ಧಾರ್ಮಿಕ ದತ್ತಿ (ತಿದ್ದುಪಡಿ) ವಿಧೇಯಕ ರದ್ದತಿಗೆ ಕರ್ನಾಟಕ ಧಾರ್ಮಿಕ ಸಂಸ್ಥೆಗಳ ಮಹಾಸಂಘ ಒತ್ತಾಯ

| Published : Mar 17 2024, 01:46 AM IST

ಧಾರ್ಮಿಕ ದತ್ತಿ (ತಿದ್ದುಪಡಿ) ವಿಧೇಯಕ ರದ್ದತಿಗೆ ಕರ್ನಾಟಕ ಧಾರ್ಮಿಕ ಸಂಸ್ಥೆಗಳ ಮಹಾಸಂಘ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ದೇವಸ್ಥಾನಗಳ ಪರಂಪರೆಯ ರಕ್ಷಣೆಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದೆ. ಹಾಗಾಗಿ ಈ ಕಲಂಗಳನ್ನು ರದ್ದು ಮಾಡಬೇಕು ಎಂದು ಕರ್ನಾಟಕ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸದಸ್ಯರು ಹಾಸನದಲ್ಲಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಕರ್ನಾಟಕ ದೇವಸ್ಥಾನ, ಮಠ ಆಗ್ರಹ । ಜಿಲ್ಲಾಡಳಿತಕ್ಕೆ ಮನವಿಕನ್ನಡಪ್ರಭ ವಾರ್ತೆ ಹಾಸನ

ಸರ್ಕಾರ ಕರ್ನಾಟಕ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಆಧಿನಿಯಮ ೧೯೯೭ಗೆ ಮತ್ತಷ್ಟು ತಿದ್ದುಪಡಿಯನ್ನು ಮಾಡಿದೆ. ಈ ತಿದ್ದುಪಡಿಯಲ್ಲಿ ಹಲವಾರು ದೋಷಗಳು ಇದ್ದು, ಅವು ದೇವಸ್ಥಾನಗಳ ಪರಂಪರೆಯ ರಕ್ಷಣೆಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದೆ. ಹಾಗಾಗಿ ಈ ಕಲಂಗಳನ್ನು ರದ್ದು ಮಾಡಬೇಕು ಎಂದು ಕರ್ನಾಟಕ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸದಸ್ಯರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಮಹಾಸಂಘದ ಗೋವಿಂದರಾಜು ಮಾಧ್ಯಮದೊಂದಿಗೆ ಮಾತನಾಡಿ, ಕಲಂ ೬೯ ಇ ನಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟದ ಉನ್ನತ ಸಮಿತಿಗಳನ್ನು ರಚನೆ ಮಾಡಲಾಗಿದ್ದು, ಜಿಲ್ಲಾ ಮಟ್ಟದ ಸಮಿತಿಗೆ ೯ ಜನರ ಸದಸ್ಯರ ನೇಮಕಾತಿಯ ಬಗ್ಗೆ ಉಲ್ಲೇಖ ಮಾಡಲಾಗಿದೆ. ಈ ೯ ಜನರಲ್ಲಿ ಪದನಿಮಿತ್ತ ಜಿಲ್ಲಾಧಿಕಾರಿ, ಪೋಲಿಸ್ ಅಧಿಕಾರಿ, ಅರಣ್ಯ ಸಂರಕ್ಷಣಾ ಅಧಿಕಾರಿಗಳು, ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿ, ಲೋಕೋಪಯೋಗಿ ಅಭಿಯಂತರರು ಸೇರಿ ೯ ಜನರ ಸಮಿತಿ ರಚನೆ ಮಾಡಲಾಗಿದೆ. ೧೬ ಜನರ ರಾಜ್ಯ ಮಟ್ಟದ ಸಮಿತಿಯನ್ನು ರಚನೆ ಮಾಡಲಾಗಿದ್ದು, ಅದರಲ್ಲಿ ಸ್ಥಳೀಯ ಶಾಸಕರು, ಸಂಸದರು ಸೇರಿ ವಿವಿಧ ಇಲಾಖೆಗಳ ಕಾರ್ಯದರ್ಶಿಗಳನ್ನು ಸಮಿತಿ ಸದಸ್ಯರನ್ನಾಗಿ ಮಾಡಲಾಗಿದೆ. ಇದರಲ್ಲಿ ಹಿಂದೂಗಳಲ್ಲದವರು ಇರುವ ಸಾಧ್ಯತೆ ಇರುವ ಕಾರಣದಿಂದ ಇದು ಅತ್ಯಂತ ಅಪಾಯಕಾರಿಯಾಗಿದೆ ಎಂದು ಹೇಳಿದರು.

