ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ:144 ವರ್ಷಗಳ ಬಳಿಕ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಅಪಾರ ಸಂಖ್ಯೆಯ ಭಕ್ತರು ತೆರಳುತ್ತಿದ್ದು ರೈಲುಗಳಲ್ಲಿ ಕುಳಿತುಕೊಂಡು ಹೋಗಲು ಜಾಗವಿಲ್ಲದಂತೆ ಆಗಿದೆ. ಆದರೂ ಸಹ ಭಕ್ತರ ಉತ್ಸಾಹ ಮಾತ್ರ ಕಡಿಮೆಯಾಗಿಲ್ಲ.
ಮಹಾಕುಂಭಮೇಳವನ್ನೇ ಬಂಡವಾಳ ಮಾಡಿಕೊಂಡಿರುವ ವಿಮಾನಯಾನ ಸಂಸ್ಥೆಗಳು ತಮ್ಮಿಷ್ಟಕ್ಕೆ ತಕ್ಕಂತೆ ಬೆಲೆ ಏರಿಸಿವೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ದರ ಕಡಿತಕ್ಕೆ ಮನವಿ ಮಾಡಿದರೂ ಅದು ₹ 25000 ಒಳಗೆ ಇಳಿದಿಲ್ಲ. ವಿಮಾನದಲ್ಲಿ ಹೋಗಿ ಬಂದರಾಯ್ತು ಎಂದುಕೊಂಡವರು ರೈಲಿನತ್ತ ಮುಖ ಮಾಡಿದ್ದಾರೆ.ಹೀಗಾಗಿ ಎಷ್ಟೇ ರೈಲುಗಳನ್ನು ಓಡಿಸಿದರೂ ಪ್ರಯಾಣಿಕರಿಗೆ ಸಾಲುತ್ತಿಲ್ಲ. ಸಾಮಾನ್ಯ ಬೋಗಿಗಳಲ್ಲಿ ಕಾಲಿಡಲು ಜಾಗವಿಲ್ಲದಿದ್ದರೂ ಅದರಲ್ಲಿಯೇ ಹೊಂದಾಣಿಕೆ ಮಾಡಿಕೊಂಡು ತೆರಳುತ್ತಿದ್ದಾರೆ. ಇನ್ನೂ ಸ್ಲೀಪರ್ ನಾನ್ ಎಸಿ, ಸ್ಲೀಪರ್ ಕೋಚ್‌ಗಳಿಗೂ ನುಗ್ಗುವ ಪ್ರಯಾಣಿಕರು ಸಹ ಪ್ರಯಾಣಿಕರೊಂದಿಗೆ ಮನವಿ ಮಾಡಿಕೊಂಡು ಸೀಟು ಗಿಟ್ಟಿಸಿಕೊಂಡು ತೆರಳುತ್ತಿದ್ದಾರೆ.
ಎಸಿ ಕೋಚ್‌ಗಳಿಗೂ ನುಗ್ತಾರೆ:ಸಾಮಾನ್ಯ ಬೋಗಿಗಳಿಗೆ ನುಗ್ಗಿದಂತೆ ಎಸಿ ಕೋಚ್‌ಗಳಿಗೆ ಟಿಕೆಟ್ ಇಲ್ಲದೆ ಜನರು ನುಗ್ಗಲು ಬರುವುದಿಲ್ಲ. ಆದರೆ, ಸಾಮಾನ್ಯ (ಕಾಯ್ದಿರಿಸದ) ಹಾಗೂ ಸ್ಲೀಪರ್ ಕೋಚ್ ಫುಲ್ ಆಗುವುದರಿಂದ ಎಸಿ ಟೈರ್-3 ಬೋಗಿಗಳಲ್ಲೂ ಜನತೆ ನುಗ್ಗುತ್ತಿದ್ದಾರೆ. ಹಾಗಂತ ಇಲ್ಲಿ ಸೀಟ್‌ಗಳಲ್ಲಿ ಹೋಗಿ ಕುಳಿತುಕೊಳ್ಳದೆ ಟಾಯ್ಲೆಟ್ ಅಕ್ಕಪಕ್ಕಗಳಲ್ಲಿ ಕುಳಿತು ಪ್ರಯಾಣಿಸುತ್ತಿದ್ದಾರೆ.
ಟಿಟಿಗೆ ಸುಸ್ತು:ಕೆಲ ಪ್ರಯಾಣಿಕರು ಎಸಿ ಕೋಚ್‌ಗಳಲ್ಲೂ ಪ್ರಯಾಣಿಕರು ನುಗ್ಗುವುದನ್ನು ಟಿಟಿ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ. ಮುಂದಿನ ನಿಲ್ದಾಣ ಬಂದ ತಕ್ಷಣ ಇಳಿದು ಸಾಮಾನ್ಯ ಬೋಗಿ ಹತ್ತುತ್ತೇವೆ ಎಂದು ಟಿಟಿಗಳಿಗೆ ಸಮಾಧಾನ ಮಾಡುವವರು ಇರುತ್ತಾರೆ.
