ಮನೆ ಮನಗಳಲ್ಲಿ ಸಂಭ್ರಮದ ವರ ಮಹಾ ಲಕ್ಷ್ಮಿ

| Published : Aug 17 2024, 12:46 AM IST

ಸಾರಾಂಶ

ತಾಲೂಕಿನಾದ್ಯಂತ ಶುಕ್ರವಾರ ವರ ಮಹಾಲಕ್ಷ್ಮಿ ಹಬ್ಬವನ್ನು ಮಹಿಳೆಯರು ಸಂಭ್ರಮದಿಂದ ಆಚರಿಸಿದರು. ಶ್ರಾವಣ ಮಾಸದ 2ನೇ ಶುಕ್ರವಾರ ಆಚರಿಸುವ ಹಬ್ಬ ಇದಾಗಿದ್ದು ಮನೆ ಹಾಗು ದೇವಸ್ಥಾನಗಳಲ್ಲಿ ಇಂದು ವಿಶೇಷ ಪೂಜಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ದೇವಸ್ಥಾನಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು

ತಾಲೂಕಿನಾದ್ಯಂತ ಶುಕ್ರವಾರ ವರ ಮಹಾಲಕ್ಷ್ಮಿ ಹಬ್ಬವನ್ನು ಮಹಿಳೆಯರು ಸಂಭ್ರಮದಿಂದ ಆಚರಿಸಿದರು. ಶ್ರಾವಣ ಮಾಸದ 2ನೇ ಶುಕ್ರವಾರ ಆಚರಿಸುವ ಹಬ್ಬ ಇದಾಗಿದ್ದು ಮನೆ ಹಾಗು ದೇವಸ್ಥಾನಗಳಲ್ಲಿ ಇಂದು ವಿಶೇಷ ಪೂಜಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ದೇವಸ್ಥಾನಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.

ಮಹಿಳೆಯರು ಮನೆಗಳಲ್ಲಿ ಮಹಾಲಕ್ಷ್ಮಿ ದೇವಿಯನ್ನು ಮಂಟಪದಲ್ಲಿ ಪ್ರತಿಷ್ಠಾಪಿಸಿ, ಸೀರೆ ಉಡಿಸಿ, ಕಳಶವಿಟ್ಟು, ವಿವಿಧ ರೀತಿಯ ಹೂವು, ವಸ್ತ್ರ, ಒಡವೆಗಳಿಂದ ಅಲಂಕರಿಸಿ ಹಣ್ಣುಗಳನ್ನು ನೈವೇದ್ಯ ಮಾಡಿ ವಿವಿಧ ಬಗೆಯ ಭಕ್ಷ್ಯಗಳನ್ನು ಸಿದ್ಧಪಡಿಸಿ ದೇವಿಗೆ ನೈವೇದ್ಯ ಮಾಡಿ ಆರುತಿ ಬೆಳಗಿ ವಿಶೇಷ ಪೂಜೆ ಸಲ್ಲಿಸಿದರು.

ಇನ್ನೂ ಕೆಲವೆಡೆ ಮಹಿಳೆಯರಿಗೆ ಅರಿಶಿನಕುಂಕುಮ ನೀಡಿ ಉಡಿ ತುಂಬುವುದು ಕಂಡು ಬಂತು. ವರಮಹಾಲಕ್ಷ್ಮೀ ಹಬ್ಬದಂದು ಪೂಜೆ ಮಾಡಿದವರಿಗೆ ಅಷ್ಟಲಕ್ಷ್ಮಿಯರ ಸಿದ್ಧಿ ದೊರೆತು, ಕುಟುಂಬದಲ್ಲಿ ಸುಖ, ಸಮೃದ್ಧಿ, ನೆಮ್ಮದಿ ನೆಲೆಸುತ್ತದೆ ಎಂಬ ಭಾವನೆ ಇದೆ. ಆದ್ದರಿಂದ ಮನೆಗಳ ಮುಂಭಾಗ ಮಹಿಳೆಯರು ಆಕರ್ಷಕ ಬಣ್ಣ ಬಣ್ಣದ ರಂಗೋಲಿ ಬಿಡಿಸಿ, ಹಬ್ಬಕ್ಕೆ ಕಳೆ ಕಟ್ಟಿದರು.

ಹಬ್ಬದ ಅಂಗವಾಗಿ ಮನೆಗಳಲ್ಲಿ ವಿಶೇಷ ಅಡುಗೆ ಸಿದ್ಧಪಡಿಸಲಾಗಿತ್ತು. ನೆಂಟರಿಷ್ಟರು, ಸ್ನೇಹಿತರನ್ನು ಮನೆಗಳಿಗೆ ಆಹ್ವಾನಿಸಿ ಹೋಳಿಗೆ ಊಟ ಬಡಿಸಿ, ತಾವೂ ಜತೆಗೆ ಊಟ ಮಾಡುವ ಪರಮ ಸಂಸ್ಕೃತಿ ಕಂಡು ಬಂತು.