ಬೀದಿ ದೀಪ ಅಳವಡಿಕೆಯಲ್ಲಿ ಮಾಫಿಯಾ: ಆಝಾದ್ ಅಣ್ಣಿಗೇರಿ

| Published : Oct 14 2025, 01:02 AM IST

ಬೀದಿ ದೀಪ ಅಳವಡಿಕೆಯಲ್ಲಿ ಮಾಫಿಯಾ: ಆಝಾದ್ ಅಣ್ಣಿಗೇರಿ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಬೀದಿಯಲ್ಲಿ ಅಳವಡಿಸಲಾದ ಬೀದಿ ದೀಪದಲ್ಲಿ ದೊಡ್ಡ ಮಾಫಿಯಾ ನಡೆದಿದೆ. ಇದಕ್ಕೆ ಸಂಬಂಧಿಸಿ ಸೂಕ್ತ ತನಿಖೆ ಮಾಡಬೇಕು.

ಹೊನ್ನಾವರ ಪಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆರೋಪ

ಕನ್ನಡಪ್ರಭ ವಾರ್ತೆ ಹೊನ್ನಾವರ

ಪಟ್ಟಣದ ಬೀದಿಯಲ್ಲಿ ಅಳವಡಿಸಲಾದ ಬೀದಿ ದೀಪದಲ್ಲಿ ದೊಡ್ಡ ಮಾಫಿಯಾ ನಡೆದಿದೆ. ಇದಕ್ಕೆ ಸಂಬಂಧಿಸಿ ಸೂಕ್ತ ತನಿಖೆ ಮಾಡಬೇಕು ಎಂದು ಪಪಂ ಸದಸ್ಯ ಆಝಾದ್ ಅಣ್ಣಿಗೇರಿ ಆರೋಪಿಸಿದರು.

ಪಪಂ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಬಗ್ಗೆ ಪ್ರಗತಿ ಪರಿಶೀಲನೆ ಸಮಯದಲ್ಲಿ ಮಾತನಾಡಿದ ಅವರು, ಪಟ್ಟಣದ ವಿವಿಧೆಡೆ ಒಂದೊಂದು ಮಾದರಿಯ ಲೈಟ್ ಅಳವಡಿಸಲಾಗುತ್ತಿದೆ. ಪಪಂ ಅನುದಾನದಲ್ಲಿ ಅಳವಡಿಸಿದ ಬಲ್ಬ್ ನಾಪತ್ತೆಯಾಗುತ್ತಿದೆ ಈ ಬಗ್ಗೆ ಗಮನಹರಿಸುವಂತೆ ಸೂಚಿಸಿದರು.

ಇದಕ್ಕೆ ಸಂಬಂಧಿಸಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವ ಜೊತೆ ಈ ಬಗ್ಗೆ ಗುತ್ತಿಗೆ ಪಡೆದ ಕಂಪನಿಯವರಿಗೆ ಎಚ್ಚರ ವಹಿಸುವಂತೆ ತಿಳಿಸುವುದಾಗಿ ಮುಖ್ಯಾಧಿಕಾರಿಗಳು ಭರವಸೆ ನೀಡಿದರು.

ಪಪಂ ವ್ಯಾಪ್ತಿಯಲ್ಲಿ ವಾರ್ಡ್ ಸದಸ್ಯರ ಗಮನಕ್ಕೆ ತರೆದೇ ಕೆಲಸ ನಡೆಯುತ್ತಿದೆ, ಇದು ಎಷ್ಟರ ಮಟ್ಟಿಗೆ ಸರಿ ಎಂದು ಸದಸ್ಯ ಶ್ರೀಪಾದ ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು.

ವಾರ್ಡಿನ ಸದಸ್ಯರ ಗಮನಕ್ಕೆ ತಂದು ಕಾಮಗಾರಿ ನಡೆಸಿ ಜೊತೆಗೆ ಯಾವುದೋ ವಾರ್ಡಿನ ಹಣವನ್ನು ಇನ್ನೊಂದು ವಾರ್ಡಿಗೆ ಹಾಕುವುದು ಅನ್ಯಾಯ. ಅಲ್ಲದೆ ಮಾಡಿದ ಕೆಲಸವನ್ನು ಗುಣಮಟ್ಟದಿಂದ ಮಾಡಬೇಕು ಎಂದು ಸದಸ್ಯರು ಆಗ್ರಹಿಸಿದರು.

ಪಟ್ಟಣದಲ್ಲಿ ೫೭ ಕಾಮಗಾರಿಗಳಿಗೆ ಕ್ರಿಯಾಯೋಜನೆಯ ವಿಷಯದಲ್ಲಿ ವಿಸ್ತ್ರತ ಚರ್ಚೆ ನಡೆಯಿತು. ಸಾರ್ವಜನಿಕರ ಹಣವನ್ನು ದುಂದುವೆಚ್ಚ ಆಗದಂತೆ ಅಧಿಕಾರಿಗಳು ಗಮನಹರಿಸಿ ಎಂದು ಸದಸ್ಯರು ಎಚ್ಚರಿಸಿದರು.

ಶರಾವತಿ ಬೋಟಿಂಗ್ ವ್ಯವಸ್ಥೆಗೆ ಈ ಹಿಂದೆ ಜಿಲ್ಲಾಧಿಕಾರಿ ಸಭೆಯಲ್ಲಿ ನಿರ್ಣಯದಂತೆ ಟೋಕನ್ ವ್ಯವಸ್ಥೆ ಮಾಡಬೇಕು. ಇದರಿಂದ ಟ್ರಾಫಿಕ್ ಸಮಸ್ಯೆ ಬಗೆಹರಿಯಲಿದೆ ಎಂದು ಸದಸ್ಯ ಶಿವರಾಜ ಮೇಸ್ತ ಒತ್ತಾಯಿಸಿದಾಗ ಹಲವು ಸದಸ್ಯರು ಧ್ವನಿಗೂಡಿಸಿದರು. ಪಟ್ಟಣದ ರಸ್ತೆ, ಬೆಳಕು ಬಳವಡಿಸಿಕೊಳ್ಳುದರಿಂದ ಪಪಂ ಆದಾಯ ಪಡೆಯಲು ಇರುವ ಅವಕಾಶಗಳ ಬಗ್ಗೆ ಚರ್ಚೆ ಜರುಗಿತು.

ಬಂದರು ಪ್ರದೇಶದಲ್ಲಿ ವಾರದ ಸಂತೆ ಆಗುವ ಸ್ಥಳದಲ್ಲಿ ಹಲವು ವರ್ಷದಿಂದ ರಸ್ತೆ ಹದಗೆಟ್ಟಿದೆ ಎಂದು ಹೇಳಿದರಾದರೂ ಅಂತಿಮವಾಗಿ ಪಪಂ ಅನುದಾನ ಹಾಕುವುದು ಬೇಡ ಎನ್ನುವ ತೀರ್ಮಾನ ಸಭೆಯಲ್ಲಿ ಕೈಗೊಳ್ಳಲಾಯಿತು.

ಪಪಂ ಉಪಾಧ್ಯಕ್ಷ ಸುರೇಶ ಹೊನ್ನಾವರ, ಸ್ಥಾಯಿಸಮಿತಿ ಅಧ್ಯಕ್ಷ ಮಹೇಶ ಮೇಸ್ತ, ಮುಖ್ಯಾಧಿಕಾರಿ ಯೇಸು ಬೆಂಗಳೂರು, ಸದಸ್ಯರು ಸಿಬ್ಬಂದಿ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.