ಸಾರಾಂಶ
ಆಂಧ್ರಪ್ರದೇಶದ ಇಂಡಿಯನ್ ಮ್ಯಾಜಿಕ್ ಅಸೋಶಿಯೇಶನ್ (ಐಎಂಎ) ಸಂಸ್ಥೆಯು ಜಾದೂ ಕಲಾವಿದ ಕುದ್ರೋಳಿ ಗಣೇಶ್ ಅವರಿಗೆ ಪ್ರತಿಷ್ಠಿತ ‘ಗೋಲ್ಡನ್ ಮ್ಯಾಜಿಷಿಯನ್’ ರಾಷ್ಟ್ರೀಯ ಜಾದೂ ಪ್ರಶಸ್ತಿ ನೀಡಿ ಗೌರವಿಸಿದೆ. ಕುದ್ರೋಳಿ ಗಣೇಶ್ ಅವರು ಜಾದೂ ರಂಗದಲ್ಲಿ ಮಾಡಿರುವ ಸೃಜನಾತ್ಮಕ ಪ್ರಯೋಗಗಳನ್ನು ಗುರುತಿಸಿ ಜೀವಿತಾವಧಿ ಸಾಧನೆಗಾಗಿ ಈ ಪ್ರಶಸ್ತಿ ನೀಡಲಾಗಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಆಂಧ್ರಪ್ರದೇಶದ ಇಂಡಿಯನ್ ಮ್ಯಾಜಿಕ್ ಅಸೋಶಿಯೇಶನ್ (ಐಎಂಎ) ಸಂಸ್ಥೆಯು ಜಾದೂ ಕಲಾವಿದ ಕುದ್ರೋಳಿ ಗಣೇಶ್ ಅವರಿಗೆ ಪ್ರತಿಷ್ಠಿತ ‘ಗೋಲ್ಡನ್ ಮ್ಯಾಜಿಷಿಯನ್’ ರಾಷ್ಟ್ರೀಯ ಜಾದೂ ಪ್ರಶಸ್ತಿ ನೀಡಿ ಗೌರವಿಸಿದೆ. ಕುದ್ರೋಳಿ ಗಣೇಶ್ ಅವರು ಜಾದೂ ರಂಗದಲ್ಲಿ ಮಾಡಿರುವ ಸೃಜನಾತ್ಮಕ ಪ್ರಯೋಗಗಳನ್ನು ಗುರುತಿಸಿ ಜೀವಿತಾವಧಿ ಸಾಧನೆಗಾಗಿ ಈ ಪ್ರಶಸ್ತಿ ನೀಡಲಾಗಿದೆ.ಆಂಧ್ರಪದೇಶದ ವಿಶಾಖಪಟ್ಟಣದಲ್ಲಿ ರಾಷ್ಟ್ರೀಯ ಜಾದೂ ದಿನಾಚರಣೆ ನೆನಪಿಗಾಗಿ ನಡೆದ ಅದ್ಧೂರಿ ಸಮಾರಂಭದಲ್ಲಿ ವಿಶಾಖಪಟ್ಟಣ ಸಂಸದ ಭರತ್ ಮುತ್ತುಕುಮುಲಿ ಅವರು ಗಣೇಶ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಐಎಂಎ ಅಧ್ಯಕ್ಷ, ಖ್ಯಾತ ಜಾದೂಗಾರ ಬಿ.ಎಸ್.ರೆಡ್ಡಿ ಇದ್ದರು.
ಇಂಡಿಯನ್ ಮ್ಯಾಜಿಕ್ ಅಸೋಸಿಯೇಶನ್ ಸಂಸ್ಥೆಯು ತನ್ನ ದಶಮಾನೋತ್ಸದ ಅಂಗವಾಗಿ ಭಾರತದ ಅಗ್ರಗಣ್ಯ ಜಾದೂಗಾರ ಪಿ.ಸಿ.ಸೊರ್ಕಾರ್ ಜೂನಿಯರ್ ಸೇರಿ ದೇಶ-ವಿದೇಶದ ಹತ್ತು ಜಾದೂ ಸಾಧಕರಿಗೆ ಪ್ರಶಸ್ತಿ ನೀಡಿದೆ.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕುದ್ರೋಳಿ ಗಣೇಶ್, ಬದಲಾಗುತ್ತಿರುವ ಅಭಿರುಚಿಗೆ ಹೊಂದುವಂತೆ ಪ್ರದರ್ಶನದಲ್ಲಿ ಹೊಸತನ ಜೋಡಿಸಿಕೊಳ್ಳೋಣ ಎಂದು ಜಾದೂಗಾರರಿಗೆ ಕರೆ ನೀಡಿದರು. ಜಾದೂ ಕಲೆಗೆ ಸಾಂಸ್ಥಿಕ ರೂಪ ದೊರಕಬೇಕಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕಾಗಿದೆ. ಇದರ ಮುಂದಾಳತ್ವ ಹಿರಿಯ ಜಾದೂಗಾರ ಪಿ.ಸಿ. ಸೊರ್ಕಾರ್ ವಹಿಸಬೇಕು ಎಂದು ವಿನಂತಿಸಿದರು.
ಕುದ್ರೋಳಿ ಗಣೇಶ್ 30ಕ್ಕೂ ಅಧಿಕ ವರ್ಷಗಳಿಂದ ಜಾದೂರಂಗದಲ್ಲಿದ್ದು ದೇಶದಾದ್ಯಂತ ಹಾಗೂ ವಿದೇಶದ 15 ರಾಷ್ಟ್ರಗಳಲ್ಲಿ 2,300ಕ್ಕೂ ಹೆಚ್ಚು ಜಾದೂ ಪ್ರದರ್ಶನ ನೀಡಿದ್ದಾರೆ. ವಿವಿಧ ಜಾದೂ ಸ್ಪರ್ಧೆಗಳಲ್ಲಿ ಭಾಗವಹಿಸಿ 11 ರಾಷ್ಟ್ರೀಯ ಜಾದೂ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.