ಸಾರಾಂಶ
ಗದಗ: ಸೆ. 22 ರಂದು ಪಂಚಮಸಾಲಿ 2ಎ ಮೀಸಲಾತಿಗಾಗಿ ಬೆಳಗಾವಿಯಲ್ಲಿ ವಕೀಲರ ಮಹಾಪರಿಷತ್ ಆಯೋಜನೆ ಮಾಡಲಾಗಿದೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳು ಹೇಳಿದರು.
ಶುಕ್ರವಾರ ಇಲ್ಲಿ ವಕೀಲರ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರಿಗೆ ಈ ವಿವರ ನೀಡಿದರು.ವಕೀಲರ ಮೂಲಕ ಪಂಚಮಸಾಲಿ ಮೀಸಲಾತಿ ಎರಡನೇ ಹಂತದ ಹೋರಾಟ ಪ್ರಾರಂಭಿಸಲಾಗಿದೆ. ಅದರ ಭಾಗವಾಗಿ ಗದಗನಲ್ಲಿ ವಕೀಲರ ಪೂರ್ವಭಾವಿ ಸಭೆ ನಡೆಸಿ ಚರ್ಚಿಸಲಾಗಿದೆ. ನಮ್ಮ ಸಮಾಜದ ಜನರ ನ್ಯಾಯಯುತ ಹಕ್ಕಾಗಿರುವ 2ಎ ಮೀಸಲಾತಿ ಪಡೆಯುವ ನಿಟ್ಟಿನಲ್ಲಿ ವಕೀಲರ ಸಂಘಟನೆ ಕೂಡಾ ಮಾಡಲಾಗಿದೆ. ಈಗಾಗಲೇ ಮಹಿಳಾ ಹಾಗೂ ನೌಕರರ ಸಂಘಟನೆ ಆಗಿದೆ. ಈಗ ರಾಜ್ಯವ್ಯಾಪಿ ಸಮಾಜದ ವಕೀಲರ ಸಂಘಟನೆ ಮಾಡಲಾಗಿದೆ. ಈಗಾಗಲೇ ನಾವೆಲ್ಲರೂ ಹೋರಾಟ ಮಾಡಿದರು ಸದನದಲ್ಲಿ ಶಾಸಕರು ಮಾತನಾಡಲಿಲ್ಲ. ಅದಕ್ಕಾಗಿ ವಕೀಲರ ಸಂಘಟನೆ ಮಾಡಿ ಆ ಮೂಲಕ ಒತ್ತಡ ತರಲು ರೂಪರೇಷೆಗಳನ್ನು ಹಾಕಲಾಗಿದೆ ಎಂದರು.
ಬೆಳಗಾವಿಯಲ್ಲಿ ನಡೆಸುವ ವಕೀಲರ ಪರಿಷತ್ ನ ಮೂಲಕ ಬೃಹತ್ ಹೋರಾಟ ರೂಪಿಸಲಾಗುವುದು, ಕಾನೂನಾತ್ಮಕವಾಗಿ ಯಾವ ರೀತಿಯ ಹೋರಾಟ ಮಾಡಬೇಕು ಎನ್ನುವ ಬಗ್ಗೆ ಚರ್ಚಿಸಲು 10 ಜನ ಹಿರಿಯ ವಕೀಲರ ಸಮಿತಿ ರಚನೆ ಮಾಡಿ ಆ ಮೇಲೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮುಂದಿನ ಹೋರಾಟದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.ಅಧಿವೇಶನದಲ್ಲಿ ಪಂಚಮಸಾಲಿ 2 ಎ ಮೀಸಲಾತಿ ಬಗ್ಗೆ ಮಾತನಾಡಲು ವಿಧಾನಸಭಾ ಅಧ್ಯಕ್ಷರು ಸಮಾಜದ ಶಾಸಕರಿಗೆ ಅವಕಾಶ ನೀಡದೇ ಅವಮಾನ ಮಾಡಿದ್ದಾರೆ. 69 ನೇ ನಿಯಮಾವಳಿಯಡಿ ಮಾತನಾಡಲು ಅವಕಾಶ ಕೊಡಬೇಕಿತ್ತು. ಹಿಂದಿನ ಸರ್ಕಾರದಲ್ಲಿ ಬಿಜೆಪಿಯ ಶಾಸಕರುಗಳು ಸದನದಲ್ಲಿ ಮಾತನಾಡುತ್ತಿದ್ದರು. ಬಿಜೆಪಿ ಅವಧಿಯಲ್ಲಿ ಶಾಸಕರಿಗೆ ಮಾತನಾಡಲು ಅವಕಾಶ ಕೂಡಾ ಕೊಡುತ್ತಿದ್ದರು. ಆದರೆ ಈಗೇಕೆ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ ಶ್ರೀಗಳು, ನಮ್ಮ ಸಮಾಜದ ಶಾಸಕರುಗಳು ಸಭಾತ್ಯಾಗ ಮಾಡಬೇಕಿತ್ತು. ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಬೇಕಿತ್ತು ಎಂದು ಪರೋಕ್ಷವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಶ್ರೀಗಳು ಆಕ್ರೋಶ ವ್ಯಕ್ತ ಪಡಿಸಿದರು.
ಸಭೆಯ ಅಧ್ಯಕ್ಷತೆಯನ್ನು ಎಸ್.ಎಸ್. ಹುರಕಡ್ಲಿ ವಹಿಸಿದ್ದರು. ಹಿರಿಯ ನ್ಯಾಯವಾದಿ ಹೊಸೂರು, ಮಹಾಂತೇಶ ಹೀರೇಮನಿಪಾಟೀಲ, ಹನಮನಾಳ, ಗೊಪ್ಪರಗುಂಪಿ, ಪಂಚಮಸಾಲಿ ಸಮಾಜದ ಯುವ ಘಟಕದ ಅಧ್ಯಕ್ಷ ಅಯ್ಯಪ್ಪ ಅಂಗಡಿ, ಸಂಸಿ, ಮುತ್ತಾಳ, ಪ್ರಕಾಶ್ ಕಣಗಿನಾಳ, ಸಂಗನಾಳ, ಕಲ್ಲಪ್ಪಗೌಡ್ರ, ಕರಿಗೌಡ್ರ, ಮುಳಗುಂದ ಸೇರಿದಂತೆ ಅನೇಕ ನ್ಯಾಯವಾದಿಗಳು ಪಾಲ್ಗೊಂಡಿದ್ದರು.