ಸಾರಾಂಶ
ಕನ್ನಡಪ್ರಭ ವಾರ್ತೆ ಕಲಾದಗಿ
ಇಲ್ಲಿನ ಹರಣಶಿಕಾರಿ (ಪಾರ್ಥಿ ಸಮಾಜ) ದಂಡೀನ ದುರ್ಗಾದೇವಿ ಜಾತ್ರಾಮಹೋತ್ಸವ ಶ್ರದ್ಧಾಭಕ್ತಿಯಿಂದ ಸಡಗರ ಸಂಭ್ರಮದಿಂದ ವಿಜೃಂಭಣೆಯಿಂದ ಮಂಗಳವಾರ ನಡೆಯಿತು.ಜಾತ್ರೆಗೆ ಸುತ್ತಮುತ್ತಲಿನ ಗ್ರಾಮಗಳಿಂದ, ಜಿಲ್ಲೆಯ ಬೇರೆ ಬೇರೆ ಊರುಗಳಿಂದ ಹಾಗೂ ನೆರೆಯ ರಾಜ್ಯ ಮಹಾರಾಷ್ಟ್ರದ ಸೋಲ್ಲಾಪುರ, ಕೊಲ್ಲಾಪುರ, ಇಚಲಕರಂಜಿ, ರಾಯಬಾಗ, ಜತ್ತನಿಂದ ಭಕ್ತರು ಆಗಮಿಸಿ ಭಕ್ತಿ ಸಮರ್ಪಿಸಿದರು. ಹರಣಶಿಕಾರಿ ಕಾಲನಿಂದ ಪ್ರಾರಂಭಗೊಂಡ ಶ್ರೀದೇವಿ ಪಲ್ಲಕ್ಕಿ ಮಹೋತ್ಸವದ ಮೆರವಣಿಗೆ ಹಣ್ಣು ಬೆಳೆಗಾರರ ಶಾಲೆ, ಕೋಬ್ರಿಕ್ರಾಸ್, ಗಡ್ಡಿಓಣಿ, ಹೊಸೂರ್ ಚೌಕ್ ಗ್ರಾಮದೇವತೆ ದ್ಯಾಮವ್ವದೇವಿಗೆ ಪೂಜೆ ಸಲ್ಲಿಸಿ, ಸರ್ಕಾರಿ ಹೆಣ್ಣು ಮಕ್ಕಳ ಶಾಲೆ, ಅಂಬೇಡ್ಕರ್ ಸರ್ಕಲ್, ದುರ್ಗಾದೇವಿ ದೇವಸ್ಥಾನದವರೆಗೆ ಮೆರವಣಿಗೆ ನಡೆಯಿತು. ಉತ್ಸವದಲ್ಲಿ ಮಾರ್ಗದುದ್ದಕ್ಕೂ ವಾದ್ಯಮೇಲ, ಡೊಳ್ಳು ಮೇಳಗಳು ಮೆರಗು ತಂದವು. ಭಕ್ತರು ೫ ಕ್ವಿಂಟಾಲ್‌ಗೂ ಅಧಿಕ ಭಂಡಾರ ಬಳಿಸಿದರು. ಪರಸ್ಪರ ಎರಚಿ ಭಂಡಾರದಲ್ಲಿ ಮಿಂದೆದ್ದು ಕುಣಿತು ಕುಪ್ಪಳಿಸಿದರು. ನಾಗಪ್ಪ ರಾಮಣ್ಣ ಕಾಳೆ(ಪೂಜಾರಿ) ದೇವಿಗೆ ಪೂಜೆ ಸಲ್ಲಿಸಿ ೨ ತೆಂಗಿನಕಾಯಿ ತಲೆಯಿಂದ ಒಡೆದರು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ದೇವಿಯ ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ದೇವಿ ಪೂಜಾರಿ ನೇಮಕ: ದಂಡೀನ ದುರ್ಗಾದೇವಿ ಪೂಜಾರಿ ದಲ್ಲಪ್ಪ ಈ ಕಾಳೆ(ಪೂಜಾರಿ) ಕಳೆದ ಆರು ತಿಂಗಳ ಹಿಂದೆ ಮೃತರಾದ ಕಾರಣ ಇವರ ಮಗ ಚಂದ್ರಪ್ಪ ಕಾಳೆಯವರನ್ನು ಸಮಾಜದ ಪ್ರಮುಖರು ದೇವಿಯ ಪೂಜಾರಿಯನ್ನಾಗಿ ನೇಮಕ ಮಾಡಿದರು. ಚಂದ್ರ ಕಾಳೆ(ಪೂಜಾರಿ) ದೇವಾಲಯದ ಮುಂದೆ ದೇವಿಗೆ ಪೂಜೆ ಸಲ್ಲಿಸಿ ತಲೆಯಿಂದ ೨ ತೆಂಗಿನಕಾಯಿ ಒಡೆದುಕೊಂಡರು.