ಸಾರಾಂಶ
- 75 ಕ್ವಿಂಟಲ್, 10 ಕೊಪ್ಪರಿಗೆ ಗೋಧಿ ಹುಗ್ಗಿ, 100 ಕ್ವಿಂಟಲ್ ಅಕ್ಕಿ
- ನಾಲ್ಕು ಕೊಪ್ಪರಿಗೆ ಪಲ್ಯ । ಏಳು ಕೊಪ್ಪರಿಗೆ ಸಾಂಬಾರುಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳ2025ರ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ 21 ದಿನಗಳ ಮಹಾದಾಸೋಹದ ಕೊನೆಯ ದಿನವಾದ ಬುಧವಾರ ಅಮವಾಸ್ಯೆಯಂದು 10 ಕೊಪ್ಪರಿಗೆ ಗೋಧಿ ಹುಗ್ಗಿ ಮಾಡಲಾಗುತ್ತಿದೆ.
ಸುಮಾರು ಒಂದುವರೆಯಿಂದ 2 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆಯಲ್ಲಿ ಪ್ರಸಾದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಆಗಮಿಸುವ ಭಕ್ತರನ್ನಾಧರಿಸಿ ಮತ್ತಷ್ಟು ಆಹಾರ ಮಾಡಿಕೊಳ್ಳುವ ಸಿದ್ಧತೆ ಮಾಡಲಾಗಿದೆ.10 ಕೊಪ್ಪರಿಗೆ ಗೋಧಿ ಹುಗ್ಗಿ (75 ಕ್ವಿಂಟಲ್), 100 ಕ್ವಿಂಟಲ್ ಅನ್ನ, ನಾಲ್ಕು ಕೊಪ್ಪರಿಗೆ ಪಲ್ಯ. ಏಳು ಕೊಪ್ಪರಿಗೆ ಸಾಂಬಾರು ಮಾಡಲಾಗುತ್ತದೆ. ಮಂಗಳವಾರ ರಾತ್ರಿ ಪೂರ್ತಿ ಅಡುಗೆಯನ್ನು ಸಿದ್ಧ ಮಾಡಿಕೊಳ್ಳಲಾಗುತ್ತಿದೆ.
5 ಕ್ವಿಂಟಲ್ ಉಪ್ಪಿಟ್ಟು:ಬೆಳಗ್ಗೆ 5 ಕ್ವಿಂಟಲ್ ಉಪ್ಪಿಟ್ಟು ಮಾಡಲಾಗುತ್ತದೆ. ಬೆಳಗ್ಗೆ 5 ಗಂಟೆಯಿಂದ 8 ಗಂಟೆಯವರೆಗೂ ಉಪ್ಪಿಟ್ಟು ಬಡಿಸಲಾಗುತ್ತದೆ. ಇದಾದ ಮೇಲೆ ಗೋಧಿ ಹುಗ್ಗಿ ಪ್ರಸಾದ ವಿತರಣೆ ಪ್ರಾರಂಭವಾಗುತ್ತದೆ.
ದೂರದಿಂದ ಪಾದಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರ ಆಗಮಿಸುವುದರಿಂದ ಬೆಳಗ್ಗೆ 6 ಗಂಟೆಗೆ ಉಪಾಹಾರವನ್ನು ನೀಡಲಾಗುತ್ತದೆ.ಗೋಧಿ ಹುಗ್ಗಿಯನ್ನು ಕಾತರಕಿ-ಗುಡ್ಲಾನೂರು ಗ್ರಾಮಸ್ಥರು ಸಿದ್ಧ ಮಾಡಿದರೆ ಸಾಂಬಾರು ಮಾಡುವ ಹೊಣೆಯನ್ನು ತಾವರಗೇರಾ ಗ್ರಾಮದವರು ನಿಭಾಯಿಸುತ್ತಾರೆ. ಅನ್ನವನ್ನು ಮಂಗಳೂರು ಗ್ರಾಮಸ್ಥರು ಮಾಡುತ್ತಾರೆ.
