ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ತಾಲೂಕಿನ ಮಾಗಳ-ಬಿದರಹಳ್ಳಿ ಮಧ್ಯೆ ಸಂಚರಿಸುತ್ತಿದ್ದ ನಾಡದೋಣಿ ದುರಸ್ತಿಗೆ ಬಂದು 6 ತಿಂಗಳು ಕಳೆದಿದೆ. ಕೊನೆಗೂ ಒಳನಾಡು ಮತ್ತು ಬಂದರು ಜಲ ಸಾರಿಗೆ ಇಲಾಖೆಯಿಂದ ₹14 ಲಕ್ಷಕ್ಕೆ ಟೆಂಡರ್‌ ಆಗಿ ಉಡುಪಿ ಜಿಲ್ಲೆಗೆ ಸಾಗಿಸಲಾಗಿದೆ.

ವಿಜಯನಗರ, ಗದಗ, ಹಾವೇರಿ ಸೇರಿದಂತೆ ಮೂರು ಜಿಲ್ಲೆಗಳ ಸಂಪರ್ಕ ಕೊಂಡಿಯಾಗಿದ್ದ ಮಾಗಳ-ಬಿದರಹಳ್ಳಿ ಮಧ್ಯೆ ನಾಡದೋಣಿ ಸಂಚರಿಸುತ್ತಿತ್ತು. ಕಳೆದ ಜನವರಿ ತಿಂಗಳಲ್ಲೇ ನಾಡದೋಣಿಯಲ್ಲಿ ಸಾಕಷ್ಟು ಕಡೆ ರಂಧ್ರಗಳು ಬಿದ್ದು, ದೋಣಿಯ ಕವಚ ಸಂಪೂರ್ಣ ತುಕ್ಕು ಹಿಡಿದು ನದಿ ನೀರು ದೋಣಿಯೊಳಗೆ ನುಗ್ಗಿ ತೊಂದರೆ ಉಂಟಾಗುತ್ತಿತ್ತು. ಇದರಿಂದ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇಲಾಖೆ ಅಧಿಕಾರಿಗಳು ಸರ್ಕಾರದಕ್ಕೆ ಪತ್ರ ಬರೆದು ಇಲಾಖೆಯಿಂದ ಅಗತ್ಯ ಅನುದಾನ ಬಿಡುಗಡೆಯಾಗಿ, ಟೆಂಡರ್‌ ಪೂರ್ಣಗೊಳಿಸಲು 6 ತಿಂಗಳು ಕಳೆದರೂ ಇನ್ನು ದುರಸ್ತಿಯಲ್ಲೇ ನಾಡದೋಣಿ ಕಾಲ ಕಳೆಯುತ್ತಿದೆ.

ನಾಡದೋಣಿ ಸಂಚಾರ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಮೈಲಾರ ಇಲ್ಲವೇ ಮದಲಗಟ್ಟಿ ಸೇತುವೆ ಮೂಲಕ 40 ರಿಂದ 45 ಕಿ.ಮೀ ಪ್ರಯಾಣಿಕರು ಸುತ್ತುವರೆದು ಹೋಗುವ ಸ್ಥಿತಿ ನಿರ್ಮಾಣವಾಗಿದೆ.

ಗದಗ ಜಿಲ್ಲೆಯ ಶಿರಹಟ್ಟಿ, ಲಕ್ಷ್ಮೇಶ್ವರ, ಗುಮ್ಮಗೋಳ, ಬೆಳ್ಳಟ್ಟಿ, ಬಾಗೇವಾಡಿ, ಕಪ್ಪತ್ತುಗುಡ್ಡ, ಬಿದರಹಳ್ಳಿ ಸೇರಿದಂತೆ ಇತರೆ ಕಡೆಗಳಿಗೆ ಪ್ರಯಾಣಿಕರು ಹೋಗಲು ಆಸರೆಯಾಗಿದ್ದ ನಾಡದೋಣಿ ದುರಸ್ತಿಗೆ ಬಂದಿತ್ತು. ಪರಿಣಾಮ ಪ್ರತಿ ಅಮವಾಸ್ಯೆಯ ದಿನ ಸುಕ್ಷೇತ್ರಗಳಿಗೆ ಭಕ್ತರು ಹೋಗಲು ಸಾಕಷ್ಟು ಹೈರಾಣಾಗಿ ಹೋಗಿದ್ದಾರೆ.


