ಸಾರಾಂಶ
ಕುಮಟಾ: ಕಳೆದ ಬಾರಿ ಮುರುಡೇಶ್ವರದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಶಿವರಾತ್ರಿ ಉತ್ಸವವನ್ನು ಪ್ರಸಕ್ತ ವರ್ಷ ಶಾಸಕ ದಿನಕರ ಶೆಟ್ಟಿ ಅವರ ಒತ್ತಾಸೆಯಂತೆ ಗೋಕರ್ಣದಲ್ಲಿ ಮಹಾಶಿವರಾತ್ರಿ ಉತ್ಸವವಾಗಿ ಫೆ. ೨೬, ೨೭, ೨೮ರಂದು ಮೂರು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲು ನಿರ್ಧರಿಸಲಾಯಿತು.
ಉಪವಿಭಾಗಾಧಿಕಾರಿ ಕಾರ್ಯಾಲಯದಲ್ಲಿ ಮಂಗಳವಾರ ಕುಮಟಾ ಉಪವಿಭಾಗದ ಅಧಿಕಾರಿಗಳೊಂದಿಗೆ ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ನಿರ್ಣಯಿಸಲಾಯಿತು.ಗೋಕರ್ಣದ ಪಂಚಾಯಿತಿ ಸಭಾಭವನದಲ್ಲಿ ಫೆ. ೧೪ರಂದು ಸಭೆ ನಡೆಸಿ ಮಹಾಶಿವರಾತ್ರಿ ಉತ್ಸವದ ಸಂಪೂರ್ಣ ರೂಪುರೇಷೆಯನ್ನು ಕೈಗೊಳ್ಳಲಾಗುವುದು. ಉತ್ಸವದ ಸಂದರ್ಭದಲ್ಲಿ ಮೂಲ ಸೌಕರ್ಯಗಳ ಸಮರ್ಪಕ ವ್ಯವಸ್ಥೆಯ ಜತೆಗೆ ಪ್ರವಾಸಿಗರಿಗೆ ಆಕರ್ಷಣೆ ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲ ಕ್ರಮ ಕೈಗೊಳ್ಳಲು ಶಾಸಕ ದಿನಕರ ಶೆಟ್ಟಿ ಸೂಚಿಸಿದರು.
ಜಿಪಂ ಮಾಜಿ ಸದಸ್ಯ ಪ್ರದೀಪ ನಾಯಕ ದೇವರಬಾವಿ, ತಾಪಂ ಸದಸ್ಯ ಮಹೇಶ ಶೆಟ್ಟಿ, ಕುಮಾರ ಮಾರ್ಕಾಂಡೆ ಇತರರು ಚರ್ಚೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆ ನೀಡಿದರು.ಸಮುದ್ರ ತಟದಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ಇನ್ನಿತರ ಮನರಂಜನೆಗಳನ್ನು ತರುವ ಬಗ್ಗೆ ನಿರ್ಧರಿಸಲಾಯಿತು. ಸಮುದ್ರದ ಸುರಕ್ಷತೆಗಾಗಿ ಮುಂಜಾಗ್ರತೆ ವಹಿಸಬೇಕಿದ್ದು, ಕರಾವಳಿ ಕಾವಲು ಪಡೆಯ ಮುಂದಾಳತ್ವದಲ್ಲಿ ಕ್ರಮ ಕೈಗೊಳ್ಳಬೇಕು. ಮೀನುಪೇಟೆ ಮಾರ್ಗವನ್ನು ಹೆಚ್ಚಿನ ಸಂಚಾರ ಅಗತ್ಯತೆಗೆ ಸಜ್ಜುಗೊಳಿಸಬೇಕು ಮುಂತಾಗಿ ಸೂಚನೆಗಳನ್ನು ನೀಡಲಾಯಿತು.
