ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನೇತೃತ್ವದಲ್ಲಿ ನವದಿನಗಳ ಪರ್ಯಂತ ನಡೆದ ‘ಮಂಗಳೂರು ದಸರಾ’ ಖ್ಯಾತಿಯ ನವರಾತ್ರಿ ಮಹೋತ್ಸವದ ವೈಭವೋಪೇತ ಶೋಭಾಯಾತ್ರೆ ಭಾನುವಾರ ಸಂಪನ್ನಗೊಂಡಿತು. ಲಕ್ಷಾಂತರ ಭಕ್ತ ಜನರು, ದೇಶ- ವಿದೇಶಗಳ ಪ್ರವಾಸಿಗರು ಈ ಅಪೂರ್ವ, ಮನಮೋಹಕ ಕ್ಷಣಗಳಿಗೆ ಸಾಕ್ಷಿಯಾದರು. ಮಂಗಳೂರು ನಗರವು ಶೋಭಾಯಾತ್ರೆಯುದ್ದಕ್ಕೂ ಬೆಳಕಿನ ನಗರದಂತೆ ಕಂಗೊಳಿಸಿತು.ಕುದ್ರೋಳಿ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲ್ಪಟ್ಟು ನವದಿನಗಳ ಕಾಲ ಪೂಜಿಸಲ್ಪಟ್ಟ ಗಣಪತಿ, ನಾರಾಯಣ ಗುರುಗಳು, ಶಾರದಾ ಮಾತೆ ಸೇರಿ ನವದುರ್ಗೆಯರ ವಿಸರ್ಜನಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ದೇವಾಲಯದ ನವೀಕರಣ ರೂವಾರಿ, ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಭಾನುವಾರ ಸಂಜೆ ಕ್ಷೇತ್ರದಲ್ಲಿ ಶೋಭಾಯಾತ್ರೆಗೆ ಚಾಲನೆ ನೀಡಿದರು.ಸಡಗರ- ಭಕ್ತಿ ಭಾವ ಮೈದಾಳಿದ ಮೆರವಣಿಗೆ:ಶಾಂತ- ಮಂದಸ್ಮಿತ ನವದುರ್ಗೆಯರನ್ನು ಹೊತ್ತ ಅಲಂಕೃತ ವಾಹನಗಳು ರಾಜಬೀದಿಯಲ್ಲಿ ಸಾಗುತ್ತಿದ್ದರೆ ರಸ್ತೆಯ ಇಕ್ಕೆಲಗಳಲ್ಲಿ ಜನರು ಭಕ್ತಿಭಾವದಿಂದ ನಮಿಸಿದರು. ಅಲ್ಲಲ್ಲಿ ದೇವರಿಗೆ ಪೂಜೆಗಳು ನೆರವೇರಿದವು. ಭಕ್ತ ಜನರು ದೇವರ ಪ್ರಸಾದ ಸ್ವೀಕರಿಸಿ ಪುನೀತರಾದರು. ನಗರದ ಮುಖ್ಯ ಬೀದಿಗಳಲ್ಲಿ ಸುಮಾರು 9 ಕಿ.ಮೀ. ಸಂಚರಿಸಿದ ಶೋಭಾಯಾತ್ರೆಯು ಸೋಮವಾರ ಮುಂಜಾನೆ ಮರಳಿ ಕುದ್ರೋಳಿ ಕ್ಷೇತ್ರಕ್ಕೆ ಆಗಮಿಸಿ, ದೇವಳದ ಪುಷ್ಕರಿಣಿಯಲ್ಲಿ ವಿಸರ್ಜಿಸುವುದರೊಂದಿಗೆ ಮಂಗಳೂರು ದಸರಾ ಸಂಪನ್ನಗೊಳ್ಳಲಿದೆ.
ಮೆರುಗು ಹೆಚ್ಚಿಸಿದ ಕಲಾ ತಂಡಗಳು: ಶೋಭಾಯಾತ್ರೆಯ ಮುಂಚೂಣಿಯಲ್ಲಿ ಗಣಪತಿ ವಿಗ್ರಹ ಸಾಗಿದರೆ, ಬಳಿಕ ನಾರಾಯಣ ಗುರುಗಳ ಮೂರ್ತಿ, ಬಳಿಕ ಆದಿಶಕ್ತಿಯಾದಿಯಾಗಿ ನವದುರ್ಗೆಯರು- ಶಾರದಾ ಮಾತೆಯ ಮೂರ್ತಿ ಹೊತ್ತ ವಾಹನಗಳು, ಬಳಿಕ ನಗಾರಿ, ಗೊಂಡಡಕ್ಕೆ, ಕಹಳೆ, ಡೊಳ್ಳು ಕುಣಿತ, ಕಂಗೀಲು, ತಮಟೆ, ವೀರಗಾಸೆ, ಹಗಲು ವೇಷ, ಕುರುಬರ ಡೊಳ್ಳು ತಂಡ ಸೇರಿದಂತೆ ನಾಡಿನೆಲ್ಲೆಡೆಗಳ ಕಲಾ ತಂಡಗಳು ದಸರಾ ಮೆರುಗನ್ನು ಹೆಚ್ಚಿಸಿದವು.