ಕಳೆದೊಂದು ತಿಂಗಳ ಹಿಂದೆ ಉಡುಪಿ ಮೂಲದ ಗುತ್ತಿಗೆದಾರರು ₹14 ಲಕ್ಷಕ್ಕೆ ಟೆಂಡರ್‌ ಪಡೆದಿದ್ದಾರೆ. ನಾಡದೋಣಿ ದುರಸ್ತಿಗೆ ಸಮೀಪದಲ್ಲಿ ವರ್ಕ್‌ಶಾಪ್‌ ಇಲ್ಲದ ಕಾರಣ ಉಡುಪಿ ಜಿಲ್ಲೆಗೆ ನಾಡದೋಣಿಯ ದುರಸ್ತಿಗೆ ತೆಗೆದುಕೊಂಡು ಹೋಗಿದ್ದಾರೆ. ಇನ್ನು ಇಲಾಖೆಯ ಎಂಜಿನಿಯರ್‌ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈಗ ದುರಸ್ತಿ ಕಾರ್ಯ ನಡೆದಿದೆ. ಮುಂದಿನ 15 ರಿಂದ 20 ದಿನದೊಳಗೆ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ನಾಡದೋಣಿ ಸ್ಥಗಿತ, ದುರಸ್ತಿ ಬಗ್ಗೆ ಸರಣಿ ವರದಿ:

ಮಾಗಳ-ಬಿದರಹಳ್ಳಿ ಮಧ್ಯೆ ಸಂಚರಿಸುತ್ತಿದ್ದ ನಾಡದೋಣಿ ಸ್ಥಗಿತ, ದುರಸ್ತಿ ಕುರಿತು ಕನ್ನಡಪ್ರಭ ಪತ್ರಿಕೆಯಲ್ಲಿ ಮಾಗಳದ ನಾಡದೋಣಿಗೆ ರಂಧ್ರ, ಮೂರು ಜಿಲ್ಲೆಗಳ ಸಂಪರ್ಕ ಕಡಿತ, ನಾಡದೋಣಿ ದುರಸ್ತಿಗೆ ಡಿಸಿಗೆ ಪತ್ರ ಬರೆದ ತಹಸೀಲ್ದಾರ್‌, ನಾಡದೋಣಿಯ ರಂಧ್ರ ಮುಚ್ಚಲು ಮುಂದಾಗದ ಅಧಿಕಾರಿಗಳು ಹೀಗೆ ಸರಣಿ ವಿಶೇಷ ವರದಿಗಳನ್ನು ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು.

ಒಳನಾಡು ಮತ್ತು ಬಂದರು ಜಲಸಾರಿಗೆ ಇಲಾಖೆ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಅಗತ್ಯ ಅನುದಾನ ನೀಡಿ ದುರಸ್ತಿಗೆ ಟೆಂಡರ್‌ ಕರೆದು ಈಗ ದುರಸ್ತಿ ಕಾಮಗಾರಿ ನಡೆಯುತ್ತಿದೆ.

ಮಾಗಳ-ಬಿದರಹಳ್ಳಿ ಮಧ್ಯೆ ಸಂಚರಿಸುತ್ತಿದ್ದ ನಾಡದೋಣಿ ದುರಸ್ತಿಗಾಗಿ ಈಗಾಗಲೇ ಟೆಂಡರ್‌ ಪ್ರಕ್ರಿಯೆ ಮುಗಿದು ಉಡುಪಿಯಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿದೆ. ಶೀಘ್ರದಲ್ಲೇ ಜನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎನ್ನುತ್ತಾರೆ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯ ಪ್ರಾಂತೀಯ ಕಾರ್ಯ ನಿರ್ವಾಹಣಾಧಿಕಾರಿ ಸವಿತಾ ನಾಯ್ಕ.

ಮಾಗಳ-ಬಿದರಹಳ್ಳಿ ನಾಡದೋಣಿ ಪ್ರತಿನಿತ್ಯ ನೂರಾರು ಜನರಿಗೆ ಆಸರೆಯಾಗಿತ್ತು. ದೋಣಿ ಇಲ್ಲದೇ ಜನ ರೋಸಿ ಹೋಗಿದ್ದಾರೆ. ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸಿ ಜನರಿಗೆ ಅನುಕೂಲ ಮಾಡಲಿ ಎನ್ನುತ್ತಾರೆ ಹೋರಾಟಗಾರ ಬಿ.ಎಲ್‌.ಶ್ರೀಧರ.