ಮುಖ್ಯವಾಗಿ ಪ್ರವಾಸೋದ್ಯಮ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿ ಜಯಂತ ಸಭೆಯಲ್ಲಿ ಹಾಜರಿರಲಿಲ್ಲ. ಕಾರ್ಯಕ್ರಮ ಸಂಯೋಜನೆಯಲ್ಲಿ ಪ್ರವಾಸೋದ್ಯಮ ಇಲಾಖೆ ಪ್ರಮುಖ ಸಹಯೋಗ ನೀಡಬಹುದಾಗಿದೆ.ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರೊಂದಿಗೆ ಸಮಾಲೋಚಿಸಿದ ಬಳಿಕ ಗೋಕರ್ಣದಲ್ಲಿ ನಡೆಯುವ ಸಭೆಯಲ್ಲಿ ಇತರ ಎಲ್ಲ ವಿಚಾರಗಳನ್ನು ಅಂತಿಮ ರೂಪಗೊಳಿಸಿ ಮಹಾಶಿವರಾತ್ರಿ ಉತ್ಸವಕ್ಕೆ ಹೆಚ್ಚಿನ ಪ್ರಚಾರ ನೀಡುವ ಬಗ್ಗೆಯೂ ತೀರ್ಮಾನಿಸಲಾಯಿತು.
ತಹಸೀಲ್ದಾರ್ ಸತೀಶ ಗೌಡ ಸ್ವಾಗತಿಸಿದರು. ಉಪವಿಭಾಗಾಧಿಕಾರಿ ಕಚೇರಿಯ ತಹಸೀಲ್ದಾರ್ ಅಶೋಕ ಭಟ್ ವಂದಿಸಿದರು. ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ಗೋಕರ್ಣ ಪಂಚಾಯಿತಿ ಅಧ್ಯಕ್ಷೆ ಸುಮನಾ ರಾಮ ಗೌಡ, ತಾಪಂ ಇಒ ರಾಜೇಂದ್ರ ಎಲ್. ಭಟ್, ತಾಲೂಕು ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ, ಜಗದೀಶ ಪೂಜಾರಿ, ಭಾರತಿ ಆಚಾರ್ಯ, ಕುಮಟಾ ಹಾಗೂ ಅಂಕೋಲಾ ತಾಲೂಕಿನ ವಿವಿಧ ಅಧಿಕಾರಿಗಳು, ಸಿಬ್ಬಂದಿ ಇದ್ದರು.ಲೈನ್‌ಮನ್ ಆತ್ಮಹತ್ಯೆಗೋಕರ್ಣ: ಹೆಸ್ಕಾಂನ ಲೈನ್‌ಮನ್(ಪವರ್‌ಮನ್) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಾಬು ನಾಯ್ಕ(ಬಾಬಣ್ಣ)(59) ಗೇರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬರ್ಗಿಯ ಕುರಿಗದ್ದೆಯಲ್ಲಿ ಮಂಗಳವಾರ ನಡೆದಿದೆ.ಮೂಲತಃ ಅಂಕೋಲಾ ತಾಲೂಕಿನ ಬಾವಿಕೇರಿ ನಿವಾಸಿಯಾಗಿದ್ದು, ಅನೇಕ ವರ್ಷಗಳಿಂದ ಬರ್ಗಿಯಲ್ಲಿ ಲೈನ್‌ಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.ಮಂಗಳವಾರ ಬೆಳಗ್ಗೆಯಿಂದ ಬರ್ಗಿಯಲ್ಲಿ ಅನೇಕ ಕಡೆ ವಿದ್ಯುತ್ ಲೈನ್ ದುರಸ್ತಿ ಮಾಡಿದ್ದಾರೆ. ಮಧ್ಯಾಹ್ನ ಕುರಿಗದ್ದೆ ಬಳಿ ರಾಷ್ಟ್ರೀಯ ಹೆದ್ದಾರಿ ೬೬ರ ಪಕ್ಕದಲ್ಲಿ ಗೇರು ಮರವೊಂದಕ್ಕೆ ಹಗ್ಗದಿಂದ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಒಂದು ತಿಂಗಳಲ್ಲಿ ಸೇವಾ ನಿವೃತ್ತಿ ಹೊಂದುತ್ತಿದ್ದ ಇವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಗೋಕರ್ಣ ಪೊಲೀಸರು ತೆರಳಿ ಪರಿಶೀಲನೆ ನಡೆಸಿ ಮೃತದೇಹವನ್ನು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಂದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.