ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಕೊಡಿಯಾಲ್ ತೇರು ಖ್ಯಾತಿಯ ಇತಿಹಾಸ ಪ್ರಸಿದ್ಧ ‘ಮಂಗಳೂರು ರಥೋತ್ಸವ’ ನೆರೆದಿದ್ದ ಸಹಸ್ರಾರು ಭಜಕರ ಸಮ್ಮುಖದಲ್ಲಿ ಶುಕ್ರವಾರ ವಿಜೃಂಭಣೆಯಿಂದ ಜರಗಿತು.ಬ್ರಹ್ಮರಥೋತ್ಸವ ಪ್ರಯುಕ್ತ ಬೆಳಗ್ಗೆ ಮಹಾಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ದೇವರಿಗೆ ಶತಕಲಶಾಭಿಷೇಕ, ಗಂಗಾಭಿಷೇಕ, ಪುಳಕಾಭಿಷೇಕ ಶ್ರೀ ಸಂಸ್ಥಾನ ಕಾಶೀಮಠಾಧೀಶ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ನೆರವೇರಿತು . ಯಜ್ಞಮಂಟಪದಲ್ಲಿ ಮಹಾಯಜ್ಞ ಮಹಾ ಪೂರ್ಣಾಹುತಿಯ ಬಳಿಕ ಶ್ರೀ ದೇವರ ಬಿಂಬಗಳನ್ನು ಸ್ವರ್ಣ ಪಲ್ಲಕಿಯಲ್ಲಿ ತೇರಿನತ್ತ ತರಲಾಯಿತು.
ಬ್ರಹ್ಮರಥದಲ್ಲಿ ರಥಾರೂಢರಾಗಿ ಮಂಗಳೂರು ರಥೋತ್ಸವ ನೆರವೇರಿತು. ದೇಶ ವಿದೇಶಗಳಿಂದ ಗೌಡ ಸಾರಸ್ವತ ಸಮಾಜದ ಸಹಸ್ರಾರು ಪಾಲ್ಗೊಂಡು ಪುನೀತರಾದರು.ಸ್ವರ್ಣ ಪಲ್ಲಕ್ಕಿಯ ರಥ ಪ್ರದಕ್ಷಿಣೆಯ ಬಳಿಕ ಮುಸ್ಸಂಜೆ 6.14ರ ಹೊತ್ತಿಗೆ ರಾಜವೈಭವದ ಅಲಂಕಾರದೊಂದಿಗೆ ಶ್ರೀ ಶ್ರೀನಿವಾಸ ದೇವರ ಸಹಿತ ಪಟ್ಟದ ಶ್ರೀವೀರ ವೆಂಕಟೇಶ ದೇವರ ರಥಾರೋಹಣದ ಸಂಭ್ರಮವನ್ನು ರಥಬೀದಿಯಲ್ಲಿ ನೆರೆದಿದ್ದ ಸಾವಿರಾರು ಭಜಕರು ಭಕ್ತಿ ಭಾವಪರವಶತೆಯಿಂದ ಕಣ್ತುಂಬಿಕೊಂಡರು.
ಘಂಟಾನಾದ, ಮಂಗಳವಾದ್ಯ ಮೇಳ, ಜಯ ಘೋಷಗಳ ಹಿನ್ನೆಲೆಯಲ್ಲಿ ರಥದಲ್ಲಿ ಶ್ರೀ ಕಾಶೀ ಮಠಾಧೀಶರು ಅಲಂಕೃತ ದೇವರಿಗೆ ಸಂಜೆ 6.33ರ ವೇಳೆಗೆ ಮಹಾಮಂಗಳಾರತಿಯೊಂದಿಗೆ ರಾಜೋಪಚಾರ ಪೂಜೆ ನೆರವೇರಿಸಿ ಶ್ರೀ ದೇವಳದ ಪ್ರಮುಖರಿಗೆ ಪ್ರಸಾದ ವಿತರಿಸಿದರು.ಸಹಸ್ರಾರು ಭಕ್ತರು ಪೇಟೆ ಸವಾರಿಗೆ ಬಂದ ದೇವರಿಗೆ ಹಣ್ಣುಕಾಯಿ ಸಹಿತ ಸೇವೆ ಕಾಣಿಕೆ ಸಮರ್ಪಿಸಿ ದರ್ಶನ ಪಡೆದರು. ಶ್ರೀ ದೇವಳದ ರಾಜಾಂಗಣ ಸೇರಿದಂತೆ ನಿಗದಿತ ಸ್ಥಳದಲ್ಲಿ ಅನ್ನಪ್ರಸಾದ ವಿತರಣೆ, ರಾತ್ರಿ ಬ್ರಹ್ಮರಥೋತ್ಸವ ಜರುಗಿತು. ಶನಿವಾರ ಅವಭೃತೋತ್ಸವ ನೆರವೇರಿತು. ಈ ಎರಡು ದಿನಗಳಲ್ಲಿ ಮಾತ್ರ ತಮ್ಮ ಆರಾಧ್ಯ ಮೂರ್ತಿ ವೀರ ವೆಂಕಟೇಶನನ್ನು ಪೇಟೆ ಉತ್ಸವದಲ್ಲಿ ಕಾಣುವ ಈ ಪರ್ವ ಕಾಲವಾಗಿದೆ.
ಗುರುವಾರ ಸಣ್ಣರಥೋತ್ಸವ ನಡೆದಿದ್ದು ಶ್ರೀ ದೇವರ ಮೃಗಬೇಟೆ ಉತ್ಸವದಲ್ಲಿ ಮೊದಲ ಬಾರಿಗೆ ಸ್ವರ್ಣ ಲಾಲ್ಕಿ ಸಮರ್ಪಣೆ, ದೇವರಿಗೆ ಸ್ವರ್ಣದ ಬಿಲ್ಲು ಬಾಣ, ವೀರ ವಿಠ್ಠಲ ದೇವರಿಗೆ ನೂತನ ಸ್ವರ್ಣ ಮಾಲೆ ಸೇವಾರೂಪದಲ್ಲಿ ಸಮರ್ಪಿಸಿರುವುದು ವಿಶೇಷತೆಯಾಗಿತ್ತು.