕು ಎಂದು ಕೊಂಡಿದ್ದೆ, ಎಷ್ಟು ದಿನ ಸುಮ್ಮನೆ ಇರೋದು, ಹಿಂದೂವನ್ನು ಮದುವೆಯಾಗಿದ್ದೆ ತಪ್ಪಾ, ನಾನು ಮಾತನಾಡಿ ದರೆ ಧರ್ಮದ ಕಡೆಗೆ ತಂದು ನಿಲ್ಲಿಸುತ್ತಾರೆ ಎಂದು ಟಬು ಅವರು ಹೇಳಿದ್ದಾರೆ. ನಮ್ಮ ಆಯೋಗಕ್ಕೆ ಬಿಜೆಪಿ, ಕಾಂಗ್ರೆಸ್ ಯಾವುದೇ ಪಕ್ಷವಿಲ್ಲ, ಆಯೋಗಕ್ಕೆ ನ್ಯಾಯ, ನೀತಿ, ಧರ್ಮ, ಪಕ್ಷ, ಎಲ್ಲಾ ಹೆಣ್ಣು ಎಂದ ಅವರು, ಬಿಜೆಪಿ ಅಧಿಕೃತ ಟ್ವಿಟರ್ ನಲ್ಲಿ ತೇಜೋವಧೆ ಮಾಡಿದ್ದಾರೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ನಿನಗೆ ಮಾಂಸ ತಿನ್ನುವ ಹೆಂಡತಿ ಇಲ್ವಾ ಎಂದು ಸಚಿವರನ್ನು ಹೀಯಾಳಿಸಿದ್ದಾರೆ. ಹೆಣ್ಣಿಗೆ ಅಗೌರವ ತರುವ ಟ್ಟಿಟ್ ಮಾಡಿದ್ದಾರೆ. ನಾನು ಬೆಂಗಳೂರು ಕಮಿಷನರ್ ಗೆ ಪತ್ರ ಬರೆಯುತ್ತಿದ್ದೇನೆ. ಟ್ವಿಟ್‌ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ತಿಳಿಸಿದ್ದೇನೆ ಎಂದು ಹೇಳಿದರು. 5 ಕೆಸಿಕೆಎಂ 3ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಚಿಕ್ಕಮಗಳೂರಿನ ತಾಯಿ ಮತ್ತು ಮಗುವಿನ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಗುವಿಗೆ ಮಾತನಾಡಿಸುತ್ತಿರುವುದು.