ಬಸವಣ್ಣ ಶರಣ ಸಂಕುಲ ಸೃಷ್ಠಿಸಿದ ಭವ್ಯ ಬೆಳಕು

| Published : May 13 2024, 12:00 AM IST

ಬಸವಣ್ಣ ಶರಣ ಸಂಕುಲ ಸೃಷ್ಠಿಸಿದ ಭವ್ಯ ಬೆಳಕು
Share this Article
  • FB
  • TW
  • Linkdin
  • Email

ಸಾರಾಂಶ

ಜೀವನದ ಮರ್ಮ ಅರಿಯಬೇಕೆಂಬ ಆಶಯದಿಂದ ವಚನ ಸಾಹಿತ್ಯವನ್ನು ಬಸವಣ್ಣನವರು ಈ ಸಾರಸ್ವತ ಲೋಕಕ್ಕೆ ನೀಡಿದವರು

ಗದಗ: ಬಸವಣ್ಣನವರು ಸಮಾನತೆಯ ಸಮಾಜ ನಿರ್ಮಿಸುವಲ್ಲಿ ಹೋರಾಟ ಮಾಡಿ ಶರಣ ಸಂಕುಲ ಸೃಷ್ಠಿಸಿದ ಭಾರತದ ಭವ್ಯ ಬೆಳಕು. ಅಸಮಾನತೆ ಅಸ್ಪೃಶತೆ ತೊಲಗಿಸಲು ತಮ್ಮ ಜೀವನ ಸಮರ್ಪಿಸಿ , ಅನುಭವ ಮಂಟಪದ ಮೂಲಕ ಲೋಕಸಭೆ ಪರಿಕಲ್ಪನೆ ನೀಡಿದ ಮಹಾತ್ಮ, ಇಷ್ಟಲಿಂಗದ ಮೂಲಕ ದಿವ್ಯತೆ ಮೆರೆದ ಧ್ಯಾನ ಯೋಗಿ ಎಂದು ಮಕ್ಕಳ ಸಾಹಿತಿ ಡಾ. ರಾಜೇಂದ್ರ ಗಡಾದ ಹೇಳಿದರು.

ಬೆಟಗೇರಿಯ ಹೆಲ್ಥ್‌ಕ್ಯಾಂಪ್‌ನ ಕಿತ್ತೂರ ಚೆನ್ನಮ್ಮ ಗಾರ್ಡನ್ ಯೋಗ ಶಿಬಿರದಲ್ಲಿ ಶ್ರೀಶಿವಶರಣಮ್ಮನವರ ಧ್ಯಾನ ಯೋಗಾಶ್ರಮ ಜಲ್ಲಿಗೇರಿ, ನವರಸ ಕಲಾ ಸಂಘ ಬೆಟಗೇರಿ, ನಿರ್ಮಲ ವಿವಿಧೋದ್ದೇಶಗಳ ಸೇವಾ ಸಂಸ್ಥೆ ಮುಂಡರಗಿ, ಚೇತಕ ವಿವಿಧೋದ್ದೇಶಗಳ ಸೇವಾ ಸಂಸ್ಥೆ, ನಯನತಾರ ಕಲಾ ಸಂಘ, ಗಣೇಶ ವಿವಿಧೋದ್ದೇಶಗಳ ಸೇವಾ ಸಂಸ್ಥೆ ಬೆಟಗೇರಿ ಸಹಯೋಗದಲ್ಲಿ ನಡೆದ ಬಸವ ಜಯಂತಿ ನಿಮಿತ್ತ ಬಸವ ಭೃಂಗ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರಳ ಭಾಷೆಯ ಮೂಲಕ ಸಾಮಾನ್ಯರಿಗೂ ಅರ್ಥವಾಗಬೇಕು, ಜೀವನದ ಮರ್ಮ ಅರಿಯಬೇಕೆಂಬ ಆಶಯದಿಂದ ವಚನ ಸಾಹಿತ್ಯವನ್ನು ಬಸವಣ್ಣನವರು ಈ ಸಾರಸ್ವತ ಲೋಕಕ್ಕೆ ನೀಡಿದವರು. ಭಾರತದ ಭವ್ಯ ನಾಯಕನಾಗಿ ಸಮಾನತೆಯ ಹರಿಕಾರನಾಗಿ ಮಹಾ ಚೇತನ ಶಕ್ತಿಯಾಗಿ ಬೆಳೆದವರು. ಕಲ್ಯಾಣ ಕ್ರಾಂತಿಯಿಂದ ಸಾಮಾಜಿಕ ಸಮಾನತೆಯ ಸಾರಿದವರು ಎಂದರು.

ಶಿಕ್ಷಕ ಮಂಜುನಾಥ ಹುಯಿಲಗೋಳ ಉಪನ್ಯಾಸ ನೀಡಿದರು. ನಿರ್ಮಲಾ ತರವಾಡೆ, ಸುನಿತಾ ಕುಬೇರಸಿಂಗ್ ದೊಡ್ಡಮನಿ, ರಾಜು ಧೂಳ, ಬಸವರಾಜ ಗೂಳರಡ್ಡಿ ಸೇರಿದಂತೆ ಇತರರು ಇದ್ದರು. ಪ್ರೊ. ಬಸವರಾಜ ನೆಲಜೇರಿ ನಿರೂಪಿಸಿ, ವಂದಿಸಿದರು.