ಕಲಂ ೧೯ ರಲ್ಲಿ ಸಾಮಾನ್ಯ ಸಂಗ್ರಹಣ ನಿಧಿಯ ಉಲ್ಲೇಖ ಮಾಡಲಾಗಿದೆ. ಈ ನಿಧಿಯನ್ನು ಬಳಕೆಯ ವಿಷಯದಲ್ಲಿ ಇತರ ಯಾವುದೇ ಧಾರ್ಮಿಕ ಸಂಸ್ಥೆಗಳಿಗೆ ನೀಡುವ ಬಗ್ಗೆ ಉಲ್ಲೇಖ ಮಾಡಲಾಗಿದೆ. ಇದು ಮುಂದಿನ ದಿನಗಳಲ್ಲಿ ಅನ್ಯಮತೀಯರಿಗೂ ಸಹ ಅನ್ವಯ ಮಾಡುವ ಸಾದ್ಯತೆ ಇದೆ. ಇದು ಅತ್ಯಂತ ಅಪಾಯಕಾರಿಯಾದ ಸುತ್ತೋಲೆಯಾಗಿದೆ. ಕಲಂ ೨೫ ರಲ್ಲಿ ಸಂಯೋಜಿತ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯ ರಚನೆ ಸಂದರ್ಭದಲ್ಲಿ ಹಿಂದೂಗಳಲ್ಲದವರನ್ನು ನೇಮಕ ಮಾಡುವ ಬಗ್ಗೆ ಉಲ್ಲೇಖ ಮಾಡಲಾಗಿದೆ ಎಂದು ದೂರಿದರು.

ಕಲಂ ೧೭ ರಲ್ಲಿ ಯಾವ ಸಂಸ್ಥೆಗಳ ಆದಾಯ ೧ ಕೋಟಿ ರು. ಮೀರಿರುವುದೋ ಅವುಗಳ ೧೦% ನಿವ್ವಳ ಆದಾಯದ ಪ್ರತಿಶತ ಹಣವನ್ನು ೫ ರಿಂದ ೧೦ ಲಕ್ಷ ರು. ಇರುವ ಆದಾಯ ಇರುವ ದೇವಸ್ಥಾನಗಳ ೫ ಶೇಕಡ ಹಣವನ್ನು ಸಾಮಾನ್ಯ ಸಂಗ್ರಹಣ ನಿಧಿಗೆ ವರ್ಗಾವಣೆ ಮಾಡುವ ಬಗ್ಗೆ ಉಲ್ಲೇಖ ಮಾಡಲಾಗಿದೆ. ಇದು ದೇವಸ್ಥಾನಗಳ ಹಣವನ್ನು ದೋಚುವ ಹುನ್ನಾರವಾಗಿದೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಸಾವಿರಾರು ಕೋಟಿ ರುಪಾಯಿ ಮೌಲ್ಯದ ಸರ್ಕಾರಿ ದೇವಸ್ಥಾನಗಳ ಜಮೀನುಗಳು ಖಾಸಗಿಯವರಿಂದ ಒತ್ತುವರಿಯಾಗಿದೆ. ಸುಪ್ರೀಂ ಕೋರ್ಟ್‌ ದೇವಸ್ಥಾನಗಳ ಜಮೀನುಗಳ ರಕ್ಷಣೆ ಮಾಡಲು ಅದೇಶ ನೀಡಿದ ನಂತರವೂ ಸಹ ಇದುವರೆಗೆ ದೇವಸ್ಥಾನಗಳ ಜಮೀನುಗಳ ಸರ್ವೆ ಮಾಡಿ, ಒತ್ತುವರಿ ತೆರವು ಮಾಡಿ ಜಮೀನುಗಳ ರಕ್ಷಣೆ ಮಾಡಿಲ್ಲ. ಕೂಡಲೇ ರಾಜ್ಯ ಸರ್ಕಾರವು ದತ್ತಿ ಇಲಾಖೆಯ ದೇವಸ್ಥಾನಗಳ ಜಮೀನುಗಳನ್ನು ಸಂರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ರಾಘವಚಾರ್, ರಾಜವೆಂಕಟೇಶ್, ಪುಟ್ಟಸ್ವಾಮಿ, ಸೋಮಶೇಖರ್, ಸತೀಶ್, ಸುಜಾತ ಇದ್ದರು.ಹಾಸನ ಜಿಲ್ಲಾಡಳಿತದ ಪ್ರತಿನಿಧಿಗೆ ಕರ್ನಾಟಕ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸದಸ್ಯರು ಮನವಿ ಸಲ್ಲಿಸುತ್ತಿರುವುದು.