ವೈಭವ ಹೆಚ್ಚಿಸಿದ ಸ್ತಬ್ಧಚಿತ್ರಗಳು: ಮಂಗಳೂರು ದಸರಾ ವೈಭವವನ್ನು ರಮಣೀಯವಾಗಿಸಿದ್ದು ವೈವಿಧ್ಯಮಯ ಟ್ಯಾಬ್ಲೊಗಳು ಹಾಗೂ ಹುಲಿವೇಷ ಅಬ್ಬರ. ಶಾರದಾ ಮಾತೆಯ ಮಂಟಪದ ಬಳಿಕ ಶೋಭಾಯಾತ್ರೆಯ ಮೊದಲ ಮರ್ಯಾದೆಯ ಮಂಜನ್‌ಬೈಲ್ ತಂಡದ ಹುಲಿವೇಷ, 2ನೇ ಮರ್ಯಾದೆಯ ಕಾಳಿಚರಣ್ ತಂಡದ ಹುಲಿವೇಷ ಸಹಿತ ಸ್ತಬ್ಧಚಿತ್ರ, 3ನೇ ಮರ್ಯಾದೆಯ ಬರ್ಕೆ ಫ್ರೆಂಡ್ಸ್ ತಂಡದ ಹುಲಿವೇಷ ಮೈನವಿರೇಳಿಸುವ ಪ್ರದರ್ಶನ ನೀಡಿದವು. ಬಳಿಕ ಶಿವಫ್ರೆಂಡ್ಸ್, ಗ್ರೀನ್ ಪಾರ್ಕ್ ಜ್ಯೂನಿಯರ್ ಬಾಯ್ಸ್, ಬಲ್ಲಾಳ್‌ಬಾಗ್ ಫ್ರೆಂಡ್ಸ್, ಸತ್ಯ ಸಾರಮನಿ, ಯುವ ಸಂಗಮ್ ಕುದ್ರೋಳಿ, ಬಿರುವೆರ್ ಕುಡ್ಲ, ಕುಡ್ಲ ಬ್ರದರ್ಸ್ ಪಾಂಡೇಶ್ವರ, ಪಾದುವಾ ಫ್ರೆಂಡ್ಸ್ ಸೇರಿದಂತೆ ವಿವಿಧ ತಂಡಗಳು, ಸಂಘ ಸಂಸ್ಥೆಗಳ ಸ್ತಬ್ಧಚಿತ್ರಗಳು ಜನರ ಕುತೂಹಲ ಹೆಚ್ಚಿಸಿ ಎಲ್ಲೆಡೆಯೂ ಸಡಗರವನ್ನು ತುಂಬಿದವು. 20ಕ್ಕೂ ಅಧಿಕ ಹುಲಿವೇಷ ತಂಡಗಳು ಪ್ರದರ್ಶನ ನೀಡಿದವು.ದಸರಾ ಹಿನ್ನೆಲೆಯಲ್ಲಿ ಕುದ್ರೋಳಿ ಕ್ಷೇತ್ರ ಸಹಿತ ಶೋಭಾಯಾತ್ರೆ ಸಾಗುವ ರಸ್ತೆಯುದ್ದಕ್ಕೂ ವಿದ್ಯುದ್ದೀಪಾಲಂಕಾರ ಮಾಡಿ ಹೊಸ ಲೋಕ ಮೈದಾಳಿದಂತಿತ್ತು. ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಎಚ್.ಎಸ್. ಸಾಯಿರಾಮ್, ಉಪಾಧ್ಯಕ್ಷೆ ಉರ್ಮಿಳಾ ರಮೇಶ್, ಖಜಾಂಚಿ ಪದ್ಮರಾಜ್ ಆರ್., ಶಾಸಕ ವೇದವ್ಯಾಸ ಕಾಮತ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ದೇವಸ್ಥಾನದ ಕಾರ್ಯದರ್ಶಿ ಮಾಧವ ಸುವರ್ಣ, ಟ್ರಸ್ಟಿಗಳಾದ ರವಿಶಂಕರ್ ಮಿಜಾರು, ಹರಿಕೃಷ್ಣ ಬಂಟ್ವಾಳ್, ಎಂ. ಶೇಖರ್ ಪೂಜಾರಿ, ಜಗದೀಪ್ ಡಿ. ಸುವರ್ಣ, ದೇವಳ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಸಹ ಉಪಾಧ್ಯಕ್ಷೆ ಡಾ. ಅನಸೂಯಾ ಬಿ.ಟಿ. ಸಾಲ್ಯಾನ್, ಉಪಾಧ್ಯಕ್ಷ ಬಿ.ಜಿ. ಸುವರ್ಣ, ದೇವಳ ಅಭಿವೃದ್ಧಿ ಸಮಿತಿ ಸದಸ್ಯರು ಇದ್ದರು.ಮುಂದಿನ ಬಾರಿ ಬಂಗಾರದ ವೀಣೆ: ಪೂಜಾರಿನವದುರ್ಗೆಯರ ವಿಸರ್ಜನೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ, ಶಾರದಾ ದೇವಿಗೆ ಈ ಬಾರಿ ಪುತ್ರ ಸಂತೋಷ್ ಸಹಾಯದಿಂದ ಬೆಳ್ಳಿಯ ವೀಣೆ ಮಾಡಿಸಿದ್ದೇನೆ. ದೇವರು ಮನಸ್ಸು ಮಾಡಿದರೆ ಮುಂದಿನ ಬಾರಿ ಪುತ್ರ ಸಂತೋಷ್ ಕೈಯಿಂದ ಬಂಗಾರದ ವೀಣೆ ಮಾಡಿಸುತ್ತೇನೆ ಎಂದು ಹೇಳಿದರು.