ವಿಶೇಷ ರೈಲು:ಪ್ರಯಾಗ್‌ರಾಜ್, ವಾರಣಾಸಿ ಸೇರಿದಂತೆ ಅಲ್ಲಿನ ಸುತ್ತಲಿನ ಪ್ರದೇಶಕ್ಕೆ ನಿತ್ಯ ತೆರಳುವ ರೈಲುಗಳಲ್ಲದೆ ನೈಋತ್ಯ ರೈಲ್ವೆ 17ಕ್ಕೂ ಅಧಿಕ ರೈಲು ಓಡಿಸಿದೆ. ಎಲ್ಲ ರೈಲುಗಳು ಫುಲ್ ಆಗುತ್ತಿವೆ. ಹುಬ್ಬಳ್ಳಿ, ಬೆಂಗಳೂರು, ಮೈಸೂರು ವಿಭಾಗಗಳಿಂದ ಹೆಚ್ಚುವರಿ ರೈಲು ಬಿಡಲಾಗಿದೆ. ಮುಂಗಡ ಟಿಕೆಟ್ ಮಾಡಿಸಿದವರ ಸಂಖ್ಯೆ 20 ಸಾವಿರಕ್ಕೂ ಅಧಿಕ. ಇದು ಬರೀ ಮುಂಗಡ ಟಿಕೆಟ್ ಮಾಡಿಸಿದವರ ಸಂಖ್ಯೆ. ಟಿಕೆಟ್ ಮಾಡಿಸದೇ ಹೋದವರ ಸಂಖ್ಯೆ ಇದಕ್ಕಿಂತ ದುಪ್ಪಟ್ಟು ಇದೆ ಎಂದು ಇಲಾಖೆಯ ಮೂಲಗಳು ತಿಳಿಸುತ್ತವೆ.
ಇನ್ನಷ್ಟು ರೈಲು ಬಿಡಿ:ಇದೀಗ ನೈಋತ್ಯ ರೈಲ್ವೆ ವಲಯ ಸಾಕಷ್ಟು ರೈಲುಗಳನ್ನು ಪ್ರಯಾಗರಾಜ್‌ಕ್ಕೆ ಓಡಿಸಿದರೂ ಸಾಲುತ್ತಿಲ್ಲ. ಹೀಗಾಗಿ ಮಹಾಕುಂಭ ಮೇಳ ಮುಗಿಯುವ ವರೆಗೂ ಇನ್ನಷ್ಟು ರೈಲು ಓಡಿಸಬೇಕು. ಸದ್ಯದ ಪರಿಸ್ಥಿತಿಯಲ್ಲಿ ಪ್ರಯಾಣಿಕರಿಗೆ ಕೈಗೆಟುಕುವ ಬೆಲೆಯಲ್ಲಿ ಮಹಾಕುಂಭಮೇಳಕ್ಕೆ ಹೋಗಲು ಸುಲಭ ಹಾಗೂ ಏಕೈಕ ಮಾರ್ಗ ರೈಲುಗಳು. ಆದಕಾರಣ ಎಷ್ಟು ಸಾಧ್ಯವೋ ಅಷ್ಟು ರೈಲು ಓಡಿಸಬೇಕು ಎಂಬುದು ನಾಗರಿಕರ ಒತ್ತಾಸೆ.ಮಹಾಕುಂಭ ಮೇಳಕ್ಕೆ ಸಾಕಷ್ಟು ವಿಶೇಷ ರೈಲುಗಳನ್ನು ನೈಋತ್ಯ ರೈಲ್ವೆ ವಲಯ ಓಡಿಸಿದರೂ ರಶ್ ಆಗುತ್ತಿವೆ. ಹುಬ್ಬಳ್ಳಿ, ಬೆಂಗಳೂರು, ಮೈಸೂರು ವಿಭಾಗಗಳಿಂದಲೂ ರೈಲು ಓಡಿಸಲಾಗುತ್ತಿದೆ ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ಹೇಳಿದರು.ಕಳೆದ ವಾರ ನಾವು ಪ್ರಯಾಗ್‌ರಾಜ್‌ನಿಂದ ಬಂದೇವು. ಎಸಿ ಕೋಚ್‌ಗಳ ಟಾಯ್ಲೆಟ್ ಪಕ್ಕ ಕೂಡ ಜನತೆ ಕುಳಿತ್ತಿದ್ದರು. ಅಲ್ಲಿನ ಪರಿಸ್ಥಿತಿ ನೋಡಿದರೆ ಇದು ಎಸಿ ಕೋಚ್ ಹೀಗೆ ಬರಬಾರದು ಎನ್ನಲು ಕೂಡ ಮನಸು ಬರಲಿಲ್ಲ ಎಂದು ಪ್ರಯಾಣಿಕ ರಮೇಶ ತಿಳಿಸಿದ್ದಾರೆ.