ಇದಲ್ಲದೆ ಇತರೆ ಕೆಲಸಗಳಿಗಾಗಿ ಬೇರೆ ಬೇರೆ ಗ್ರಾಮಸ್ಥರು ಕಾರ್ಯನಿರ್ವಹಿಸುತ್ತಾರೆ. ಅಡುಗೆ ಮಾಡುವುದಕ್ಕಾಗಿ ಮತ್ತು ಬಡಿಸುವುದಕ್ಕಾಗಿ ಬರೋಬ್ಬರಿ ಸಾವಿರಕ್ಕೂ ಅಧಿಕ ಸೇವಕರು ಹಗಲಿರುಳು ಕಾರ್ಯನಿರ್ವಹಿಸುತ್ತಾರೆ. ಗೋಧಿ ಹುಗ್ಗಿ ಸಿದ್ಧ ಮಾಡುವವರು ರಾತ್ರಿಪೂರ್ತಿ ಕಾರ್ಯ ನಿರ್ವಹಿಸುತ್ತಾರೆ.ಶೇ.25 ಹೆಚ್ಚಳ: ಮಹಾದಾಸೋಹದಲ್ಲಿ ಈ ವರ್ಷ ಕಳೆದ ವರ್ಷಕ್ಕಿಂತ ಶೇ. 25 ರಷ್ಟು ಆಹಾರ ಪದಾರ್ಥಗಳ ಬಳಕೆ ಹೆಚ್ಚಳವಾಗಿದೆ. ಕಳೆದ ವರ್ಷ 60 ಕ್ವಿಂಟಲ್ ಗೋಧಿ ಹುಗ್ಗಿ ಮಾಡಿದ್ದರೆ ಈ ವರ್ಷ 75 ಕ್ವಿಂಟಲ್ ಮಾಡಲಾಗುತ್ತಿದೆ. ಕಳೆದ ವರ್ಷ 75 ಕ್ವಿಂಟಲ್ ಅಕ್ಕಿಯ ಅನ್ನ ಮಾಡಿದ್ದರೆ ಈ ವರ್ಷ 100 ಕ್ವಿಂಟಲ್ ಅಕ್ಕಿಯ ಅನ್ನ ಮಾಡಲಾಗುತ್ತದೆ. ಇದಲ್ಲದೆ ಹೆಚ್ಚುವರಿಯಾಗಿ ಬೇಡಿಕೆಗೆ ತಕ್ಕಂತೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ದಾಸೋಹ ನಿರಂತರ:ಮಹಾದಾಸೋಹ ಅಮಾವಾಸ್ಯೆಯಂದು ಕೊನೆಯಾಗುತ್ತದೆಯಾದರೂ, ನಿರಂತರವಾಗಿ ದಾಸೋಹ ಭವನದಲ್ಲಿ ದಾಸೋಹ ನಡೆಯುತ್ತಲೇ ಇರುತ್ತದೆ. ಪ್ರತಿ ವರ್ಷ ಜಾತ್ರಾಮಹೋತ್ಸವದಿಂದ ಪ್ರಾರಂಭವಾಗುತ್ತಿದ್ದ ಮಹಾದಾಸೋಹವನ್ನು ಈಗ ಐದು ದಿನ ಮೊದಲೇ ಜಾಗೃತಿ ರ್‍ಯಾಲಿಯಿಂದ ಪ್ರಾರಂಭಿಸಲಾಗುತ್ತದೆ. ಹೀಗಾಗಿ, ಜಾತ್ರೆಯ ನಿಮಿತ್ತ ನಡೆಯುವ ಮಹಾದಾಸೋಹ ಬರೋಬ್ಬರಿ 21 ದಿನಗಳ ಕಾಲ ನಡೆಯುತ್ತದೆ.